ADVERTISEMENT

ಇನ್ನೊಮ್ಮೆ ತಪ್ಪಿಸಿಕೊಂಡರೆ ಒಳಗೆ ಕಳಿಸ್ತೀನಿ: ಆನಂದ ಸಿಂಗ್‌ಗೆ ಕೋರ್ಟ್ ಎಚ್ಚರಿಕೆ

ಶಾಸಕ ಆನಂದ ಸಿಂಗ್‌ಗೆ ಕೋರ್ಟ್ ಗಂಭೀರ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2019, 20:35 IST
Last Updated 22 ಮಾರ್ಚ್ 2019, 20:35 IST
ಆನಂದ್‌ ಸಿಂಗ್‌
ಆನಂದ್‌ ಸಿಂಗ್‌   

ಬೆಂಗಳೂರು: ‘ಇನ್ನೊಮ್ಮೆ ತಪ್ಪಿಸಿಕೊಂಡರೆ ಒಳಗೆ ಹಾಕ್ತೀನಿ’ ಎಂದು ಶಾಸಕ ಆನಂದ ಸಿಂಗ್‌ಗೆ ಎಚ್ಚರಿಕೆ ನೀಡಿದ ಜನಪ್ರತಿನಿಧಿಗಳ ಕೋರ್ಟ್‌, ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಒಟ್ಟು ₹ 1,200 ದಂಡ ವಿಧಿಸಿದೆ.

ಅಕ್ರಮ ಗಣಿಗಾರಿಕೆ ನಡೆಸಿದ ಆರೋಪ ಎದುರಿಸುತ್ತಿರುವ ಆನಂದ ಸಿಂಗ್ ತಮ್ಮ ವಿರುದ್ಧದ ಜಾಮೀನು ರಹಿತ ವಾರಂಟ್ ರಿಕಾಲ್ ಮಾಡಿಸಿಕೊಳ್ಳಲು ಇಲ್ಲಿನ, ‘ಶಾಸಕರು-ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಲಯ‘ಕ್ಕೆ ಶುಕ್ರವಾರ ಹಾಜರಾದರು.

ಬೆಳಗಿನ ಕಲಾಪದಲ್ಲಿ ಹಾಜರಾದ ಕೂಡಲೇ ನ್ಯಾಯಾಧೀಶ ರಾಮಚಂದ್ರ ಡಿ.ಹುದ್ದಾರ ಅವರು, ಸಿಂಗ್ ಅವರನ್ನು ಪೊಲೀಸ್ ವಶಕ್ಕೆ ಒಪ್ಪಿಸಿ ಆದೇಶಿಸಿದರು.

ADVERTISEMENT

ಮಧ್ಯಾಹ್ನದ ಕಲಾಪದಲ್ಲಿ ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಂಡಾಗ ಒಂದು ಪ್ರಕರಣದಲ್ಲಿ ₹ 1 ಸಾವಿರ ಹಾಗೂ ಇನ್ನೆರಡು ಪ್ರಕರಣಗಳಲ್ಲಿ ತಲಾ ₹ 100ರಂತೆ ಒಟ್ಟು ₹ 1,200 ದಂಡ ವಿಧಿಸಿ ವಾರಂಟ್‌ ರಿಕಾಲ್‌ ಮಾಡಿದರು. ‘ವಿಚಾರಣೆಗೆ ತಪ್ಪದೇ ಹಾಜರಾಗಬೇಕು’ ಎಂದೂ ತಾಕೀತು ಮಾಡಿದರು.

ಜಾಮೀನುದಾರನಿಗೆ ತರಾಟೆ: ಆನಂದ ಸಿಂಗ್ ಅವರಿಗೆ ಜಾಮೀನು ನೀಡಲು ಬಂದಿದ್ದ ಅವರ ಅಳಿಯ, ಹೊಸಪೇಟೆಯ ಸಂತೋಷ ಕುಮಾರ್ ಸಿಂಗ್ ಕೋರ್ಟ್ ಹಾಲ್‌ನಲ್ಲಿ ತೋರಿದ ಉದ್ಧಟತನದ ವರ್ತನೆಗೆ ಸಿಡಿಮಿಡಿಗೊಂಡನ್ಯಾಯಾಧೀಶರು, ಅವರನ್ನೂ ತರಾಟೆಗೆ ತೆಗೆದುಕೊಂಡರು.

ಜಾಮೀನುದಾರನ ಇತ್ಯೋಪರಿಗಳನ್ನೆಲ್ಲಾ ದಾಖಲಿಸಿಕೊಂಡು ದಸ್ತಾವೇಜು ಪ್ರಕ್ರಿಯೆ ಪೂರೈಸುವ ಮುನ್ನವೇ ಸಂತೋಷ್ ಸಿಂಗ್ ಕೋರ್ಟ್‌ನಿಂದ ಬಿಡುಬೀಸಾಗಿ ಹೊರನಡೆದರು.

