ADVERTISEMENT

Covid-19 Karnataka Update: ಮರಣ ಪ್ರಮಾಣ ಶೇ 2.38ರಷ್ಟು ಹೆಚ್ಚಳ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಮೇ 2021, 20:11 IST
Last Updated 29 ಮೇ 2021, 20:11 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ರಾಜ್ಯದಲ್ಲಿ ಮೂರು ದಿನಗಳಿಂದ ತಗ್ಗಿದ್ದ ಕೋವಿಡ್ ಮರಣ ಪ್ರಮಾಣ ದರ ಮತ್ತೆ ಏರಿಕೆ ಕಂಡಿದೆ. ಸೋಂಕಿತರಲ್ಲಿ ಮತ್ತೆ 492 ಮಂದಿ ಮೃತಪಟ್ಟಿರುವುದು ದೃಢಪಟ್ಟಿದ್ದು, ಮರಣ ಪ್ರಮಾಣ ದರ ಶೇ 2.38ಕ್ಕೆ ಏರಿದೆ.

24 ಗಂಟೆಗಳ ಅವಧಿಯಲ್ಲಿ 20,628 ಮಂದಿ ಕೋವಿಡ್ ಪೀಡಿತರಾಗಿರುವುದು ದೃಢಪಟ್ಟಿದೆ. ಒಂದು ದಿನದ ಅವಧಿಯಲ್ಲಿ 1.37 ಲಕ್ಷ ಮಾದರಿಗಳನ್ನು ಪರೀಕ್ಷೆ ಮಾಡಲಾಗಿದೆ. ