ADVERTISEMENT

ಸಂಕಷ್ಟದ ಸಮಯದಲ್ಲೇ ಐವರ ಕುಟುಂಬಕ್ಕೆ 20 ಕೆ.ಜಿ. ಅಕ್ಕಿ ಕಡಿತಗೊಳಿಸಿದ ಸರ್ಕಾರ

ಲಾಕ್‌ಡೌನ್‌ ಪರಿಣಾಮ: ಪ್ರಮಾಣ ಹೆಚ್ಚಿಸದೆ ಕಡಿತಗೊಳಿಸಿದ ಸರ್ಕಾರ

ಎಂ.ಮಹೇಶ
Published 1 ಏಪ್ರಿಲ್ 2020, 19:30 IST
Last Updated 1 ಏಪ್ರಿಲ್ 2020, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಳಗಾವಿ: ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್‌) ಕುಟುಂಬಗಳಿಗೆ ಒಮ್ಮೆಲೆ ಎರಡು ತಿಂಗಳ ಪಡಿತರವನ್ನು ರಾಜ್ಯ ಸರ್ಕಾರ ಹಂಚಿಕೆ ಮಾಡಿದೆ. ಆದರೆ, ತಲಾ ಘಟಕಕ್ಕೆ (ವ್ಯಕ್ತಿಗೆ) 2 ಕೆ.ಜಿ. ಅಕ್ಕಿಯನ್ನು ಕಡಿತಗೊಳಿಸಲಾಗಿದೆ!

ಸಂಕಷ್ಟದ ಈ ದುರಿತ ಕಾಲದಲ್ಲಿ, ಪಡಿತರ ಪ್ರಮಾಣವನ್ನು ಹೆಚ್ಚಿಸಿ ಬಡ ಜನರ ಕೈಹಿಡಿಯುವ ಬದಲಿಗೆ ಸಿಗುತ್ತಿದ್ದ ಸೌಲಭ್ಯದಲ್ಲೇ ಮೊಟಕುಗೊಳಿಸಿರುವುದು ಅಚ್ಚರಿ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ.

ಕೊರೊನಾ ವೈರಾಣು ಸೋಂಕು ಹರಡುವುದನ್ನು ತಡೆಯುವ ಉದ್ದೇಶದಿಂದ ಲಾಕ್‌ಡೌನ್‌ ಘೋಷಣೆಯಾಗಿರುವ ಪರಿಣಾಮ ಕೂಲಿ ಮತ್ತಿತರ ಕೆಲಸ ಸಿಗದೆ ಕಂಗಾಲಾಗಿರುವ ಬಡ ಕುಟುಂಬಗಳಿಗೆ 2 ತಿಂಗಳ ಪಡಿತರವನ್ನು ಒಮ್ಮೆಲೇ ನೀಡುವುದಾಗಿ ಸರ್ಕಾರ ಘೋಷಿಸಿತ್ತು. ತಮಗೆ ಬಂದ ಸಂದೇಶದಲ್ಲಿ, ಅಕ್ಕಿ ಪ್ರಮಾಣ ಕಡಿತವಾಗಿರುವ ಅಂಶ ಗಮನಿಸಿದ ಚೀಟಿದಾರರು ದಂಗಾಗಿದ್ದಾರೆ.

ADVERTISEMENT

ತಲಾ 7 ಕೆ.ಜಿ. ಇತ್ತು:ಹಿಂದಿನ ತಿಂಗಳವರೆಗೆ, ಬಿಪಿಎಲ್‌ ಪಡಿತರ ಚೀಟಿದಾರರಿಗೆ ತಲಾ 7 ಕೆ.ಜಿ. ಅಕ್ಕಿ ನೀಡಲಾಗುತ್ತಿತ್ತು. ಇದನ್ನು ಈಗ 5 ಕೆ.ಜಿ.ಗೆ ಇಳಿಸಲಾಗಿದೆ. ಅಂದರೆ ಐವರಿರುವ ಕುಟುಂಬಕ್ಕೆ 20 ಕೆ.ಜಿ. (ಎರಡು ತಿಂಗಳಿಗೆ) ಕಡಿಮೆಯಾಗಲಿದೆ. ಇಂತಹ ಕುಟುಂಬಗಳಿಗೆ, ಹಿಂದಿನ ಲೆಕ್ಕಾಚಾರದಂತೆ ನೋಡಿದರೆ ತಿಂಗಳಿಗೆ 35 ಕೆ.ಜಿ.ಯಂತೆ ಎರಡು ತಿಂಗಳಿಗೆ 70 ಕೆ.ಜಿ. ಅಕ್ಕಿ ಸಿಗಬೇಕಾಗಿತ್ತು. ಇದೇ ನಿರೀಕ್ಷೆಯಲ್ಲಿದ್ದವರಿಗೆ ನಿರಾಸೆಯಾಗಿದೆ.

