ADVERTISEMENT

ರಾಜ್ಯದಲ್ಲಿ ಕೋವಿಡ್ ಪೀಡಿತರ ಸಂಖ್ಯೆ 51ಕ್ಕೆ, ಒಂದೇ ದಿನ 10 ಜನರಲ್ಲಿ ದೃಢ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಮಾರ್ಚ್ 2020, 15:26 IST
Last Updated 25 ಮಾರ್ಚ್ 2020, 15:26 IST
   

ಬೆಂಗಳೂರು: ರಾಜ್ಯದಲ್ಲಿ ಕೋವಿಡ್-19 ಪೀಡಿತರ ಸಂಖ್ಯೆ 51ಕ್ಕೆ ಏರಿಕೆಯಾಗಿದೆ.ಒಂದೇ ದಿನ 10 ಜನರಲ್ಲಿ ಕೊರೊನಾ ವೈರಸ್ ಪಾಸಿಟಿವ್ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ರಾಜ್ಯದ ವಿವಿಧೆಡೆ 47 ಕೋವಿಡ್-19 ರೋಗಿಗಳು ಪ್ರತ್ಯೇಕ ವಾರ್ಡ್‌ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾರ್ಚ್ 24ರ ಸಂಜೆ 5ರಿಂದ ಮಾರ್ಚ್ 25ರ ಬೆಳಿಗ್ಗೆ 11 ಗಂಟೆಯ ಅವಧಿಯಲ್ಲಿ ಹೊಸದಾಗಿ 10 ಮಂದಿಯಲ್ಲಿ ಕೊರೊನಾ ವೈರಸ್‌ ಪಾಸಿಟಿವ್ ಬಂದಿರುವುದು ಬೆಳಕಿಗೆ ಬಂದಿದೆ.

ಕರ್ನಾಟಕದಲ್ಲಿ ಈವರೆಗೆ ಪತ್ತೆಯಾಗಿರುವ 51 ಪ್ರಕರಣಗಳ ಪೈಕಿ 6 ಪ್ರಕರಣಗಳು ಕೇರಳ ಮೂಲದವರಿಗೆ ಸಂಬಂಧಿಸಿದ್ದಾಗಿದೆ. ವಿದೇಶಗಳಿಂದ ಕರ್ನಾಟಕದ ವಿಮಾನ ನಿಲ್ದಾಣಗಳಿಗೆ ಆಗಮಿಸಿದ್ದ ಅವರು, ರಾಜ್ಯದಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ.

ADVERTISEMENT

ವಿದೇಶಗಳಿಂದ ಬಂದ 1.28 ಲಕ್ಷ ಪ್ರಯಾಣಿಕರನ್ನು ಈವರೆಗೆ ರಾಜ್ಯದಲ್ಲಿ ತಪಾಸಣೆಗೆ ಒಳಪಡಿಸಲಾಗಿದೆ. 840 ಮಂದಿಯನ್ನು ಅವಲೋಕನಕ್ಕಾಗಿ ಪಟ್ಟಿ ಮಾಡಲಾಗಿದೆ, 54 ಮಂದಿಯನ್ನು ಆಸ್ಪತ್ರೆಗಳಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದೆ. ಇಂದು ಒಟ್ಟು 278 ರಕ್ತದ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಇಂದು ಒಟ್ಟು 175 ಪ್ರಕರಣಗಳಲ್ಲಿ ನೆಗೆಟಿವ್ ಫಲಿತಾಂಶ ಬಂದಿದೆ. 10 ಮಂದಿಯಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.

