ADVERTISEMENT

Covid-19 Karnataka Update | ರಾಜ್ಯದಲ್ಲಿ 51 ಸಾವಿರ ದಾಟಿದ ಸೋಂಕಿತರ ಸಂಖ್ಯೆ

4,169 ಹೊಸ ಪ್ರಕರಣ ದೃಢ, 104 ಮಂದಿ ಸಾವು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಜುಲೈ 2020, 19:58 IST
Last Updated 16 ಜುಲೈ 2020, 19:58 IST
ಕೊರೊನಾ ವೈರಸ್ (ಪ್ರಾತಿನಿಧಿಕ ಚಿತ್ರ)
ಕೊರೊನಾ ವೈರಸ್ (ಪ್ರಾತಿನಿಧಿಕ ಚಿತ್ರ)   
""

ಬೆಂಗಳೂರು: ಬೆಂಗಳೂರಿನಲ್ಲಿ 2,344 ಸೇರಿದಂತೆ ರಾಜ್ಯದಲ್ಲಿ 4,169 ಮಂದಿಗೆ ಕೋವಿಡ್ ಸೋಂಕು ತಗುಲಿರುವುದು ಗುರುವಾರ ದೃಢಪಟ್ಟಿದೆ. ಸೋಂಕಿತರಾದವರಲ್ಲಿ ಮತ್ತೆ 104 ಮಂದಿ ಮೃತಪಟ್ಟಿದ್ದಾರೆ.

ದೇಶದ ಪ್ರಮುಖ ನಗರಗಳಲ್ಲಿ ಸೋಂಕಿತರ ಸಂಖ್ಯೆ ಏರುಗತಿ ಕಂಡಂತೆ ಕರ್ನಾಟಕದಲ್ಲೂ ಹರಡುವಿಕೆ ವೇಗ ಪಡೆದಿದೆ. ಮರಣ ಪ್ರಮಾಣ ಶೇ 2.01ಕ್ಕೆ ತಲುಪಿದೆ. ಕೇವಲ 16 ದಿನಗಳಲ್ಲಿ 36,182 ಮಂದಿ ಕೋವಿಡ್ ಪೀಡಿತರಾಗಿದ್ದಾರೆ. ಇದೇ ಅವಧಿಯಲ್ಲಿ 788 ಮಂದಿ ಸತ್ತಿದ್ದಾರೆ. ಕರ್ನಾಟಕದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 50 ಸಾವಿರದ ಗಡಿ (51,422) ಹಾಗೂ ಮೃತಪಟ್ಟವರ ಸಂಖ್ಯೆ ಸಾವಿರದ ಗಡಿ (1,032) ದಾಟಿದೆ.

ಒಂದೇ ದಿನ 23,451 ಮಂದಿಗೆ ಕೋವಿಡ್ ಪರೀಕ್ಷೆ ಮಾಡಲಾಗಿದೆ. ಈವರೆಗೆ ಒಂದು ದಿನ ನಡೆಸಿದ ಗರಿಷ್ಠ ಪರೀಕ್ಷೆಗಳು ಇವಾಗಿವೆ. ಪ್ರಕರಣಗಳ ಸಂಖ್ಯೆಯ ಜತೆಗೆ ಚೇತರಿಸಿಕೊಳ್ಳುವವರ ಸಂಖ್ಯೆ ಕೂಡ ಹೆಚ್ಚುತ್ತಿದ್ದು, ಬೆಂಗಳೂರಿನಲ್ಲಿ 497ಸೇರಿದಂತೆ ರಾಜ್ಯದಲ್ಲಿ 1,263 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ಇದರಿಂದಾಗಿ ಚೇತರಿಸಿಕೊಂಡವರ ಸಂಖ್ಯೆ 19,729ಕ್ಕೆ ತಲುಪಿದೆ. ಚಿಕಿತ್ಸೆ ಪಡೆದುಕೊಳ್ಳುತ್ತಿರುವ ರೋಗಿಗಳ ಪೈಕಿ 539 ಮಂದಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ADVERTISEMENT

ಬೆಂಗಳೂರಿನಲ್ಲಿ ಕೇವಲ 48 ಗಂಟೆಗಳಲ್ಲಿ 4,279 ಮಂದಿ ಕೋವಿಡ್ ಪೀಡಿತರಾಗಿದ್ದಾರೆ. ದಕ್ಷಿಣ ಕನ್ನಡ (238), ಧಾರವಾಡ (176), ವಿಜಯಪುರ (144), ಮೈಸೂರು (130), ಕಲಬುರ್ಗಿ (123), ಉಡುಪಿ (113), ರಾಯಚೂರು (101), ಬೆಳಗಾವಿ (92) ಜಿಲ್ಲೆಯಲ್ಲಿಯೂ ಅಧಿಕ ಪ್ರಕರಣಗಳು ಹೊಸದಾಗಿ ವರದಿಯಾಗಿವೆ.