ತಕ್ಷಣವೇ ನ್ಯಾಯಾಧೀಶರು, ‘ನಿಮಗೆ ಹೊರ ಹೋಗಲು ಹೇಳಿದ್ದು ಯಾರು, ನೀವೆಲ್ಲಾ ಕೋರ್ಟ್ ಎಂದರೆ ಏನೆಂದು ತಿಳಿದಿದ್ದೀರಿ’ ಎಂದು ಖಾರವಾಗಿ ಪ್ರಶ್ನಿಸಿದರು‌. ಇದಕ್ಕೆ ಸಂತೋಷ್ ಕುಮಾರ್, ‘ನಮ್ಮ ವಕೀಲರು ಹೇಳಿದ್ದಕ್ಕೆ ಹೊರಗೆ ಹೋದೆ’ ಎಂದು ಮತ್ತದೇ ಉದ್ಧಟ ರೀತಿಯಲ್ಲಿ ಉತ್ತರಿಸಿದರು.

ಇದಕ್ಕೆ ಇನ್ನಷ್ಟು ಗರಂ ಆದ ನ್ಯಾಯಾಧೀಶರು, ‘ವಕೀಲರೇ, ಈತನೊಬ್ಬ ಜಾಮೀನುದಾರ ಅಷ್ಟೇ. ಇವರೆಲ್ಲಾ ಕೋರ್ಟ್‌ಗೆ ಹೇಗೆ ಮರ್ಯಾದೆ ಕೊಡುತ್ತಾರೆ ನೋಡಿ‌. ಒಂದಷ್ಟು ಬುದ್ಧಿ ಹೇಳಿ. ಈತ ಹೀಗೆಯೇ ವರ್ತಿಸಿದರೆ ಜಾಮೀನು ರದ್ದು ಮಾಡಿಬಿಡ್ತೇನೆ’ ಎಂದು ಗಂಭೀರ ಎಚ್ಚರಿಕೆ ನೀಡಿದರು.

ಸಿನಿಮಾ ಹಾಲ್‌ ಒಳಗೆ ಬಂದಂತೆ ಬರ್ತಾರೆ’

‘ಇವರೆಲ್ಲಾ ಸಿನಿಮಾ ಮಂದಿರ, ಹೋಟೆಲ್ ಒಳಗೆ ಬಂದವರಂತೆ ಕೋರ್ಟ್‌ಗೆ ಬರುತ್ತಾರೆ’ ಎಂದು ನ್ಯಾಯಾಧೀಶರು ಆನಂದ್‌ ಸಿಂಗ್‌ ಅಳಿಯನ ಬೆವರಿಳಿಸಿದರು.

‘ಇವರೆಲ್ಲಾ ಇಲ್ಲಿ ಬಂದು ಏನೊ ಕೋರ್ಟ್‌ಗೇ ಉಪಕಾರ ಮಾಡಿ ಹೋಗುತ್ತಿದ್ದೇವೆ ಎಂದು ತಿಳಿದಿದ್ದಾರೆ. ನ್ಯಾಯಾಧೀಶರ ಕುರ್ಚಿಗೆ ಒಂದಷ್ಟು ಗೌರವ ಕೊಡುವುದನ್ನು ಇವರಿಗೆ ಕಲಿಸಿರಿ’ ಎಂದು ಜಾಮೀನುದಾರನ ಪರ ವಕೀಲರ ಕಿವಿ ಹಿಂಡಿದರು.

ಎರಡು ತಾಸಿಗೂ ಹೆಚ್ಚು ಕಾಲ ಪೊಲೀಸ್‌ ವಶ

ಬಿಳಿ ಜುಬ್ಬಾ, ಪೈಜಾಮ ಧರಿಸಿ ಬಂದಿದ್ದ ಆನಂದ ಸಿಂಗ್ ಮೇಲ್ನೋಟಕ್ಕೆ ಆರೋಗ್ಯವಾಗಿರುವಂತೆ ಗೋಚರಿಸುತ್ತಿದ್ದರು. ‘ಸರ್ವೈಕಲ್‌ ಕಾಲರ್’ (ಕುತ್ತಿಗೆ ಪಟ್ಟಿ) ಧರಿಸಿದ್ದ ಅವರು, ಎರಡು ತಾಸಿಗೂ ಹೆಚ್ಚು ಕಾಲ ಪೊಲೀಸ್ ವಶದಲ್ಲಿದ್ದರು.

ತಮ್ಮ ಎಂದಿನ ಫ್ರೆಂಚ್‌ ಶೈಲಿಯ ಗಡ್ಡದ ಬದಲಿಗೆ ಪೂರ್ಣ ಗಡ್ಡಧಾರಿಯಾಗಿದ್ದ ಅವರು, ಕೋರ್ಟ್‌ ಹಾಲ್‌ ಹೊರಗೆ ದಫೇದಾರ್ ಕುರ್ಚಿಯಲ್ಲಿ ಕುಳಿತು ವಿಚಾರಣೆಗೆ ಕೂಗಿಸುವುದನ್ನೇ ಕಾಯುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.