ADVERTISEMENT

2 ಕೋಟಿ ಲಸಿಕೆಗೆ ʼಮುಕ್ತ ಅಂತರರಾಷ್ಟ್ರೀಯ ಟೆಂಡರ್‌ʼ: 2 ಕಂಪನಿ ಮಾತ್ರ ಬಿಡ್‌

ರಷ್ಯಾದ ಸ್ಫುಟ್ನಿಕ್‌ ಲಸಿಕೆ ಪೂರೈಸುವ ಭರವಸೆ

​ಪ್ರಜಾವಾಣಿ ವಾರ್ತೆ
Published 25 ಮೇ 2021, 20:57 IST
Last Updated 25 ಮೇ 2021, 20:57 IST
   

ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌ ಲಸಿಕೆಗಾಗಿ ಹಾಹಾಕಾರ ಉಂಟಾಗಿರುವ ನಡುವೆ, ಬಹು ಡೋಸ್‌ಗಳಿರುವ ಎರಡು ಕೋಟಿ ವಯಲ್ಸ್‌ ಲಸಿಕೆ ಪೂರೈಕೆಗಾಗಿ ಆಹ್ವಾನಿಸಿದ್ದ ‘ಮುಕ್ತ ಅಂತರರಾಷ್ಟ್ರೀಯ ಟೆಂಡರ್‌’ಗೆ (ಒಐಟಿ) ಕೇವಲ ಎರಡು ಕಂಪನಿಗಳು ಬಿಡ್‌ ಸಲ್ಲಿಸಿವೆ.

ಜಾಗತಿಕಮಟ್ಟದಲ್ಲಿ ಟೆಂಡರ್‌ ಆಹ್ವಾನಿಸಿದ್ದರೂ ಎರಡು ಭಾರತೀಯ ಕಂಪನಿಗಳು ಮಾತ್ರ ಭಾಗವಹಿಸಿದ್ದು, ರಷ್ಯಾದ ಸ್ಫುಟ್ನಿಕ್‌ ಲಸಿಕೆ ಪೂರೈಸುವ ಭರವಸೆ ನೀಡಿದೆ ಎಂದು ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮದ (ಕೆಎಸ್‌ಎಂಎಸ್‌ಸಿಎಲ್‌) ಮೂಲಗಳು ಹೇಳಿವೆ.

‘ಸ್ಪುಟ್ನಿಕ್‌ ವಿ ಲಸಿಕೆಯನ್ನು ಸರಬರಾಜು ಮಾಡುವುದಾಗಿ ಮುಂಬೈಯ ಬಲ್ಕ್ ಎಂಆರ್‌ಒ ಇಂಡಸ್ಟ್ರೀಯಲ್ ಸಪ್ಲೈ ಕಂಪನಿ ತಿಳಿಸಿದೆ. ಬೆಂಗಳೂರಿನ ಎಚ್‌ಎಸ್‌ಆರ್‌ ಲೇಔಟ್‌ನಲ್ಲಿರುವ ತುಳಸಿ ಸಿಸ್ಟಮ್ಸ್‌ ಕಂಪನಿ ಸ್ಪುಟ್ನಿಕ್‌ + ಸಿಂಗಲ್‌ ಡೋಸ್‌ ಲಸಿಕೆ ಪೂರೈಸುವುದಾಗಿ ತಿಳಿಸಿದೆ. ಈ ಕಂಪನಿಗಳು ಸಲ್ಲಿಸಿರುವ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ’ ಎಂದು ಮೂಲಗಳು ತಿಳಿಸಿವೆ.

ADVERTISEMENT

ಲಸಿಕೆ ಪೂರೈಕೆಗೆ ಕೆಎಸ್‌ಎಂಎಸ್‌ಸಿಎಲ್‌ ಮೇ 14ರಂದು ಟೆಂಡರ್‌ ಕರೆದಿತ್ತು. ಬಿಡ್‌ ಸಲ್ಲಿಸಲು ಸೋಮವಾರ (ಮೇ 24) ಕೊನೆಯ ದಿನವಾಗಿತ್ತು. ಬುಧವಾರ ಬೆಳಿಗ್ಗೆ ಬಿಡ್‌ ತೆರೆಯಲಾಗಿದೆ.