ಬೆಂಗಳೂರಿನಲ್ಲಿ 70 ಮಂದಿ, ದಕ್ಷಿಣ ಕನ್ನಡದಲ್ಲಿ 7 ಮಂದಿ, ಕೋಲಾರದಲ್ಲಿ 6 ಮಂದಿ, ಬಾಗಲಕೋಟೆಯಲ್ಲಿ 5 ಮಂದಿ, ಶಿವಮೊಗ್ಗದಲ್ಲಿ 4 ಮಂದಿ, ಮೈಸೂರು ಹಾಗೂ ಬೆಳಗಾವಿಯಲ್ಲಿ ತಲಾ 3 ಮಂದಿ, ಬೀದರ್‌ ಹಾಗೂ ಕೊಪ್ಪಳದಲ್ಲಿ ತಲಾ ಇಬ್ಬರು ವ್ಯಕ್ತಿಗಳು, ಕಲಬುರ್ಗಿ ಹಾಗೂ ಮಂಡ್ಯದಲ್ಲಿ ತಲಾ ಒಬ್ಬರು ಮೃತಪಟ್ಟಿರುವುದು ಗುರುವಾರ ದೃಢಪಟ್ಟಿದೆ.

ಸಾವಿಗೀಡಾದವರಲ್ಲಿ ಬಹುತೇಕರು 50 ವರ್ಷ ಮೇಲ್ಪಟ್ಟವರಾಗಿದ್ದು, ಅಧಿಕ ರಕ್ತದೊತ್ತಡ, ಹೃದಯ ಸಮಸ್ಯೆ, ಮಧುಮೇಹ ಸೇರಿದಂತೆ ವಿವಿಧ ಕಾಯಿಲೆಗಳಿಂದ ಕೂಡ ಬಳಲುತ್ತಿದ್ದವರಾಗಿದ್ದಾರೆ.

‘ಸಮೂಹ ಸಾರಿಗೆ ಪ್ರಯಾಣ ಅಪಾಯ’
ಬೆಂಗಳೂರು: ಕೋವಿಡ್‌ ಸೋಂಕಿತ ವ್ಯಕ್ತಿಯೊಂದಿಗೆ ಸಮೂಹ ಸಾರಿಗೆಯಲ್ಲಿ ದೀರ್ಘಾವಧಿ ಪ್ರಯಾಣ ಮಾಡಿದಲ್ಲಿ ಸೋಂಕು ತಗುಲುವ ಸಾಧ್ಯತೆ ಇದ್ದು, ಈ ಬಗ್ಗೆ ಎಚ್ಚರ ವಹಿಸಬೇಕು ಎಂದು ಆರೋಗ್ಯ ಇಲಾಖೆ ಸೂಚಿಸಿದೆ.

ಕೋವಿಡ್‌ ಪೀಡಿತರ ಜತೆಗಿನ ಪ್ರಯಾಣದಿಂದಲೇ ಹಲವರು ಈಗಾಗಲೇ ಸೋಂಕಿತರಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಹೇಳಿದೆ.

ರಾಜ್ಯದಲ್ಲಿ ಇತ್ತೀಚೆಗೆ ವರದಿಯಾಗುತ್ತಿರುವ ಬಹುತೇಕ ಪ್ರಕರಣಗಳಲ್ಲಿ ವ್ಯಕ್ತಿಗೆ ಹೇಗೆ ಸೋಂಕು ತಗುಲಿತು ಎನ್ನುವುದೇ ಪತ್ತೆಯಾಗುತ್ತಿಲ್ಲ. ಇದರಿಂದಾಗಿ ಅವರ ಸಂಪರ್ಕಿತರನ್ನು ಗುರುತಿಸಿ, ಕ್ವಾರಂಟೈನ್‌ಗೆ ಒಳಪಡಿಸುವ ಕಾರ್ಯ ಕೂಡ ನಡೆಯುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.