‘ಹಾಗಾದರೆ, ಒಮ್ಮೆಗೆ ನೀಡುವುದರಿಂದ ಜನರಿಗೆ ಆಗುತ್ತಿರುವ ಪ್ರಯೋಜನವೇನು’ ಎನ್ನುವುದು ಚೀಟಿದಾರರು ಹಾಗೂ ಅಂಗಡಿಕಾರರ ಪ್ರಶ್ನೆಯಾಗಿದೆ. ಕುಟುಂಬದ ಸದಸ್ಯರ ಸಂಖ್ಯೆ ಹೆಚ್ಚಿದ್ದರೆ ಇನ್ನೂ ಹೆಚ್ಚಿಗೆ ಪಡಿತರ ಸಿಗುತ್ತಿತ್ತು. ಒಂದು ಕೈಯಲ್ಲಿ ಕೊಟ್ಟಂತೆ ಮಾಡಿ ಇನ್ನೊಂದು ಕೈಯಲ್ಲಿ ಕಸಿದುಕೊಂಡಿರುವ ಸರ್ಕಾರದ ನಡೆ ಅವರ ಅಸಮಾಧಾನ ಮೂಡಿಸಿದೆ. 20 ಕೆ.ಜಿ. ಅಕ್ಕಿಯ ನಷ್ಟ ಭರಿಸಲು ಇಡೀ ಕುಟುಂಬಕ್ಕೆ ಕೇವಲ 4 ಕೆ.ಜಿ. ಗೋಧಿಯನ್ನಷ್ಟೇ ಕೊಡಲಾಗುತ್ತಿದೆ!

ಅಂತ್ಯೋದಯ ಅನ್ನ ಯೋಜನೆಯ ಪಡಿತರ ಚೀಟಿದಾರರಿಗೆ (ಎಷ್ಟೇ ಮಂದಿ ಇರಲಿ) 70 ಕೆ.ಜಿ. ಅಕ್ಕಿ ಸಿಗಲಿದೆ.

ಗೋಧಿ ಕೊಟ್ಟಿಲ್ಲ:ಅಕ್ಕಿ, ಗೋಧಿ ಹಂಚಿಕೆ ಕುರಿತು ಚೀಟಿದಾರರಿಗೆ ಮಾಹಿತಿ ಬರುತ್ತಿದೆ. ನ್ಯಾಯಬೆಲೆ ಅಂಗಡಿಯವರು ಎತ್ತುವಳಿಯನ್ನೂ ಆರಂಭಿಸಿದ್ದಾರೆ. ಇಲಾಖೆ ಮಾಹಿತಿ ಪ್ರಕಾರ, ಮಂಗಳವಾರ ಸಂಜೆವರೆಗೆ 370 ಅಂಗಡಿಗಳವರು ಗೋದಾಮುಗಳಿಂದ ಅಕ್ಕಿಯನ್ನಷ್ಟೇ ಎತ್ತುವಳಿ ಮಾಡಿದ್ದಾರೆ. ಆದರೆ, ಅವರಿಗೆ ಗೋಧಿ ನೀಡಲಾಗಿಲ್ಲ. ಪರಿಣಾಮ, ಚೀಟಿದಾರರಿಗೆ ಪಡಿತರ ವಿತರಣೆ ಕಾರ್ಯ ಇನ್ನೊಂದೆರಡು ದಿನಗಳು ತಡವಾಗುವ ಸಾಧ್ಯತೆ ಇದೆ. ಗೋಧಿ ದೊರೆಯುವುದೋ ಇಲ್ಲವೋ ಎನ್ನುವ ಅನುಮಾನವೂ ಅಂಗಡಿಕಾರರನ್ನು ಕಾಡುತ್ತಿದೆ.

ಸಂಕಷ್ಟದ ಸಂದರ್ಭ ಎದುರಾಗಿರುವುದರಿಂದಾಗಿ ತಮಗೆ ತೊಗರಿ ಬೇಳೆ, ಅಡುಗೆ ಎಣ್ಣೆಯನ್ನೂ ನೀಡಬಹುದು ಎನ್ನುವ ಬಿಪಿಎಲ್ ಚೀಟಿದಾರರ ನಿರೀಕ್ಷೆ ಹುಸಿಯಾಗಿದೆ.

