ಬೆಂಗಳೂರು: ಕೋವಿಡ್–19 ಭೀತಿಯಿಂದ ಇಡೀ ದೇಶವೇ ಲಾಕ್‌ಡೌನ್ ಆಗಿರುವ ಕಾರಣ ಕೆಎಂಎಫ್ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟದಲ್ಲಿ ಭಾರಿ ಕುಸಿತವಾಗಿದೆ. ಉಳಿದ ಹಾಲನ್ನು ಪುಡಿಯಾಗಿ ಪರಿವರ್ತಿಸಲು ಕೆಎಂಎಫ್ ತಿಣುಕಾಡುತ್ತಿದ್ದರೂ ದಿನಕ್ಕೆ 10 ಲಕ್ಷ ಲೀಟರ್ ಹಾಲು ಉಳಿಯುತ್ತಿದೆ.
ರಾಜ್ಯದ 25 ಲಕ್ಷಕ್ಕೂ ಹೆಚ್ಚು ರೈತರಿಂದ 14 ಒಕ್ಕೂಟಗಳ ಮೂಲಕ 70 ಲಕ್ಷ ಲೀಟರ್ ಹಾಲನ್ನು ಕೆಎಂಎಫ್ ಹಾಲು ಸಂಗ್ರಹಿಸುತ್ತಿದೆ. ಹಾಲು ಮತ್ತು ಮೊಸರಿನ ರೂಪದಲ್ಲಿ ಹೆಚ್ಚಿನ ಪ್ರಮಾಣ ಬಳಕೆ ಮಾಡುತ್ತಿದ್ದು, ಉಳಿದ ಹಾಲನ್ನು ಚೀಸ್, ಐಸ್‌ಕ್ರೀಂ, ಪೇಡ ಸೇರಿದಂತೆ ಇತರೆ ಹಾಲಿನ ಉತ್ಪನ್ನಗಳನ್ನು ತಯಾರಿಸಿ ಗ್ರಾಹಕರಿಗೆ ತಲುಪಿಸುತ್ತಿದೆ.
ರಾಜ್ಯ ಅಲ್ಲದೇ ಮುಂಬೈನಲ್ಲೂ ಕೆಎಂಫ್‌ಮಾರುಕಟ್ಟೆ ಸೃಷ್ಟಿಸಿಕೊಂಡಿದ್ದು, ಪ್ರತಿದಿನ 3 ಲಕ್ಷ ಲೀಟರ್ ಹಾಲನ್ನು ಅಲ್ಲಿಗೆ ಕಳುಹಿಸುತ್ತಿತ್ತು. ಇದೀಗ ಕೋವಿಡ್ –19 ಭೀತಿಯಿಂದ ಎಲ್ಲಾ ನಗರಗಳು ಬಂದ್ ಆಗಿರುವ ಕಾರಣ ಹಾಲಿನ ಬೇಡಿಕೆ ಕಡಿಮೆಯಾಗಿದೆ. ಲಾರಿಗಳು, ಹಾಲಿನ ಕ್ರೇಟ್‌ಗಳನ್ನು ಸ್ಯಾನಿಟೈಸ್ ಮಾಡುವ ಮೂಲಕ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುತ್ತಿದೆ.
ಆದರೂ, ಬೆಂಗಳೂರಿನಿಂದ ಜನ ಖಾಲಿಯಾಗಿರುವ ಮತ್ತು ಹೋಟೆಲ್, ಬೇಕರಿಗಳು ಬಂದ್ ಆಗಿರುವ ಕಾರಣ ಹಾಲಿನ ಮಾರಾಟ ಕಡಿಮೆಯಾಗಿದೆ. ಚೀಸ್ ಮಾರಾಟವಂತೂ ಸಂಪೂರ್ಣ ಸ್ಥಗಿತವಾಗಿದೆ.
ಈ ಹಿಂದೆ ಹಾಲಿನ ಪುಡಿ ತಯಾರಿಕೆಯನ್ನು ಬಹುತೇಕ ನಿಲ್ಲಿಸಿದ್ದ ಕೆಎಂಎಫ್, ಈಗ ಉಳಿಯುತ್ತಿರುವ ಹಾಲನ್ನು ಬೇರೇನು ಮಾಡಲು ಸಾಧ್ಯವಾಗದೆ ಪುಡಿಯಾಗಿ ಮಾರ್ಪಡಿಸಲು ಮುಂದಾಗಿದೆ. ಮದರ್ ಡೈರಿ, ಧಾರವಾಡ, ಮಂಡ್ಯ ಮತ್ತು ಚನ್ನರಾಯಪಟ್ಟಣದಲ್ಲಿ ಇರುವ ಹಾಲಿನ ಪುಡಿ ತಯಾರಿಕಾ ಘಟಕಗಳಲ್ಲಿ ಈ ಕಾರ್ಯವನ್ನು ಆರಂಭಿಸಿದೆ.
