ADVERTISEMENT

ಕೋವಿಡ್ – ಬೌದ್ಧಿಕ ದಿವಾಳಿತನ ಪ್ರದರ್ಶಿಸಿದ ಬಿಜೆಪಿ ಸರ್ಕಾರ: ಕಾಂಗ್ರೆಸ್ ಟೀಕೆ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2021, 10:16 IST
Last Updated 27 ಏಪ್ರಿಲ್ 2021, 10:16 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕೋವಿಡ್‌–19 ಸೋಂಕು ಹರಡುವಿಕೆ ತಡೆಯಲು ಸರಿಯಾದ ನಿಯಮ ರೂಪಿಸದೆ ಬಿಜೆಪಿ ಸರ್ಕಾರ ಬೌದ್ಧಿಕ ದಿವಾಳಿತನ ಪ್ರದರ್ಶಿಸಿದೆ ಎಂದು ಕಾಂಗ್ರೆಸ್ ಟೀಕಿಸಿದೆ.

ಕೋವಿಡ್ ಕರ್ಫ್ಯೂ ಘೋಷಣೆ ಮತ್ತು ಅದರ ನಂತರದ ಬೆಳವಣಿಗೆಗಳ ಬಗ್ಗೆ ರಾಜ್ಯ ಕಾಂಗ್ರೆಸ್ ಘಟಕದ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಸರಣಿ ಟ್ವೀಟ್ ಮಾಡಲಾಗಿದ್ದು, ಸರ್ಕಾರವನ್ನು ತರಾಟೆಗೆ ತೆಗದುಕೊಳ್ಳಲಾಗಿದೆ.

‘ಹಿಂದಿನ ಲಾಕ್‌ಡೌನ್‌ನಿಂದ ಗಾರ್ಮೆಂಟ್ಸ್ ಉದ್ಯಮ ಇನ್ನೂ ಹೊರಬಂದಿಲ್ಲ. ನಷ್ಟದಿಂದ ಸಾವಿರಾರು ಕಾರ್ಮಿಕರು ನಿರುದ್ಯೋಗಿಗಳಾಗಿದ್ದಾರೆ. ಈಗ ಮತ್ತೆ ಲಾಕ್‌ಡೌನ್ ಘೋಷಿಸಲಾಗಿದೆ. ಕಾರ್ಮಿಕರ ಆರ್ಥಿಕ ಮತ್ತು ಉದ್ಯೋಗ ಭದ್ರತೆಗೆ ಸರ್ಕಾರ ಕ್ರಮ ಕೈಗೊಳ್ಳದಿರುವುದು ಅಕ್ಷಮ್ಯ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರೇ, ಹೊಣೆಗಾರಿಕೆಯಿಂದ ಜಾರಿಕೊಳ್ಳುವುದರ ಬದಲು ನಿಮ್ಮ ಜಾಣ್ಮೆಯನ್ನು ನೆರವು ನೀಡಲು ಬಳಸಿ’ ಎಂದು ಟ್ವೀಟ್‌ನಲ್ಲಿ ಕಾಂಗ್ರೆಸ್ ಉಲ್ಲೇಖಿಸಿದೆ.

ADVERTISEMENT

‘ಕಾರ್ಮಿಕರು ತಮ್ಮ ಊರುಗಳತ್ತ ತೆರಳುತ್ತಿದ್ದಾರೆ. ತಮ್ಮಂದಿಗೆ ಸೋಂಕನ್ನು ಕೂಡ ಕೊಂಡೊಯ್ಯುತ್ತಿದ್ದಾರೆ. ಹಣದ ನೆರವು, ಆಹಾರದ ಭದ್ರತೆ ನೀಡಿ ಅವರನ್ನು ಇದ್ದಲ್ಲಿಯೇ ಉಳಿಸಬಹುದಾದ ಅವಕಾಶವನ್ನು ಸರ್ಕಾರ ಬಳಸಲಿಲ್ಲ. ಊರಿಗೆ ತೆರಳುವವರಿಗೆ ಬಸ್ ವ್ಯವಸ್ಥೆ ಜೊತೆಗೆ ಸೋಂಕು ಪರೀಕ್ಷೆ, ಐಸೋಲೇಷನ್ ನಿಯಮ ರೂಪಿಸದಿರುವುದು ಸರ್ಕಾರದ ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿ’ ಎಂದು ಮತ್ತೊಂದು ಟ್ವೀಟ್‌ನಲ್ಲಿ ಹೇಳಿದೆ.

‘ಟೆಸ್ಟ್ , ಟ್ರ್ಯಾಕ್, ಟ್ರೀಟ್ ಮೂರನ್ನೂ ಬಿಜೆಪಿ ಸರ್ಕಾರ ನಿರ್ಲಕ್ಷಿಸಿದೆ. ಬೆಂಗಳೂರಿನಿಂದ ಹಳ್ಳಿಗಳಿಗೆ ತೆರಳುವವರಿಗೆ ಸೂಕ್ತ ಬಸ್ ವ್ಯವಸ್ಥೆ ಕಲ್ಪಿಸಿಲ್ಲ. ತೆರಳಿದವರಿಗೆ ಊರುಗಳಲ್ಲಿ ಟೆಸ್ಟಿಂಗ್ ಹಾಗೂ ಐಸೋಲೇಷನ್ ನಿಯಮ ರೂಪಿಸಿಲ್ಲ. ಸಚಿವ ಸುಧಾಕರ್ ಅವರೇ, ಕೂಡಲೇ ಗ್ರಾಮೀಣ ಭಾಗದತ್ತ ಗಮನಹರಿಸಿ ಸೋಂಕು ಹರಡದಂತೆ ತಡೆಗಟ್ಟಿ’ ಎಂದು ಕಾಂಗ್ರೆಸ್ ಆಗ್ರಹಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.