‘ಲಾಕ್‌ಡೌನ್‌ ಇರುವುದರಿಂದ ಖಾಸಗಿ ವೇ ಬ್ರಿಜ್‌ನವರು ಕಾರ್ಯನಿರ್ವಹಿಸುತ್ತಿಲ್ಲ. ಹೀಗಾಗಿ, ಅಧಿಕಾರಿಗಳ ಒತ್ತಡದ ಮೇರೆಗೆ ಅಕ್ಕಿ ಮೂಟೆಗಳನ್ನು ತೂಕವನ್ನೇ ಮಾಡಿಸದೇ ತಂದಿದ್ದೇವೆ. ಏನಾದರೂ ತೂಕದಲ್ಲಿ ವ್ಯತ್ಯಾಸವಾದರೆ, ಚೀಟಿದಾರರಿಗೆ ಏನೆಂದು ಉತ್ತರ ಹೇಳುವುದು?’ ಎಂದು ನ್ಯಾಯಬೆಲೆ ಅಂಗಡಿಯವರೊಬ್ಬರು ಕೇಳಿದರು.

‘ಪಡಿತರ ವಿತರಣೆಯನ್ನು ಸಮರೋಪಾದಿಯಲ್ಲಿ ಕೈಗೊಳ್ಳಲಾಗುತ್ತಿದೆ. ಎತ್ತುವಳಿ ಆರಂಭವಾಗಿದೆ. ಗೋಧಿಯು ಆಹಾರ ನಿಗಮದ ಗೋದಾಮಿಗೆ ಬಂದಿದೆ. ಅಲ್ಲಿಂದ ಅಂಗಡಿಗಳಿಗೆ ತಲುಪಿಸಲಾಗುವುದು. ಇನ್ನೊಂದೆರಡು ದಿನಗಳಲ್ಲಿ ನ್ಯಾಯಬೆಲೆ ಅಂಗಡಿಗಳಲ್ಲಿ ಅಕ್ಕಿ, ಗೋಧಿ ಎರಡೂ ಲಭ್ಯವಾಗಲಿವೆ’ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಚನ್ನಬಸಪ್ಪ ಕೊಡ್ಲಿ ತಿಳಿಸಿದರು.

ಮನೆಗಳಿಗೆ ತಲುಪಿಸಲು ಸಾಧ್ಯವೇ?

ಮನೆ ಮನೆಗೆ ಪಡಿತರ ತಲುಪಿಸಬೇಕು ಎನ್ನುವುದು ನಗರದ ಶಾಸಕರ ಆಗ್ರಹವಾಗಿದೆ. ಆದರೆ, ಸರ್ಕಾರದಿಂದ ಆದೇಶವಿಲ್ಲ ಎನ್ನುತ್ತಾರೆ ಅಧಿಕಾರಿಗಳು.

ಈ ಬಗ್ಗೆ ಪ್ರತಿಕ್ರಿಯಿಸಿದ ರಾಜ್ಯ ಸರ್ಕಾರಿ ಪಡಿತರ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷ ರಾಜಶೇಖರ ತಳವಾರ, ‘ಅಂಗಡಿಯೊಂದರಲ್ಲಿ 500ರಿಂದ 600 ಕಾರ್ಡ್‌ಗಳಿರುತ್ತವೆ. ಪಡಿತರವನ್ನು ಪರಿಹಾರ ನೀಡಿದಂತೆ ಕೊಡಲಾಗುವುದಿಲ್ಲ. ಎಲ್ಲ ಲೆಕ್ಕ ಇಡಬೇಕಾಗುತ್ತದೆ. ಹೀಗಾಗಿ, ಮನೆಗಳಿಗೆ ತಲುಪಿಸುವುದು ಕಷ್ಟಸಾಧ್ಯ. ಸರ್ಕಾರದ ಆದೇಶವಿಲ್ಲದೆ ಇಂತಹ ಕ್ರಮಗಳಿಗೆ ಮುಂದಾಗುವುದು ಸರಿಯೇ?’ ಎಂದು ಕೇಳಿದರು.

‘ಎಂದಿನಂತೆ ನ್ಯಾಯಬೆಲೆ ಅಂಗಡಿಗಳ ಮೂಲಕವೇ ಪಡಿತರ ವಿತರಿಸಲಾಗುವುದು. ಮನೆ–ಮನೆಗಳಿಗೆ ನೀಡುವಂತೆ ಸರ್ಕಾರದಿಂದ ಯಾವುದೆ ಆದೇಶ ಬಂದಿಲ್ಲ’ ಎಂದು ಇಲಾಖೆಯ ಜಂಟಿ ನಿರ್ದೇಶಕ ಚನ್ನಬಸಪ್ಪ ಕೊಡ್ಲಿ ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.