ADVERTISEMENT

ಕೊರೊನಾ ತಡೆಗೆ ಐನಾಪುರ ಹಾಲು ಉತ್ಪಾದಕರ ಸಂಘದ ಮಾದರಿ ಕೆಲಸ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2020, 10:05 IST
Last Updated 26 ಮಾರ್ಚ್ 2020, 10:05 IST
ಸರದಿ ಸಾಲಿನಲ್ಲಿ ನಿಂತಿರುವ ಹಾಲು ಉತ್ಪಾದಕರು
ಸರದಿ ಸಾಲಿನಲ್ಲಿ ನಿಂತಿರುವ ಹಾಲು ಉತ್ಪಾದಕರು    

ಚಿಂಚೋಳಿ( ಕಲಬುರಗಿ ಜಿಲ್ಲೆ): ದೇಶದಲ್ಲಿ ತಲ್ಲಣ ಹುಟ್ಟಿಸಿದ ಕೊರೊನಾ ಸೊಂಕು ಹರಡುವುದು ತಡೆಯಲು ತಾಲ್ಲೂಕಿನ ಐನಾಪುರ ಹಾಲು ಉತ್ಪಾದಕರ ಸಹಕಾರ ಸಂಘ ವೈಜ್ಞಾನಿಕ ವಿಧಾನ ಅನುಸರಿಸಿ ಮಾದರಿಯಾಗಿದೆ.

ಸಂಘದ ಕಚೇರಿಯ ಒಳಗಡೆ ಹಾಗೂ ಹೊರಗಡೆ ಹಾಲು ಮಾರಾಟಕ್ಕೆ ಬರುವವರು ಒಬ್ಬರನ್ನು ಒಬ್ಬರು ಸ್ಪರ್ಶಿಸದಂತೆ ಮಾಡಲು ಅಂತರ ಕಾಯ್ದುಕೊಳ್ಳುವ ಮೂಲಕ ಕೊರೊನಾ ಹರಡದಂತೆ ಬ್ರೇಕ್ ಹಾಕಿದೆ.

ನಿಷೇಧಾಜ್ಞೆ ಮಧ್ಯೆ ಗ್ರಾಮದ ರೈತರು ಸರತಿ ಸಾಲಿನಲ್ಲಿ ನಿಂತು ಹಾಲು ಮಾರಾಟ ಮಾಡಿ ಹೋಗುತ್ತಿದ್ದಾರೆ. ಬುಧವಾರ ಸಂಜೆಯಿಂದ ಸಂಘದ ಕಟ್ಟಡದ ಒಳಗಡೆ ಹಾಗೂ ಹೊರಗಡೆ ವೃತ್ತಗಳನ್ನು ನಿರ್ಮಿಸಿದ್ದಾರೆ.

ADVERTISEMENT

ಪ್ರತಿ ಮೀಟರ್ ಅಂತರದಲ್ಲಿ ಎರಡು ಅಡಿ ಅಗಲದ ವೃತ್ತಾಕಾರದಲ್ಲಿ ಸುಣ್ಣದ ಗುರುತು ಹಾಕಿ ಹಾಲು ಮಾರಾಟಗಾರರು ವೃತ್ತಗಳಲ್ಲಿ ನಿಂತು ತಮ್ಮ ಹಾಲು ಮಾರಾಟ ಮಾಡಿ ಮನೆಗಳಿಗೆ ಮರಳುತ್ತಿದ್ದಾರೆ. ಸಂಘಕ್ಕೆ ನೂರಾರು ಮಂದಿ ಹಾಲು ಹಾಕುತ್ತಿದ್ದು ನಿತ್ಯ 280 ಲೀಟರ್ ಸಂಗ್ರಹವಾಗುತ್ತಿದೆ ಎನ್ನುತ್ತಾರೆ ಸಂಘದ ಅಧ್ಯಕ್ಷ ನಾಗಶೆಟ್ಟಿ ಮಾಲಿ ಪಾಟೀಲ.

ರೈತರು ಸಂಘಕ್ಕೆ ಮಾರಾಟ ಮಾಡಿದ ಹಾಲು ಬೀದರ್ ಜಿಲ್ಲೆಯ ಕೂಡಾಂಬಲ್ ಹಾಲು ಶಿಥಲಿಕರಣ ಘಟಕಕ್ಕೆ ಕಳುಹಿಸಿ ಅಲ್ಲಿಂದ ಕಲಬುರಗಿಯ ಕೆಎಂಎಫ್ಗೆ ಕಳುಹಿಸಿಕೊಡಲಾಗುತ್ತದೆ ಎಂದರು.

ರೈತರು ತಮ್ಮ ಮನೆಗಳಿಂದ ಸಂಜೆ 7ರಿಂದ 8.30 ಗಂಟೆಗೆ ಹಾಗೂ ಬೆಳಿಗ್ಗೆ 6.30 ರಿಂದ 8 ಗಂಟೆವರೆಗೆ ಹಾಲು ತಂದು ಹಾಕುತ್ತಾರೆ ಜನರ ಸಹಕಾರ ಚನ್ನಾಗಿದೆ ಎಂಬುದು ಕಾರ್ಯದರ್ಶಿ ವೈಜನಾಥ ಕೊಠಾರ ಅವರ ವಿವರಣೆ. ಕೊರೊನಾ ಹರಡದಂತೆ ಏನು ಮಾಡಬೇಕೆಂಬುದು ತೋಚದೇ ಚಿಂತಿತರಾಗಿದ್ದೇವು. ದಿನಸಿ ಅಂಗಡಿಗಳ ಎದುರು ಬಾಕ್ಸ್ ಹಾಕಿರುವುದು ಮಾಧ್ಯಮಗಳಿಂದ ತಿಳಿದಿತ್ತು. ಅದರಂತೆ ಸುರಕ್ಷತಾ ಕ್ರಮ ಕೈಗೊಂಡಿದ್ದೇವೆ ಎಂದರು.

ಸೋಂಕು ಹರಡದಂತೆ ಕಡಿವಾಣ ಹಾಕಲು ಸಂಘ ವೈಜ್ಞಾನಿಕ ವಿಧಾನ ಅನುಸರಿಸಿದ್ದು ಸಾರ್ವಜನಿಕರ ಮೆಚ್ಚುಗೆಗೆ ಕಾರಣವಾಗಿದೆ. 1977ರಿಂದ ಸಂಘ ರೈತರಿಂದ ಹಾಲು ಖರೀದಿಸುತ್ತಿದೆ. ಅಕ್ಟೋಬರ ಸುತ್ತಮುತ್ತ ನಿತ್ಯ 350 ಲೀಟರ್ ಹಾಲು ಸಂಗ್ರಹವಾಗುತ್ತದೆ. ಈಗ ಬೇಸಿಗೆ ಇರುವುದರಿಂದ ಹಾಲು ಕಡಿಮೆಯಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.