ADVERTISEMENT

ಕೋವಿಡ್: ‘ವೈರಾನಾರ್ಮ್’ ಔಷಧ ಪ್ರಯೋಗ

​ಪ್ರಜಾವಾಣಿ ವಾರ್ತೆ
Published 15 ಮೇ 2021, 19:31 IST
Last Updated 15 ಮೇ 2021, 19:31 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ನಗರದ ಖೋಡೆ ಉದ್ಯಮ ಸಮೂಹವು ಗಿಡಮೂಲಿಕೆಗಳನ್ನು ಬಳಸಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ‘ವೈರಾನಾರ್ಮ್’ ಔಷಧವನ್ನು ಸಂಶೋಧಿಸಿದೆ. ಇದನ್ನು ವಿಕ್ಟೋರಿಯಾ ಆಸ್ಪತ್ರೆ ಸೇರಿದಂತೆ ವಿವಿಧೆಡೆ 250 ಮಂದಿ ಕೋವಿಡ್ ಪೀಡಿತರ ಮೇಲೆ ಪ್ರಯೋಗ ನಡೆಸಲಾಗಿದೆ.

ಅಲ್ತಿಯಾ ಡಿ.ಆರ್.ಎಫ್ ಮತ್ತು ಲೈಫ್ ಸೈನ್ಸಸ್‌ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಮೂರು ಹಂತಗಳ ವೈದ್ಯಕೀಯ ಪ್ರಯೋಗವು ಯಶಸ್ವಿಯಾಗಿ ನಡೆದಿದೆ.

ಮಾತ್ರೆಗಳ ರೂಪದಲ್ಲಿರುವ ಈ ಔಷಧವನ್ನು ಖೋಡೆ ಸಮೂಹದ ವ್ಯವಸ್ಥಾಪಕ ನಿರ್ದೇಶಕ ಸ್ವಾಮಿ ಖೋಡೆ, ಸಂಶೋಧಕ ಡಾ.ಕೆ.ಜಿ. ಪದ್ಮನಾಭನ್ ಹಾಗೂಕ್ಲಿನಿಕಲ್ ಟ್ರಯಲ್‌ನ ಪ್ರಧಾನ ಮೇಲ್ವಿಚಾರಕ ಡಾ. ರಾಧಾಶ್ಯಾಮ್ ನಾಯ್ಕ್ ಅವರು ಶನಿವಾರ ಬಿಡುಗಡೆ ಮಾಡಿದರು.

ADVERTISEMENT

‌‘ಈ ಔಷಧವು ದೇಹದಲ್ಲಿ ಬಿಳಿ ರಕ್ತ ಕಣ ಮತ್ತು ದುಗ್ಧಕೋಶದ ಅನುಪಾತವನ್ನು ತಗ್ಗಿಸುವ ಮೂಲಕ ವೈರಾಣುಗಳ ಸಂಖ್ಯೆ ಹೆಚ್ಚುವುದನ್ನು ತಡೆಯುತ್ತದೆ. ಆದ್ದರಿಂದ ಇದನ್ನು ರೋಗ ಲಕ್ಷಣವಿಲ್ಲದ ಹಾಗೂ ಅಲ್ಪ ಪ್ರಮಾಣದ ರೋಗ ಲಕ್ಷಣವಿರುವ ಕೊರೊನಾ ಸೋಂಕಿತರಿಗೆ ಈಗಾಗಲೇ ನೀಡುತ್ತಿರುವ ಚಿಕಿತ್ಸೆಯ ಜೊತೆಗೆ ಹೆಚ್ಚುವರಿಯಾಗಿ ನೀಡಬಹುದು. ಅಲ್ಪ ಪ್ರಮಾಣದ ಸೋಂಕಿನ ಲಕ್ಷಣವು ತೀವ್ರ ಹಂತಕ್ಕೆ ಹೋಗದಂತೆ ತಡೆಯಲು ಇದು ಸಹಕಾರಿಯಾಗಿದೆ’ ಎಂದು ಪದ್ಮನಾಭನ್ ವಿವರಿಸಿದರು.

‘ಪ್ರಯೋಗದ ವೇಳೆ ಕೋವಿಡ್ ಪೀಡಿತರನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿತ್ತು. 125 ಮಂದಿಗೆ ‘ವೈರಾನಾರ್ಮ್’ ಔಷಧ ನೀಡಲಾಯಿತು. ಇನ್ನೊಂದು ಗುಂಪಿನ 125 ಮಂದಿಗೆ ನೀಡಲಿಲ್ಲ. ಇದನ್ನು ಪಡೆದವರು ಉತ್ತಮವಾಗಿ ಚೇತರಿಸಿಕೊಂಡಿರುವುದು ವೈದ್ಯಕೀಯ ವಿಶ್ಲೇಷಣೆಗಳಿಂದ ದೃಢಪಟ್ಟಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.