ADVERTISEMENT

Covid-19 Karnataka Update | 6,128 ಪ್ರಕರಣ, ಸೋಂಕಿತರ ಸಂಖ್ಯೆ 1.18 ಲಕ್ಷ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಜುಲೈ 2020, 19:31 IST
Last Updated 30 ಜುಲೈ 2020, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ರಾಜ್ಯದಲ್ಲಿ ಮತ್ತೆ 6,128 ಮಂದಿ ಕೋವಿಡ್‌–19 ಪೀಡಿತರಾಗಿರುವುದು ಗುರುವಾರ ದೃಢಪಟ್ಟಿದೆ. ಇದೇ ಮೊದಲ ಬಾರಿಗೆ ಆರು ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ 1.18 ಲಕ್ಷಕ್ಕೆ ಏರಿದೆ.

ರಾಜ್ಯದಲ್ಲಿ 83 ಮಂದಿ ಸಾವಿಗೀಡಾಗುವುದರೊಂದಿಗೆ ಮೃತರ ಸಂಖ್ಯೆ 2,230ಕ್ಕೆ ಏರಿದೆ. ಬೆಂಗಳೂರು ನಗರದಲ್ಲಿ ಒಂದೇ ದಿನ, 2,233 ಪ್ರಕರಣಗಳು ವರದಿಯಾಗಿದ್ದು, ಮೃತರ ಸಂಖ್ಯೆ ಸಾವಿರದ ಗಡಿ ದಾಟಿದೆ.

ಮೈಸೂರಿನಲ್ಲೂ ಏರಿಕೆ: ಮೈಸೂರಿನಲ್ಲಿಯೂ ಸೋಂಕಿತರ ಸಂಖ್ಯೆ ದಿನೇ ದಿನೇ ಏರುತ್ತಿದ್ದು, ಒಂದೇ ದಿನ 430 ಜನರಿಗೆ ಸೋಂಕು ದೃಢಪಟ್ಟಿದ್ದು 9 ಮಂದಿ ಮೃತಪಟ್ಟಿದ್ದಾರೆ.

ADVERTISEMENT

ಬಳ್ಳಾರಿಯಲ್ಲಿ 343 ಜನ ಸೋಂಕಿತರಾಗಿದ್ದು, ಜು.30ರ ಒಂದೇ ದಿನ ಉಡುಪಿ, ಬೆಂಗಳೂರು ಗ್ರಾಮಾಂತರ, ಕಲಬುರ್ಗಿ, ಬೆಳಗಾವಿಯಲ್ಲಿ ಕೋವಿಡ್‌–19 ದೃಢಪಟ್ಟವರ ಸಂಖ್ಯೆ ದ್ವಿತಶಕದ ಗಡಿ ದಾಟಿದೆ. ಧಾರವಾಡದಲ್ಲಿ 8, ಕಲಬುರ್ಗಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಲಾ 7, ಹಾಸನ 6 ಹಾಗೂ ಉಡುಪಿ, ಬೆಳಗಾವಿಯಲ್ಲಿ ತಲಾ ನಾಲ್ವರು ಕೋವಿಡ್‌–19ನಿಂದ ಸಾವಿಗೀಡಾಗಿದ್ದಾರೆ. ತೀವ್ರ ನಿಗಾ ಘಟಕದಲ್ಲಿ ಒಟ್ಟು 620 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.

3,793 ಗುಣಮುಖ: ಗುರುವಾರ 3,793 ಜನ ಕೋವಿಡ್‌ನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆಮರಳಿದ್ದಾರೆ. ರಾಜ್ಯದಲ್ಲಿ ಗುಣಮುಖರಾದವರ ಒಟ್ಟು ಸಂಖ್ಯೆ 46,694ಕ್ಕೆ ಏರಿದೆ. ಬಳ್ಳಾರಿಯಲ್ಲಿ 337 ಜನ ಚೇತರಿಸಿಕೊಂಡು ಆಸ್ಪತ್ರೆಯಿಂದ ನಿರ್ಗಮಿಸಿದ್ದಾರೆ. ಅದೇ ರೀತಿ ಕಲಬುರ್ಗಿ, ದಕ್ಷಿಣಕನ್ನಡ, ಧಾರವಾಡ, ರಾಯಚೂರು, ಚಿಕ್ಕಬಳ್ಳಾಪುರದಲ್ಲಿ ಗುಣಮುಖರಾಗಿ, ಗುರುವಾರ ಮನೆಗೆ ತೆರಳಿದವರ ಸಂಖ್ಯೆ ಶತಕದ ಗಡಿ ದಾಟಿದೆ.

ಒಂದೇ ದಿನ 20,488 ಜನಕ್ಕೆ ಆ್ಯಂಟಿಜೆನ್‌ ಪರೀಕ್ಷೆ ಸೇರಿದಂತೆ, ಒಟ್ಟು 38,095 ಜನರಿಗೆ ಕೋವಿಡ್‌ ಪರೀಕ್ಷೆ ಮಾಡಲಾಗಿದೆ. ಈವರೆಗೆ ಒಟ್ಟು 13 ಲಕ್ಷಕ್ಕೂ ಹೆಚ್ಚು ಜನ ಪರೀಕ್ಷೆಗೆ ಒಳಗಾಗಿದ್ದಾರೆ.

ರಾಜ್ಯದ ಕೋವಿಡ್‌ ಅಂಕಿ–ಅಂಶ

ಒಟ್ಟು ಸೋಂಕಿತರು; 1,18,632

ಗುರುವಾರ ದೃಢಪಟ್ಟ ಪ್ರಕರಣಗಳು; 6,128

ಸಕ್ರಿಯ ಪ್ರಕರಣಗಳು; 69,700

ಗುಣಮುಖರಾದವರು;46,694

ಗುರುವಾರ ಗುಣಮುಖರಾದವರು;3,793

ಒಟ್ಟು ಮೃತಪಟ್ಟವರು;2,230

ಗುರುವಾರ ದೃಢಪಟ್ಟ ಸಾವು ಪ್ರಕರಣಗಳು;83

ಐಸಿಯುನಲ್ಲಿ ಇರುವವರು;620

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.