‘ಟೆಂಡರ್‌ ಆಹ್ವಾನಿಸುವಂತೆ ರಾಷ್ಟ್ರೀಯ ಆರೋಗ್ಯ ಅಭಿಯಾನ (ಎನ್‌ಎಚ್‌ಎಂ) ನಿರ್ದೇಶಕರು ಕೆಎಸ್‌ಎಂಎಸ್‌ಸಿಎಲ್‌ಗೆ ಸೂಚಿಸಿದ್ದರು. ಸಲ್ಲಿಕೆಯಾದ ಬಿಡ್‌ಗಳ ಬಗ್ಗೆ ಎನ್‌ಎಚ್‌ಎಂಗೆ ಮಾಹಿತಿ ನೀಡಲಾಗಿದೆ. ಮುಂದಿನ ಕ್ರಮಗಳನ್ನು ಎನ್‌ಎಚ್‌ಎಂ ತೆಗೆದುಕೊಳ್ಳಲಿದೆ. ಜಾಗತಿಕ ಟೆಂಡರ್‌ ಆಹ್ವಾನಿಸಿ ಲಸಿಕೆ ಖರೀದಿಸಲು ರಾಜ್ಯ ಸರ್ಕಾರ ₹ 843 ಕೋಟಿ ಮೀಸಲಿಟ್ಟಿದೆ. ಬಿಡ್‌ ಸಲ್ಲಿಸಲು ಕೇವಲ 10 ದಿನಗಳ ಕಾಲಾವಕಾಶ ಮಾತ್ರ ನೀಡಲಾಗಿತ್ತು. ಈ ಅಲ್ಪ ಅವಧಿಯಲ್ಲಿ ಕೆಲವು ಕಂಪನಿಗಳಿಗೆ ಭಾಗವಹಿಸಲು ಸಾಧ್ಯವಾಗದೇ ಇರಬಹುದು. ಹೀಗಾಗಿ, ಮತ್ತೆ ಟೆಂಡರ್‌ ಕರೆಯುವ ಬದಲು ಇನ್ನಷ್ಟು ಕಾಲಾವಕಾಶ ನೀಡುವ ಬಗ್ಗೆ ಚಿಂತನೆ ನಡೆದಿದೆ ಎಂದೂ ಮೂಲಗಳು ತಿಳಿಸಿವೆ.

ಟೆಂಡರ್‌ನಲ್ಲಿ ಭಾಗವಹಿಸಿದ ಬಗ್ಗೆ ಪ್ರತಿಕ್ರಿಯಿಸಿದ ಬಲ್ಕ್ ಎಂಆರ್‌ಒ ಇಂಡಸ್ಟ್ರೀಯಲ್ ಸಪ್ಲೈ ಕಂಪನಿಯ ಸಹ ಸಂಸ್ಥಾಪಕ ದೇವಾಂಗ್‌ ಶಾ, ‘ಸ್ಫುಟ್ನಿಕ್‌ ಲಸಿಕೆ ಸರಬರಾಜು ಮಾಡಲು ನಮ್ಮ ಕಂಪನಿ ಪರವಾನಗಿ ಒಪ್ಪಂದ ಮಾಡಿಕೊಂಡಿದೆ. ಇತರ ಉತ್ಪಾದಕ ಕಂಪನಿಗಳ ಜೊತೆಗೂ ಮಾರಾಟ ಒಪ್ಪಂದ ಮಾಡಿಕೊಳ್ಳಲು ಮಾತುಕತೆ ನಡೆಯುತ್ತಿದೆ’ ಎಂದರು.

‘ಸೋಲಾರ್‌ ಮತ್ತು ಎಲ್‌ಇಡಿ ಪರಿಕರಗಳನ್ನು ಪೂರೈಸುವ ನಮ್ಮ ಕಂಪನಿ, ಕಳೆದ ಒಂದು ವರ್ಷದಿಂದ ಕೋವಿಡ್‌ ನಿರ್ವಹಣೆಯ ಪರಿಕರಗಳನ್ನೂ ಪೂರೈಸುತ್ತಿದೆ’ ಎಂದು ತುಳಸಿ ಸಿಸ್ಟಮ್ಸ್‌ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಟಿ.ಎಸ್‌. ಶ್ರೀನಿವಾಸ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.