ಬೆಂಗಳೂರಿನ ವಿವಿಧ ಆಸ್ಪತ್ರೆಗಳಿಂದ ಇಂದು ಒಟ್ಟು 15 ಮಂದಿಯನ್ನು ಬಿಡುಗಡೆ ಮಾಡಲಾಯಿತು. ಐವರನ್ನು ಒಳರೋಗಿಗಳಾಗಿ ದಾಖಲಿಸಿಕೊಳ್ಳಲಾಯಿತು. ಈವರೆಗೆ ಬೆಂಗಳೂರಿನಲ್ಲಿ ಒಟ್ಟು 32 ಮಂದಿಯನ್ನು ಪ್ರತ್ಯೇಕವಾಗಿರಿಸಲಾಗಿದೆ. ಉಡುಪಿಯಲ್ಲಿ ಇಂದು 14 ಮಂದಿಯನ್ನು ಒಳರೋಗಿಗಳನ್ನಾಗಿ ದಾಖಲಿಸಿಕೊಳ್ಳಲಾಗಿದೆ. ಜಿಲ್ಲೆಯ ವಿವಿಧೆಡೆ ಒಟ್ಟು 54 ಮಂದಿಯನ್ನು ಪ್ರತ್ಯೇಕವಾಗಿರಿಸಲಾಗಿದೆ. ರಾಜ್ಯದ ವಿವಿಧೆಡೆ ಒಟ್ಟು 54 ಮಂದಿ ಇಂದು ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ.26 ಮಂದಿ ಬಿಡುಗಡೆಯಾಗಿದ್ದಾರೆ. ಒಟ್ಟು 214 ಮಂದಿಯನ್ನು ಪ್ರತ್ಯೇಕವಾಗಿರಿಸಲಾಗಿದೆ.

ಕೆಲವು ಇಲಾಖೆಗಳನ್ನು ಹೊರತುಪಡಿಸಿ ಇತರ ಎಲ್ಲಾ ಸೇವೆಗಳನ್ನು ಮುಂದಿನ 21 ದಿನಗಳವರೆಗೆ ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಆರೋಗ್ಯ ಇಲಾಖೆಯ ವೆಬ್‌ಸೈಟ್‌ನಲ್ಲಿ ಫಸ್ಟ್ ರೆಸ್ಪಾಂಡರ್ ಆಸ್ಪತ್ರೆಗಳ ಪಟ್ಟಿಯನ್ನು ಪ್ರಕಟಿಸಲಾಗಿದೆ. ಸೋಂಕಿತರೊಂದಿಗೆ ಪ್ರಥಮ ಹಾಗೂ ದ್ವಿತೀಯ ಸಂಪರ್ಕ ಹೊಂದಿದವರಿಗೆ ಕ್ವಾರಂಟೈನ್ ಮುದ್ರೆ ಹಾಕಲು ಸರ್ಕಾರ ನಿರ್ದೇಶಿಸಿದೆ.

ರಾಜ್ಯ ಸರ್ಕಾರದ ವೆಬ್‌ಸೈಟ್‌ನಿಂದ (www.karnataka.gov.in) ಕೊರೊನಾ ವಾಚ್ ಆಪ್ ಡೌನ್‌ಲೋಡ್ ಮಾಡಬಹುದಾಗಿದೆ. ಇದರಲ್ಲಿ ಕೋವಿಡ್ ಸೋಂಕಿತರು ಸೋಂಕಿತರಾಗುವ 14 ದಿನಗಳಿಗೆ ಮೊದಲು ಎಲ್ಲೆಲ್ಲಿ ಸಂಚರಿಸಿರುತ್ತಾರೆ ಎಂಬ ಮಾಹಿತಿ ಇರುತ್ತದೆ. ಇದೇ ಆಪ್ ಮೂಲಕ ಫಸ್ಟ್ ರೆಸ್ಪಾಂಡೆಂಟ್ ಆಸ್ಪತ್ರೆಗಳು ಮತ್ತು ಸಹಾಯವಾಣಿ ಸಂಖ್ಯೆ ತಿಳಿಯಬಹುದಾಗಿದೆ.

