ADVERTISEMENT

ಮದ್ಯ ಮಾರಾಟ ಜೋರು: ಬಿಯರ್ ಖರೀದಿಗೆ ಹಿಂದೇಟು

ವಿಜಯಕುಮಾರ್ ಎಸ್.ಕೆ.
Published 25 ಮೇ 2021, 19:15 IST
Last Updated 25 ಮೇ 2021, 19:15 IST
ಬಿಯರ್
ಬಿಯರ್   

ಬೆಂಗಳೂರು: ಲಾಕ್‌ಡೌನ್‌ ಅವಧಿಯಲ್ಲಿ ಮದ್ಯದ ಅಂಗಡಿಗಳನ್ನು ತೆರೆಯಲು ದಿನದ 4 ಗಂಟೆ ಮಾತ್ರ ಅವಕಾಶ ಇದ್ದರೂ ಮದ್ಯ ಮಾರಾಟದಲ್ಲಿ ಅಷ್ಟೇನು ಬದಲಾವಣೆ ಆಗಿಲ್ಲ. ಆದರೆ, ಬಿಯರ್ ಖರೀದಿಗೆ ಜನ ಹಿಂದೇಟು ಹಾಕುತ್ತಿದ್ದಾರೆ. ಮದ್ಯ ಮಾರಾಟ ಶೇ 10ರಷ್ಟು ಕಡಿಮೆಯಾಗಿದ್ದರೆ, ಬಿಯರ್ ಮಾರಾಟ ಅರ್ಧಕ್ಕರ್ಧ ಕಡಿಮೆಯಾಗಿದೆ.‌‌

ಕಳೆದ ಬಾರಿಯ ಲಾಕ್‌ಡೌನ್ ಸಂದರ್ಭದಲ್ಲಿ ಮದ್ಯದ ಪಾರ್ಸೆಲ್ ಸೇವೆಗೂ ಅವಕಾಶ ಇರಲಿಲ್ಲ. ಈ ಬಾರಿ ಅಗತ್ಯ ವಸ್ತುಗಳಿಗೆ ನೀಡಿರುವ ವಿನಾಯಿತಿ ಪಟ್ಟಿಯಲ್ಲಿ ಮದ್ಯವೂ ಸ್ಥಾನ ಪಡೆದುಕೊಂಡಿದೆ. ಬೆಳಿಗ್ಗೆ 6ರಿಂದ 10 ಗಂಟೆ ತನಕ ಪಾರ್ಸೆಲ್‌ ಸೇವೆಗೆ ಅವಕಾಶ ಕಲ್ಪಿಸಲಾಗಿದೆ.

ಸಾಮಾನ್ಯ ದಿನಗಳಲ್ಲಿ ಮಾರಾಟವಾಗುತ್ತಿದ್ದ ವಿಸ್ಕಿ, ಬ್ರಾಂಡಿ, ರಮ್ ಸೇರಿದಂತೆ ಐಎಂಎಲ್‌(ಮದ್ಯ) ಮಾರಾಟದಲ್ಲಿ ಅಷ್ಟೇನು ಬದಲಾವಣೆ ಆಗಿಲ್ಲ. ಆದರೆ, ಬಿಯರ್ ಮಾರಾಟ ಶೇ 50ಕ್ಕಿಂತ ಕಡಿಮೆಯಾಗಿದೆ.

ADVERTISEMENT

ರಾಜ್ಯದಲ್ಲಿ ಸಾಮಾನ್ಯ ದಿನಗಳಲ್ಲಿ ಪ್ರತಿದಿನ 1 ಲಕ್ಷ 75 ಸಾವಿರ ಬಾಕ್ಸ್‌ನಷ್ಟು ಐಎಂಎಲ್, 75 ಸಾವಿರ ಬಾಕ್ಸ್‌ನಷ್ಟು ಬಿಯರ್ ಮಾರಾಟವಾಗುತ್ತಿತ್ತು. ಈಗ 1 ಲಕ್ಷ 50 ಸಾವಿರ ಬಾಕ್ಸ್‌ ಐಎಂಎಲ್‌ ಮತ್ತು 35 ಸಾವಿರ ಬಾಕ್ಸ್‌ನಷ್ಟು ಬಿಯರ್ ಮಾರಾಟವಾಗುತ್ತಿದೆ.

