ADVERTISEMENT

ಕರ್ನಾಟಕ ಶಿಕ್ಷಣ ಇಲಾಖೆ 'ಮಕ್ಕಳ ವಾಣಿ' ಯುಟ್ಯೂಬ್‌ ಚಾನಲ್‌ಗೆ ಉತ್ತಮ ಸ್ಪಂದನೆ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2020, 13:14 IST
Last Updated 28 ಏಪ್ರಿಲ್ 2020, 13:14 IST
ಮಕ್ಕಳ ವಾಣಿ ಯುಟ್ಯೂಬ್‌ ಚಾನಲ್‌
ಮಕ್ಕಳ ವಾಣಿ ಯುಟ್ಯೂಬ್‌ ಚಾನಲ್‌    

ಬೆಂಗಳೂರು: ಮಕ್ಕಳಿಗೆ ಮನರಂಜನೆಯೊಂದಿಗೆ ಕಲಿಕೆಯಲ್ಲಿ ಆಸಕ್ತಿ ಮೂಡಿಸಲು ಅನುವಾಗುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಆರಂಭಿಸಿರುವ 'ಮಕ್ಕಳ ವಾಣಿ' ಯುಟ್ಯೂಬ್‌ ಚಾನಲ್‌ಗೆ ಮಕ್ಕಳಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಚಾನಲ್‌ ಶುರುವಾಗಿ 13 ದಿನಗಳಲ್ಲಿ ಮೆಚ್ಚಿಕೊಂಡು ಸಬ್‌ಸ್ಕ್ರೈಬ್‌ ಆಗಿರುವವರ ಸಂಖ್ಯೆ 50 ಸಾವಿರ ತಲುಪುತ್ತಿದೆ.

ಈಗಾಗಲೇ ಪ್ರಕಟಗೊಂಡಿರುವ ವಿಡಿಯೊಗಳು ಸುಮಾರು 4 ಲಕ್ಷ ವೀಕ್ಷಣೆ ಕಂಡಿವೆ. ನಿತ್ಯ ಬೆಳಿಗ್ಗೆ ಹೊಸ ವಿಡಿಯೊ ಪ್ರಕಟಗೊಳ್ಳುತ್ತಿವೆ. ಶಿಕ್ಷಕರು, ಶಿಕ್ಷಣಾಸಕ್ತರು, ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರಿಂದ ಸಾಕಷ್ಟು ವಿಡಿಯೊಗಳು ಹರಿದು ಬರುತ್ತಿದ್ದು, ಅವುಗಳ ನಾವೀನ್ಯತೆ, ಸೂಕ್ತತೆ ಹಾಗೂ ಸಮಂಜಸತೆಯ ಬಗ್ಗೆ ಪರಿಶೀಲಿಸಿ ಪ್ರಸಾರ ಮಾಡುವ ನಿರ್ಧಾರವನ್ನು ರಚಿಸಲಾಗಿರುವ ಸಂಪಾದಕ ಮಂಡಳಿಯು ತೆಗೆದುಕೊಳ್ಳುತ್ತಿದೆ. ನಿತ್ಯ ಅಪ್‌ಲೋಡ್‌ ಆಗುವ ವಿಡಿಯೊಗಳಿಗೆ ಮಿತಿ ಹಾಕಿಕೊಂಡಿರುವುದಾಗಿ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೊರೊನಾ ವೈರಸ್ ಬಿಕ್ಕಟ್ಟಿನ ಸಮಯದಲ್ಲಿ ಶಾಲಾ ಮಕ್ಕಳಿಗೆ ಉಪಯುಕ್ತವಾಗುವ ರೀತಿಯಲ್ಲಿ ಕಾರ್ಯಕ್ರಮ ರೂಪಿಸಲಾಗಿದೆ. ಏಪ್ರಿಲ್‌ 16ರಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಚಾನಲ್‌ಗೆ ಚಾಲನೆ ನೀಡಿದರು. ಸರ್ಕಾರಿ ಶಾಲೆಯ ಮಕ್ಕಳಿಗಾಗಿ ಯೋಜಿಸಲಾದ ಬೇಸಿಗೆ ಶಿಬಿರಗಳಿಗೆ ಮಕ್ಕಳ ವಾಣಿ ಚಾನಲ್‌ ಪರ್ಯಾಯ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌ ಬಣ್ಣಿಸಿದ್ದರು.

ADVERTISEMENT

ಮಕ್ಕಳ ವಾಣಿ ನಲಿಯೋಣ ಕಲಿಯೋಣ ಚಾನಲ್‌ನಲ್ಲಿ ಪ್ರತಿದಿನ ಬೆಳಗ್ಗೆ 10.30ಕ್ಕೆಪ್ರಸಾರಗೊಳುತ್ತಿದೆ. ಮಕ್ಕಳು ಕ್ರಾಫ್ಟ್‌ಗಳನ್ನು ಗಮನಿಸಿ, ಮನೆಯಲ್ಲಿ ಪ್ರಯತ್ನಿಸಿ ಅವುಗಳ ವಿಡಿಯೊಗಳನ್ನು ಕಳುಹಿಸುತ್ತಿದ್ದಾರೆ. ಲಾಕ್‌ಡೌನ್‌ ಅವಧಿಯ ಬಳಿಕ ಹಾಗೂ ಬೇಸಿಗೆ ರಜೆಯ ನಂತರವೂ ಚಾನಲ್‌ ಮುಂದುವರಿಸುವ ಯೋಜನೆ ಹೊಂದಲಾಗಿದೆ.

ಚಾನಲ್‌ನಲ್ಲಿ ಕತೆ, ಹಾಡು, ಚಿತ್ರಕಲೆ, ಸಂಗೀತ, ಕಿರು ನಾಟಕ, ಕ್ರಾಫ್ಟ್, ಒಗಟು, ಗಾದೆ, ಮ್ಯಾಜಿಕ್, ಪದಬಂಧ, ವಿಜ್ಞಾನ ವಿಶೇಷಗಳು ಸೇರಿದಂತೆ ಮಕ್ಕಳಲ್ಲಿ ಆಸಕ್ತಿ ಮೂಡಿಸುವ ಹಲವು ವಿಷಯಗಳನ್ನು ಒಳಗೊಂಡಿದೆ. ಮಕ್ಕಳು ಹಾಗೂ ಆಸಕ್ತಿ ಹೊಂದಿರುವವರು 5–6 ನಿಮಿಷಗಳ ವಿಡಿಯೊ ಕಳುಹಿಸಿಕೊಡಬಹುದು. ವಿಡಿಯೊಗಳನ್ನು makkalavanissk@gmail.com ವಿಳಾಸಕ್ಕೆ ಇ–ಮೇಲ್‌ ಮಾಡಬಹುದು ಅಥವಾ 94494 32614 ಸಂಖ್ಯೆಗೆ ವಾಟ್ಸ್‌ಆ್ಯಪ್‌ ಮಾಡಬಹುದು.

ಮಕ್ಕಳವಾಣಿ ಯುಟ್ಯೂಬ್ ಚಾನಲ್‌‌ ಲಿಂಕ್‌:https://www.youtube.com/channel/UCDaVbK0F5b7y4hgSZrTwZNg

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.