ಸೋಂಕಿತ ಪ್ರಕರಣಗಳ ವಿವರ

ಪ್ರಕರಣ 42: ಚಿತ್ರದುರ್ಗದ 37 ವರ್ಷದ ಮಹಿಳೆಗಯಾನ ದೇಶಕ್ಕೆ ಹೋಗಿದ್ದರು. ದೆಹಲಿ ಮೂಲಕ ಬೆಂಗಳೂರಿಗೆ ಮಾರ್ಚ್ 20ರಂದು ಬಂದಿದ್ದರು. ದಾವಣಗೆರೆ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಿ, ಚಿಕಿತ್ಸೆ ನೀಡಲಾಗುತ್ತಿದೆ.

ಪ್ರಕರಣ 43: ಬೆಂಗಳೂರಿನ 63 ವರ್ಷದ ಪುರುಷ ಸೌತ್ಅಮೆರಿಕ, ಬ್ರೆಜಿಲ್, ಅರ್ಜಂಟೀನ ಮೂಲಕ ಬೆಂಗಳೂರಿಗೆ ಮಾರ್ಚ್ 19ರಂದು ಬಂದಿದ್ದರು. ಬೆಂಗಳೂರಿನಲ್ಲಿ ಪ್ರತ್ಯೇಕಗೊಳಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಪ್ರಕರಣ 44: ಬೆಂಗಳೂರಿನ 59 ವರ್ಷದ ಈ ಮಹಿಳೆ ಪ್ರಕರಣ 43ರ ಹೆಂಡತಿ.

ಪ್ರಕರಣ 45: ಬೆಂಗಳೂರಿನ 26 ವರ್ಷದ ಪುರುಷ. ಸ್ಪೇನ್‌ನಿಂದ ದುಬೈ ಮೂಲಕ ಬೆಂಗಳೂರಿಗೆ ಮಾರ್ಚ್ 14ರಂದು ಹಿಂದಿರುಗಿದ್ದರು.

ಪ್ರಕರಣ 46: ಬೆಂಗಳೂರಿನ 26 ವರ್ಷದ ಪುರುಷ. ಸ್ಪೇನ್‌ನಿಂದ ದುಬೈ ಮೂಲಕ ಬೆಂಗಳೂರಿಗೆ ಮಾರ್ಚ್ 14ರಂದು ಬಂದಿದ್ದರು.

ಪ್ರಕರಣ 47: ಬೆಂಗಳೂರಿನ 63 ವರ್ಷದ ಮಹಿಳೆ. ಅಥೆನ್ಸ್, ಲಂಡನ್‌ ನಗರಗಳಲ್ಲಿ ಸಂಚರಿಸಿ ಬೆಂಗಳೂರಿಗೆ ಮಾರ್ಚ್ 18ರಂದು ಹಿಂದಿರುಗಿದ್ದರು.

ಪ್ರಕರಣ 48: ಬೆಂಗಳೂರಿನ 69 ವರ್ಷದ ಪುರುಷ. 47ನೇ ಪ್ರಕರಣದ ಮಹಿಳೆಯ ಪತಿ. ಅವರ ಜೊತೆಗೇ ಸಂಚರಿಸಿದ್ದರು.

ಪ್ರಕರಣ 49: ಬೆಂಗಳೂರಿನ 9 ವರ್ಷದ ಬಾಲಕಿ. 47ನೇ ಪ್ರಕರಣದ ಮಹಿಳೆಯ ಮಗಳು.

ಪ್ರಕರಣ 50: ಬೆಂಗಳೂರಿನ 7 ವರ್ಷದ ಬಾಲಕಿ. 47ನೇ ಪ್ರಕರಣದ ಮಹಿಳೆಯ ಮಗಳು.

ಪ್ರಕರಣಗ 51: ಉಡುಪಿಯ 34 ವರ್ಷದ ಪುರುಷ ನಿವಾಸಿ. ದುಬೈನಿಂದ ಮಾರ್ಚ್ 18ರಂದು ಹಿಂದಿರುಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.