ADVERTISEMENT

ಸಾಧಕನಿಗೆ ಧೈರ್ಯವೇ ಸಾಧನ: ರಮೇಶ್ ಅರವಿಂದ್

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ 2022ನೇ ಸಾಲಿನ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2022, 18:09 IST
Last Updated 24 ಆಗಸ್ಟ್ 2022, 18:09 IST
ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳನ್ನು ನಟ ರಮೇಶ್‌ ಅರವಿಂದ್‌ ಅವರು ಮಂಗಳವಾರ ಉದ್ಘಾಟಿಸಿದರು
ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳನ್ನು ನಟ ರಮೇಶ್‌ ಅರವಿಂದ್‌ ಅವರು ಮಂಗಳವಾರ ಉದ್ಘಾಟಿಸಿದರು   

ಬೆಳಗಾವಿ: ವಿದ್ಯಾರ್ಥಿ ಜೀವನದಲ್ಲಿ ಸಾಧನೆಗೆ ಅನೇಕ ಅಡೆತಡೆಗಳು ಬರುತ್ತವೆ. ಆ ಅಡೆತಡೆಗಳನ್ನು ಮೆಟ್ಟಿ ಮುನ್ನುಗ್ಗಬೇಕು. ಸಕಾರಾತ್ಮಕವಾಗಿ ಬೆಳೆಯುತ್ತ ಹೋಗಬೇಕು. ಧೈರ್ಯವು ದೇವರು ಮನುಷ್ಯನಿಗೆ ಕೊಟ್ಟ ಬಹುದೊಡ್ಡ ವರ ಎಂದು ಚಲನಚಿತ್ರ ನಟ ರಮೇಶ್‌ ಅರವಿಂದ್‌ ಕಿವಿಮಾತು ಹೇಳಿದರು.

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಜಿಮ್‍ಖಾನಾ ವತಿಯಿಂದ ನಗರದ ಜೀರಿಗೆ ಸಭಾಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ 2022ನೇ ಸಾಲಿನ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಒಳ್ಳೆಯದನ್ನು ಮಾಡುವುದಕ್ಕೆ, ಸಾಧಿಸುವುದಕ್ಕೆ ಯಾರ ಅನುಮತಿಯೂ ಬೇಕಾಗಿಲ್ಲ. ವಿದ್ಯಾರ್ಥಿ ಜೀವನವು ಬದುಕಿನ ಮಹತ್ವದ ಅವಧಿ. ಈ ಅವಧಿಯಲ್ಲಿಯೇ ವ್ಯಕ್ತಿ ಹಾಗೂ ವ್ಯಕ್ತಿತ್ವ ನಿರ್ಮಾಣವಾಗುತ್ತದೆ. ಮನಸ್ಸನ್ನು ಸಡಿಲವಿಟ್ಟರೆ ವ್ಯಕ್ತಿತ್ವ ನಿರ್ಮಾಣವಾಗುವುದಿಲ್ಲ. ಅದನ್ನು ಜತನದಿಂದ ಕಾಪಾಡಿಕೊಳ್ಳುವುದೇ ಜವಾಬ್ದಾರಿ. ಈ ಜವಾಬ್ದಾರಿಯನ್ನು ಧೈರ್ಯವು ನಿರ್ವಹಿಸುತ್ತದೆ ಎಂದರು.

ADVERTISEMENT

ಜೀವನದಲ್ಲಿ ಅನೇಕ ಸಮಸ್ಯೆಗಳು ಬರುವುದು ಸಹಜ. ಸಮಸ್ಯೆಯ ಮೂಲವನ್ನು ಹಾಗೂ ಸಮಸ್ಯೆ ಬರುವ ಜಾಡನ್ನು ಮೊದಲೇ ಕಂಡುಕೊಂಡು ಸಮಸ್ಯೆ ಸಣ್ಣದಾಗಿದ್ದಾಗಲೇ ಪರಿಹರಿಸಿಕೊಳ್ಳುವುದು ಉತ್ತಮವೆಂದು ಅಭಿಪ್ರಾಯಪಟ್ಟರು.

ಕುಲಪತಿ ಪ್ರೊ.ಎಂ. ರಾಮಚಂದ್ರಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕುಲಸಚಿವ ಪ್ರೊ.ಬಸವರಾಜ ಪದ್ಮಶಾಲಿ, ಪರೀಕ್ಷಾಂಗ ಕುಲಸಚಿವ ಪ್ರೊ.ಶಿವಾನಂದ ಗೊರನಾಳೆ, ಹಣಕಾಸು ಅಧಿಕಾರಿ ಪ್ರೊ.ಡಿ.ಎನ್. ಪಾಟೀಲ, ಜಿಮಖಾನಾ ಅಧ್ಯಕ್ಷ ಪ್ರೊ. ವಿ.ಎಫ್.ನಾಗಣ್ಣವರ, ವಿದ್ಯಾರ್ಥಿ ಕಲ್ಯಾಣ ಅಧಿಕಾರಿ ಪ್ರೊ. ಎಸ್.ಬಿ.ಆಕಾಶ ವೇದಿಕೆ ಮೇಲೆ ಇದ್ದರು.

ಡಾ.ಮಹೇಶ್ವರಿ ಕಾಚಾಪೂರೆ ಸ್ವಾಗತಿಸಿದರು. ಡಾ.ಪಿ. ನಾಗರಾಜ ವಂದಿಸಿದರು. ವಿದ್ಯಾರ್ಥಿ ಪ್ರತಿನಿಧಿಗಳಾದ ಸುಪ್ರಿಯಾ ಗುರವ, ಲಗಮಣ್ಣ ಅಂಕಲಗಿ, ಪರಶುರಾಮ ಮೂಕನವರ, ಶಾಲಿನಿ ದೇಸನೂರ, ವಿಮೋಚನ ಅಸೋದೆ ಇದ್ದರು.

ನಂತರ ರಮೇಶ್ ಅರವಿಂದ್ ಅವರನ್ನು ವಿಶ್ವವಿದ್ಯಾಲಯದ ಹಾಗೂ ಬೆಳಗಾವಿ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.