ADVERTISEMENT

Covid-19 Karnataka Updates: 9.36 ಲಕ್ಷ ದಾಟಿದ ಕೋವಿಡ್‌ ಸೋಂಕಿತರ ಸಂಖ್ಯೆ

​ಪ್ರಜಾವಾಣಿ ವಾರ್ತೆ
Published 24 ಜನವರಿ 2021, 19:06 IST
Last Updated 24 ಜನವರಿ 2021, 19:06 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ರಾಜ್ಯದಲ್ಲಿ ಭಾನುವಾರ 537 ಕೋವಿಡ್‌ ಪ್ರಕರಣಗಳು ವರದಿಯಾಗಿವೆ. ಇಲ್ಲಿಯವರೆಗೆ ಸೋಂಕಿಗೀಡಾದವರ ಒಟ್ಟು ಸಂಖ್ಯೆ 9.36 ಲಕ್ಷ ದಾಟಿದೆ.

ಸೋಂಕಿತರಲ್ಲಿ ಮತ್ತೆ ನಾಲ್ವರು ಮೃತಪಟ್ಟಿದ್ದಾರೆ. ಈವರೆಗೆ ಸಾವಿಗೀಡಾದವರ ಸಂಖ್ಯೆ 12,197ಕ್ಕೆ ತಲುಪಿದೆ. ಕೋವಿಡ್ ಪೀಡಿತರಲ್ಲಿ 401 ಮಂದಿ ಗುಣಮುಖರಾಗಿದ್ದಾರೆ. ಇದರಿಂದಾಗಿ ಕಾಯಿಲೆಯಿಂದ ಚೇತರಿಸಿಕೊಂಡವರ ಸಂಖ್ಯೆ 9.16 ಲಕ್ಷಕ್ಕೆ ತಲುಪಿದೆ. ಸಕ್ರಿಯ ಪ್ರಕರಣಗಳು ಏರಿಕೆ ಕಂಡಿದ್ದು, ಸದ್ಯ 7,510 ಸೋಂಕಿತರು ಆಸ್ಪತ್ರೆ ಸೇರಿದಂತೆ ವಿವಿಧೆಡೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಅವರಲ್ಲಿ 155 ಮಂದಿ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಇದ್ದಾರೆ.

ರಾಜ್ಯದಲ್ಲಿ ಒಂದೇ ದಿನ 81 ಸಾವಿರ ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಈ ತಿಂಗಳು 24 ದಿನಗಳಲ್ಲಿ 23.70 ಲಕ್ಷ ಮಂದಿ ಕೋವಿಡ್‌ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಈವರೆಗೆ ರಾಜ್ಯದಲ್ಲಿ 1.65 ಕೋಟಿ ಮಂದಿ ಪರೀಕ್ಷೆಗೆ ಒಳಪಟ್ಟಿದ್ದಾರೆ. ಕಳೆದ ನ.25ರಿಂದ ಈವರೆಗೆ ಬ್ರಿಟನ್‌ನಿಂದ ರಾಜ್ಯಕ್ಕೆ 7,631 ಮಂದಿ ಬಂದಿದ್ದಾರೆ.

ADVERTISEMENT

ಬೆಂಗಳೂರಿನಲ್ಲಿ 306 ಮಂದಿ ಕೋವಿಡ್ ಪೀಡಿತರಾಗಿದ್ದು, ಸೋಂಕಿತರ ಸಂಖ್ಯೆ 3.97 ಲಕ್ಷಕ್ಕೆ ತಲುಪಿದೆ. ಮೈಸೂರಿನಲ್ಲಿ ಮತ್ತೆ 27 ಪ್ರಕರಣಗಳು ವರದಿಯಾಗಿವೆ. ಅಲ್ಲಿ ಸೋಂಕಿತರ ಸಂಖ್ಯೆ 53,229ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಇಬ್ಬರು, ದಕ್ಷಿಣ ಕನ್ನಡ ಮತ್ತು ಮೈಸೂರಿನಲ್ಲಿ ತಲಾ ಒಂದು ಮರಣ ಪ್ರಕರಣ ಹೊಸದಾಗಿ ವರದಿಯಾಗಿದೆ.

ಲಸಿಕೆ: ಶೇ 31ರಷ್ಟು ಮಂದಿ ಹಾಜರಿ

ಕೋವಿಡ್ ಲಸಿಕೆ ವಿತರಣೆ ಅಭಿಯಾನವು ಬೆಂಗಳೂರು, ಬಳ್ಳಾರಿ ಸೇರಿದಂತೆ ಕೇವಲ ನಾಲ್ಕು ಜಿಲ್ಲೆಗಳಲ್ಲಿ ಮಾತ್ರ ಭಾನುವಾರ ನಡೆದಿದೆ. ನಿಗದಿಪಡಿಸಲಾಗಿದ್ದ ಫಲಾನುಭವಿಗಳಲ್ಲಿ ಶೇ 31ರಷ್ಟು ಮಂದಿ ಮಾತ್ರ ಹಾಜರಾಗಿದ್ದರು. ಉಳಿದವರು ಹಿಂಜರಿಗೆ, ಅನಾರೋಗ್ಯ, ರಜೆ ಸೇರಿದಂತೆ ವಿವಿಧ ಕಾರಣಗಳಿಂದ ಗೈರಾಗಿದ್ದರು.

76 ಕೇಂದ್ರಗಳಿಂದ 6,504 ಫಲಾನುಭವಿಗಳನ್ನು ಗುರುತಿಸಲಾಗಿತ್ತು. ಅದರಲ್ಲಿ 2,015 ಮಂದಿ ಮಾತ್ರ ಲಸಿಕೆ ಪಡೆದುಕೊಂಡಿದ್ದಾರೆ. ಬೆಂಗಳೂರಿನಲ್ಲಿ 35 ಕೇಂದ್ರಗಳಿಂದ 3,049 ಮಂದಿ, ಬಳ್ಳಾರಿಯಲ್ಲಿ 10 ಕೇಂದ್ರಗಳಿಂದ 1,200 ಮಂದಿ, ಧಾರವಾಡದಲ್ಲಿ 26 ಕೇಂದ್ರಗಳಿಂದ 2,155 ಮಂದಿ ಹಾಗೂ ಗದಗದಲ್ಲಿ ಎರಡು ಕೇಂದ್ರಗಳಿಂದ 100 ಮಂದಿ ಲಸಿಕೆ ಹಾಕಿಸಿಕೊಂಡಿದ್ದಾರೆ. ಇವರಲ್ಲಿ ಯಾರಲ್ಲಿಯೂ ತೀವ್ರ ಮತ್ತು ಗಂಭೀರ ಸ್ವರೂಪದ ಅಡ್ಡ ಪರಿಣಾಮಗಳು ಕಾಣಿಸಿಕೊಂಡಿಲ್ಲ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಸುತ್ತೋಲೆ ವಾಪಸ್‌

ರಾಜ್ಯದಲ್ಲಿನ ವಿಮಾನ ನಿಲ್ದಾಣಗಳ ಎಲ್ಲ ಸಿಬ್ಬಂದಿಗೆ ಕೋವಿಡ್ ಲಸಿಕೆ ನೀಡಬೇಕೆಂದು ಆರೋಗ್ಯ ಇಲಾಖೆಯು ಶನಿವಾರ ಸುತ್ತೋಲೆ ಹೊರಡಿಸಿತ್ತು. ಭಾನುವಾರ ಈ ಸುತ್ತೋಲೆಯನ್ನು ಹಿಂಪಡೆದುಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.