ADVERTISEMENT

ಚಿನ್ನಸ್ವಾಮಿ ಸ್ಟೇಡಿಯಂ ಬಾಂಬ್‌ ಸ್ಫೋಟ: ದಂಡ ಮಾರ್ಪಾಡು

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2019, 20:09 IST
Last Updated 23 ಫೆಬ್ರುವರಿ 2019, 20:09 IST
ಚಿನ್ನಸ್ವಾಮಿ ಸ್ಟೇಡಿಯಂ
ಚಿನ್ನಸ್ವಾಮಿ ಸ್ಟೇಡಿಯಂ    

ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂ ಬಳಿ 2010ರಲ್ಲಿ ನಡೆದಿದ್ದ ಬಾಂಬ್‌ ಸ್ಫೋಟ ಪ್ರಕರಣದ ಮೂವರು ಆರೋಪಿಗಳಿಗೆ ಎನ್‌ಐಎ ವಿಶೇಷ ನ್ಯಾಯಾಲಯ ವಿಧಿಸಿದ್ದ ಭಾರಿ ಮೊತ್ತದ ದಂಡವನ್ನು ಹೈಕೋರ್ಟ್‌ ಮಾರ್ಪಾಡು ಮಾಡಿ ಆದೇಶಿಸಿದೆ.

ಈ ಕುರಿತಂತೆ ಅಪರಾಧಿಗಳಾದ ಬಿಹಾರದ ದರ್ಭಾಂಗ ಜಿಲ್ಲೆಯ ಗೌಹರ್‌ ಅಜೀಜ್‌ ಖೊಮೇನಿ, ಮೊಹಮದ್‌ ಕಫೀಲ್‌ ಅಖ್ತರ್‌ ಅಲಿಯಾಸ್‌ ಕಫೀಲ್‌ ಮತ್ತು ಮಧುಬನಿ ಜಿಲ್ಲೆಯ ಕಮಲ್‌ ಹಸನ್‌ ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಮೂರ್ತಿ ಕೆ.ಎನ್‌.ಫಣೀಂದ್ರ ಹಾಗೂ ನ್ಯಾಯಮೂರ್ತಿ ಕೆ.ನಟರಾಜನ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಭಾಗಶಃ ಮಾನ್ಯ ಮಾಡಿದೆ.

‘ಆರೋಪಿಗಳು ಪ್ರಕರಣದಲ್ಲಿನೇರ ಭಾಗಿಯಾಗಿದ್ದಾರೆ’ ಎಂಬ ಪ್ರಾಸಿಕ್ಯೂಷನ್‌ ವಾದವನ್ನು ಮನ್ನಣೆ ಮಾಡಿದ್ದ ವಿಚಾರಣಾ ನ್ಯಾಯಾಲಯ, ಸ್ಫೋಟಕ ವಸ್ತುಗಳ ಕಾಯ್ದೆ–1908, ಸಾರ್ವಜನಿಕ ಸ್ವತ್ತಿಗೆ ಹಾನಿ ಪ್ರತಿಬಂಧಕ ಕಾಯ್ದೆ–1984, ಕಾನೂನುಬಾಹಿರ ಚಟುವಟಿಕೆ ಪ್ರತಿಬಂಧಕ ಕಾಯ್ದೆ–1967 ಹಾಗೂ ಭಾರತೀಯ ದಂಡ ಸಂಹಿತೆ ಕಾಯ್ದೆಯ ವಿವಿಧ ಕಲಂಗಳ ಅಡಿಯಲ್ಲಿ ಅಪರಾಧಿಗಳಿಗೆ ತಲಾ ₹ 7 ಲಕ್ಷಕ್ಕೂ ಹೆಚ್ಚಿನ ಮೊತ್ತದ ದಂಡ ವಿಧಿಸಿತ್ತು. ದಂಡ ಪಾವತಿಸದೇ ಹೋದರೆ ಜೈಲು ಶಿಕ್ಷೆ ಅನುಭವಿಸುವಂತೆ 2018ರ ಜುಲೈ 9ರಂದು ಆದೇಶಿಸಿತ್ತು.

ADVERTISEMENT

ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ‘ನಾವು ಬಡವರಿದ್ದೇವೆ. ವಿಚಾರಣಾ ನ್ಯಾಯಾಲಯ ವಿಧಿಸಿರುವ ದಂಡ ಪಾವತಿಸುವುದು ನಮಗೆ ಕಷ್ಟವಿದೆ. ಒಂದು ವೇಳೆ ಪಾವತಿಸದೇ ಹೋದರೆ, ಅನುಭವಿಸಬೇಕಾದ ಜೈಲು ಶಿಕ್ಷೆ 22 ವರ್ಷಗಳಷ್ಟಿದೆ. ಆದ್ದರಿಂದ ಈ ಆದೇಶವನ್ನು ಮಾರ್ಪಾಡು ಮಾಡಬೇಕು’ ಎಂದು ಕೋರಿದ್ದರು. ಇದಕ್ಕೆ ವಿನಾಯ್ತಿ ತೋರಿರುವ ನ್ಯಾಯಪೀಠ ದಂಡದ ಮೊತ್ತದಲ್ಲಿ ಶೇ 65ರಷ್ಟು ಕಡಿಮೆ ಮಾಡಿದೆ.

2010ರ ಏಪ್ರಿಲ್‌ 17ರಂದು ಮಧ್ಯಾಹ್ನ 3.05 ನಿಮಿಷಕ್ಕೆ ಕೆಎಸ್‌ಸಿಎ ಸ್ಟೇಡಿಯಂನ ಗೇಟ್‌ ಸಂಖ್ಯೆ 12ರಲ್ಲಿ ಬಾಂಬ್‌ ಸ್ಫೋಟ ಸಂಭವಿಸಿತ್ತು. ಘಟನೆಯಲ್ಲಿ 15ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದರು. ಪ್ರಕರಣದಲ್ಲಿ ಇಂಡಿಯನ್‌ ಮುಜಾಹಿದ್ದೀನ್‌ ಉಗ್ರ ಸಂಘಟನೆಯ ಯಾಸೀನ್‌ ಭಟ್ಕಳ್‌ ಸೇರಿದಂತೆ ಒಟ್ಟು 14 ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.