ADVERTISEMENT

ಸ್ಪೀಕರ್‌ಗೆ ಕೋರ್ಟ್‌ ನಿರ್ದೇಶನ ನೀಡುವಂತಿಲ್ಲ: ವಕೀಲರ ವಾದ

​ಪ್ರಜಾವಾಣಿ ವಾರ್ತೆ
Published 11 ಜುಲೈ 2019, 10:23 IST
Last Updated 11 ಜುಲೈ 2019, 10:23 IST
   

ನವದೆಹಲಿ: ಹತ್ತು ಮಂದಿ ಶಾಸಕರ ರಾಜೀನಾಮೆಯನ್ನು ಇತ್ಯರ್ಥ ಮಾಡುವಂತೆ ನ್ಯಾಯಾಲಯ ಸ್ಪೀಕರ್‌ಗೆ ನಿರ್ದೇಶನ ನೀಡುವಂತಿಲ್ಲ ಎಂದು ಸ್ಪೀಕರ್‌ ಪರವಾಗಿ ವಕೀಲ ಅಭಿಷೇಕ್‌ ಮನು ಸಿಂಘ್ವಿ ಅವರು ಸುಪ್ರೀಂ ಕೋರ್ಟ್‌ಗೆ ಗುರುವಾರ ಮನವರಿಕೆ ಮಾಡಿದ್ದಾರೆ.

‘ಗುರುವಾರ ಸಂಜೆ 6ರ ಒಳಗಾಗಿ ಶಾಸಕರು ಸ್ಪೀಕರ್‌ ಎದುರು ಹಾಜರಾಗಬೇಕು. ರಾಜೀನಾಮೆ ಇತ್ಯರ್ಥದ ವಿಚಾರವಾಗಿ ಸ್ಪೀಕರ್‌ ಕೈಗೊಂಡ ಕ್ರಮದ ಕುರಿತು ಶುಕ್ರವಾರ ತಿಳಿಸಬೇಕು,’ ಎಂದು ಮುಖ್ಯನ್ಯಾಯಮೂರ್ತಿ ರಂಜನ್‌ ಗೊಗೊಯಿ ಅವರ ನೇತೃತ್ವದಸುಪ್ರೀಂ ಕೋರ್ಟ್‌ ಪೀಠ ಆದೇಶ ನೀಡಿದ್ದ ಬೆನ್ನಿಗೇ ಗುರುವಾರ ಮಧ್ಯಾಹ್ನ 2ಗಂಟೆಗೆ ಸ್ಪೀಕರ್‌ ಅವರೂ ಸುಪ್ರೀಂ ಕೋರ್ಟ್‌ನಲ್ಲಿ ಪ್ರತಿ ಅರ್ಜಿಯೊಂದನ್ನು ದಾಖಲಿಸಿದರು. ‘ಕಾಲ ಮಿತಿಯೊಳಗೆ ಅರ್ಜಿ ಇತ್ಯರ್ಥ ಅಸಾಧ್ಯ. ಅರ್ಜಿ ಇತ್ಯರ್ಥದ ಕುರಿತು ಸುಪ್ರೀಂ ಕೋರ್ಟ್‌ಸ್ಪೀಕರ್‌ಗೆ ಆದೇಶ ನೀಡುವಂತಿಲ್ಲ,’ ಎಂದು ಸ್ಪೀಕರ್‌ ಪರವಕೀಲರು ವಾದಿಸಿದರು.

‘ಶಾಸಕರು ಸ್ವಯಂ ಪ್ರೇರಣೆಯಿಂದ ರಾಜೀನಾಮೆ ನೀಡಿದ್ದಾರೆಯೇ ಇಲ್ಲವೇ ಎಂಬುದನ್ನು ಮಧ್ಯರಾತ್ರಿ 12ರ ಒಳಗಾಗಿ ಇತ್ಯರ್ಥ ಮಾಡಲು ಸಾಧ್ಯವಿಲ್ಲ. ವಿಚಾರಣೆ ಬಳಿಕವೇ ರಾಜೀನಾಮೆ ಅಂಗೀಕರಿಸಬೇಕು. ಜತೆಗೇ, ಶಾಸಕರವಿರುದ್ಧ ಅನರ್ಹತೆ ಅರ್ಜಿ ಸಲ್ಲಿಕೆಯಾಗಿದ್ದು, ಮೊದಲು ಅದನ್ನು ವಿಚಾರಣೆ ಮಾಡಬೇಕು,’ ಎಂದು ಸ್ಪೀಕರ್‌ ಕೋರ್ಟ್‌ಗೆ ತಿಳಿಸಿದ್ದಾರೆ.

ADVERTISEMENT

ಶಾಸಕರ ರಾಜೀನಾಮೆಯನ್ನು ಇತ್ಯರ್ಥ ಮಾಡಲು ಹೆಚ್ಚಿನ ಸಮಯವಕಾಶದ ಅಗತ್ಯವಿದೆ ಎಂದು ಸ್ಪೀಕರ್‌ ಗುರುವಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದರು. ಆದರೆ, ಸುಪ್ರೀಂ ಕೋರ್ಟ್‌ ಅರ್ಜಿಯ ವಿಚಾರಣೆಯನ್ನು ನಾಳೆಗೆ ಮುಂದೂಡಿತು. ‘ನಾಳೆ ಬೆಳಗ್ಗೆ ಕೋರ್ಟ್‌ ಈ ಅರ್ಜಿಯನ್ನು ನ್ಯಾಯಾಲಯ ವಿಚಾರಣೆ ಮಾಡಲಿದೆ,’ ಎಂದು ಹೇಳಿತು.

ಜತೆಗೇ, ನ್ಯಾಯಾಲಯ ಈಗಾಗಲೇ ಆದೇಶ ಮಾಡಿದೆ. ಮುಂದೆ ಏನು ಮಾಡಬೇಕು ಎಂಬುದುಸ್ಪೀಕರ್‌ಗೆ ಬಿಟ್ಟ ವಿಚಾರ. ಈ ಅರ್ಜಿಯನ್ನು ನಾಳೆ ವಿಚಾರಣೆ ಮಾಡಲಾಗುವುದು ಎಂದು ನ್ಯಾಯಾಲಯ ಹೇಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.