ADVERTISEMENT

ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್‌ ಪತ್ನಿ, ಪುತ್ರಿಗೂ ಕೊರೊನಾ ಸೋಂಕು

​ಪ್ರಜಾವಾಣಿ ವಾರ್ತೆ
Published 23 ಜೂನ್ 2020, 20:33 IST
Last Updated 23 ಜೂನ್ 2020, 20:33 IST
ವೈದ್ಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌
ವೈದ್ಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌    

ಬೆಂಗಳೂರು: ವೈದ್ಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌ ಅವರ ಪತ್ನಿ ಮತ್ತು ಪುತ್ರಿಗೂ ಕೊರೊನಾ ಸೋಂಕು ಕಾಣಿಸಿ ಕೊಂಡಿರುವುದರಿಂದ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸೋಮವಾರವಷ್ಟೇ ಸುಧಾಕರ್‌ ತಂದೆಗೆ ಕೊರೊನಾ ಪಾಸಿಟಿವ್‌ ಆಗಿತ್ತು. ಅವರನ್ನು ಮತ್ತು ಮನೆಯ ಅಡುಗೆ ಕೆಲಸದವರನ್ನೂ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಪತ್ನಿ ಮತ್ತು ಪುತ್ರಿಗೆ ಕೋವಿಡ್ ದೃಢಪಟ್ಟಿರುವ ವಿಷಯವನ್ನು ಸುಧಾಕರ್‌ ಟ್ವೀಟ್‌ ಮೂಲಕ ತಿಳಿಸಿದ್ದಾರೆ. ಅವರ ಇಬ್ಬರು ಗಂಡು ಮಕ್ಕಳಿಗೆ ಸೋಂಕಿಲ್ಲದೇ ಇರುವುದು ವರದಿಯಿಂದ ಗೊತ್ತಾಗಿದೆ.

ADVERTISEMENT

‘ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ದೂರವಾಣಿ ಮೂಲಕ ತಮ್ಮ ಜತೆ ಮಾತನಾಡಿ, ಕುಟುಂಬದ ಯೋಗಕ್ಷೇಮ ವಿಚಾರಿಸಿದರು. ಕುಟುಂಬದ ಸದಸ್ಯರು ಬೇಗ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ’ ಎಂದು ಸಚಿವರು ಟ್ವೀಟ್‌ ಮಾಡಿದ್ದಾರೆ.

ಮತ್ತೆ ಕ್ವಾರಂಟೈನ್‌ಗೆ

ತಮ್ಮ ಕುಟುಂಬದ ಸದಸ್ಯರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ಬೆನ್ನಲ್ಲೇ ಸುಧಾಕರ್‌ ಕ್ವಾರಂಟೈನ್‌ಗೆ ಒಳಗಾದರು. ಜತೆಗೆ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಕೋವಿಡ್‌ ಆಸ್ಪತ್ರೆ ನಿರ್ದೇಶಕರ ಜತೆ ವಿಡಿಯೊ ಸಂವಾದ ನಡೆಸಿದರು.

ರೋಗಿಗಳ ದಾಖಲಾತಿ, ಗುಣಮಟ್ಟದ ಆಹಾರ ಮತ್ತು ಸ್ವಚ್ಛತೆಯಲ್ಲಿ ದೂರುಗಳು ಬಾರದಂತೆ ಕಾರ್ಯ ನಿರ್ವಹಿಸಬೇಕು. ಲೋಪಗಳಾದರೆ ಅಥವಾ ದೂರುಗಳು ಬಂದರೆ ನಿರ್ದೇಶಕರನ್ನೇ ಹೊಣೆ ಮಾಡಲಾಗುವುದು ಎಂದು ವಿಕ್ಟೋರಿಯಾ, ರಾಜೀವ್‌ಗಾಂಧಿ ಎದೆರೋಗಗಳ ಆಸ್ಪತ್ರೆ ಮತ್ತು ಬೌರಿಂಗ್‌ ಆಸ್ಪತ್ರೆಗಳ ನಿರ್ದೇಶಕರಿಗೆ ಎಚ್ಚರಿಕೆ ನೀಡಿದರು.

ಮುಂದೆ ದೂರುಗಳು ಬಂದಲ್ಲಿ ಸಂಸ್ಥೆಗಳನ್ನು ನೋಡಿಕೊಳ್ಳಲು ಹಿರಿಯ ಕೆಎಎಸ್‌ ಅಧಿಕಾರಿಗಳನ್ನು ನೇಮಿಸಬೇಕಾಗುತ್ತದೆ. ತಜ್ಞರು ಮತ್ತು ಹಿರಿಯ ವೈದ್ಯರು ಕೋವಿಡ್‌ ರೋಗಿಗಳಿಗೆ ಚಿಕಿತ್ಸೆ ನೀಡಬೇಕು. ಹಿಂಜರಿದರೆ ಕ್ರಮ ತೆಗೆದುಕೊಳ್ಳುವುದು ಅನಿವಾರ್ಯವಾಗುತ್ತದೆ ಎಂದೂ ಹೇಳಿದರು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.