‘ಪಬ್, ಬಾರ್ ಆ್ಯಂಡ್ ರೆಸ್ಟೋರೆಂಟ್, ಡ್ಯಾನ್ಸ್ ಬಾರ್‌ಗಳಲ್ಲಿ ಜನ ಹೆಚ್ಚಾಗಿ ಬಿಯರ್ ಸೇವನೆ ಮಾಡುತ್ತಿದ್ದರು. ಇವುಗಳನ್ನು ತೆರೆಯಲು ಅವಕಾಶ ಇಲ್ಲದ ಕಾರಣ ಬಿಯರ್ ಸೇವನೆ ಕಡಿಮೆಯಾಗಿದೆ. ಅಲ್ಲದೇ ಕೊರೊನಾ ಸೋಂಕಿನ ವಿರುದ್ಧ ಹೋರಾಡಲು ಬಿಯರ್‌ಗಿಂತ ಐಎಂಎಲ್‌ ಮದ್ಯ ಸೂಕ್ತ ಎಂಬ ನಂಬಿಕೆಯೂ ಜನರಲ್ಲಿದೆ. ಈ ಎಲ್ಲಾ ಕಾರಣಕ್ಕೆ ಭಾರತೀಯ ಮದ್ಯ ಮಾರಾಟ ಪ್ರಮಾಣ ಜಾಸ್ತಿಯಾಗಿದ್ದು, ಬಿಯರ್ ಮಾರಾಟ ಕುಸಿದಿರಬಹುದು’ ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

‘ಬಿಯರ್ ಮೇಲಿನ ಸುಂಕದ ದರಕ್ಕಿಂತ ಐಎಂಎಲ್‌ ಮೇಲಿನ ಸುಂಕದ ದರಗಳು ಹೆಚ್ಚಾಗಿರುವ ಕಾರಣ ಸರ್ಕಾರಕ್ಕೆ ಬರುವ ವರಮಾನದಲ್ಲಿ ಅಷ್ಟೇನು ಬದಲಾವಣೆ ಆಗುವುದಿಲ್ಲ. ದಿನಕ್ಕೆ 25 ಸಾವಿರ ಬಾಕ್ಸ್ ಐಎಂಎಲ್ ಮಾರಾಟ ಕಡಿಮೆ ಆಗಿದ್ದರೂ, ಮುಂದಿನ ದಿನಗಳಲ್ಲಿ ವರಮಾನ ಸರಿದೂಗುವ ವಿಶ್ವಾಸ ಇದೆ’ ಎನ್ನುತ್ತಾರ ಅಧಿಕಾರಿಗಳು.

ಶುಲ್ಕ ರಿಯಾಯಿತಿಗೆ ಮನವಿ
‘ಪಾರ್ಸೆಲ್‌ ಸೇವೆಗೆ ಮಾತ್ರ ಅವಕಾಶ ಇರುವ ಕಾರಣ ಕಟ್ಟಡ ಬಾಡಿಗೆ, ಸಿಬ್ಬಂದಿ ನಿರ್ವಹಣೆ ಕೂಡ ಸಾಧ್ಯವಾಗದೆ ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳ ಮಾಲೀಕರು ತೊಂದರೆಗೆ ಸಿಲುಕಿದ್ದಾರೆ’ ಎಂದು ಕರ್ನಾಟಕ ಮದ್ಯ ಮಾರಾಟಗಾರರ ಸಂಘಗಳ ಒಕ್ಕೂಟ ತಿಳಿಸಿದೆ.

ಈ ಸಂಬಂಧ ಮುಖ್ಯಮಂತ್ರಿಗೆ ಪತ್ರ ಬರೆದಿರುವ ಒಕ್ಕೂಟ ಪ್ರಧಾನ ಕಾರ್ಯದರ್ಶಿ ಗೋವಿಂದರಾಜ ಹೆಗ್ಡೆ, ‘ಕಳೆದ ವರ್ಷದ ಲಾಕ್‌ಡೌನ್ ಸಂದರ್ಭದಲ್ಲಿ 40 ದಿನ ಸಂಪೂರ್ಣ ಬಂದ್ ಆಗಿದ್ದ ಕಾರಣ ₹1,100 ಕೋಟಿಗೂ ಹೆಚ್ಚು ನಷ್ಟವನ್ನು ಮದ್ಯ ಮಾರಾಟಗಾರರು ಅನುಭವಿಸಿದ್ದಾರೆ’ ಎಂದು ವಿವರಿಸಿದ್ದಾರೆ.

‘ಈಗ ಎಂಆರ್‌ಪಿ ದರದಲ್ಲೇ ಮದ್ಯ ಮಾರಾಟ ಮಾಡುತ್ತಿರುವ ಕಾರಣ ನಿರ್ವಹಣೆ ಸಾಧ್ಯವಾಗುತ್ತಿಲ್ಲ. ಕಟ್ಟಡಗಳ ತೆರಿಗೆ, ಪರವಾನಗಿ ಶುಲ್ಕ ರಿಯಾಯಿತಿ ನೀಡಲು ಸ್ಥಳೀಯ ಸಂಸ್ಥೆಗಳಿಗೆ ನಿರ್ದೇಶನ ನೀಡಬೇಕು’ ಎಂದು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.