ರಾಮನಗರದಲ್ಲಿ ನಿರ್ಮಾಣ ಹಂತದಲ್ಲಿದ್ದ ಹಾಲಿನ ಪುಡಿ ತಯಾರಿಕಾ ಘಟಕವನ್ನು ಮುಂದಿನ ವಾರದಲ್ಲೇ ಆರಂಭಿಸಲು ಭರದಿಂದ ಸಿದ್ಧತೆ ಮಾಡಿಕೊಳ್ಳುತ್ತಿದೆ. ಕೆಎಂಎಫ್ ಬಳಿ ಇರುವ ಎಲ್ಲಾ ಘಟಕಗಳನ್ನು ಪೂರ್ಣಪ್ರಮಾಣದಲ್ಲಿ ಚಾಲನೆಯಲ್ಲಿಟ್ಟರೂ 10 ಲಕ್ಷ ಲೀಟರ್ ಹಾಲು ಉಳಿಯುತ್ತದೆ. ಈ ಹಾಲನ್ನು ಏನು ಮಾಡಬೇಕು ಎಂಬುದು ಈಗ ಕೆಎಂಎಫ್ ಮುಂದಿರುವ ಪ್ರಶ್ನೆ.
ಹೊರ ರಾಜ್ಯಗಳಲ್ಲಿ ಪ್ರಯತ್ನ
ಉಳಿಯುತ್ತಿರುವ ಹಾಲನ್ನು ಹಾಲಿನ ಪುಡಿಯಾಗಿ ಪರಿವರ್ತಿಸಲು ಹೊರ ರಾಜ್ಯಗಳಲ್ಲಿರುವ ಖಾಸಗಿ ಘಟಕಗಳನ್ನು ಕೆಎಂಎಫ್ ಅಧಿಕಾರಿಗಳು ಸಂಪರ್ಕಿಸಿದ್ದಾರೆ.
ಆದರೆ, ಕಾರ್ಮಿಕರ ಕೊರತೆ ಕಾರಣಕ್ಕೆ ಆ ಘಟಕಗಳಿಂದ ಸಕಾರಾತ್ಮಕ ಪ್ರತಿಕ್ರಿಯೆಗಳು ದೊರೆತಿಲ್ಲ. ಹೀಗಾಗಿ, ಕೊರೊನಾ ಸೋಂಕು ಕೆಎಂಎಫ್ ಅಧಿಕಾರಿಗಳಲ್ಲಿ ಹೊಸದೊಂದು ತಲೆನೋವು ತಂದೊಡ್ಡಿದೆ.
‘ಸಂಗ್ರಹಿಸಿದ ಹಾಲನ್ನು 48 ಗಂಟೆಗಳಿಗೂ ಹೆಚ್ಚು ಕಾಲ ಶೇಖರಿಸಿಡಲು ಸಾಧ್ಯವಿಲ್ಲ. ರೈತರಿಂದ ಹಾಲು ಸಂಗ್ರಹಿಸುವುದನ್ನು ವಾರದಲ್ಲಿ ಒಂದು ದಿನ ನಿಲ್ಲಿಸುವ ಪದ್ಧತಿ ತುಂಬಾ ಹಿಂದೆ ಇತ್ತು. ಈಗ ಏನು ಮಾಡಬೇಕು ಎಂಬುದನ್ನು ಆಡಳಿತ ಮಂಡಳಿಯಲ್ಲಿ ಶೀಘ್ರವೇ ಚರ್ಚಿಸುತ್ತೇವೆ’ ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಸಿ.ಜಿ. ಸತೀಶ್ ‘ಪ್ರಜಾವಾಣಿ’ಗೆ ತಿಳಿಸಿದರು.
ಕಠಿಣ ತೀರ್ಮಾನ
‘ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಕಠಿಣ ತೀರ್ಮಾನಗಳನ್ನು ಕೈಗೊಳ್ಳುತ್ತೇವೆ. ರೈತರು ಮತ್ತು ಗ್ರಾಹಕರು ಸಹಕರಿಸಬೇಕು’ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.
‘15 ಸಾವಿರ ಕಾರ್ಮಿಕರಲ್ಲಿ ಸದ್ಯ 5 ಸಾವಿರ ಕಾರ್ಮಿಕರು ಮಾತ್ರ ಲಭ್ಯವಿದ್ದಾರೆ. ಕಚ್ಚಾ ವಸ್ತುಗಳ ಕೊರತೆ ಕೂಡ ಎದುರಾಗುತ್ತಿದೆ. ರೈತರ ಹಿತಾಸಕ್ತಿ ಕಾಪಾಡುವ ಜತೆಗೆ ಸಂಸ್ಥೆಯನ್ನೂ ಉಳಿಸಿ, ಬೆಳೆಸಬೇಕಿದೆ. ಈ ನಿಟ್ಟಿನಲ್ಲಿ ಯಾವ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದರ ಬಗ್ಗೆ 14 ಒಕ್ಕೂಟಗಳ ಅಧ್ಯಕ್ಷರ ಜತೆ ಚರ್ಚಿಸುತ್ತೇನೆ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಅಂಕಿ–ಅಂಶ
* ಪ್ರತಿದಿನ ಸಂಗ್ರಹವಾಗುತ್ತಿರುವ ಹಾಲು:70 ಲಕ್ಷ ಲೀಟರ್
* ಮಾರಾಟವಾಗುತ್ತಿರುವ ಹಾಲು ಮತ್ತು ಮೊಸರು:40 ಲಕ್ಷ ಲೀಟರ್
* ಹಾಲಿನ ಪುಡಿ ತಯಾರಿಕೆಗೆ:15 ಲಕ್ಷ ಲೀಟರ್
* ಇತರೆ ಉತ್ಪನ್ನ ತಯಾರಿಕೆ; 5 ಲಕ್ಷ ಲೀಟರ್
* ಪ್ರತಿ ದಿನ ಉಳಿಯುತ್ತಿರುವ ಹಾಲು10 ಲಕ್ಷ ಲೀಟರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.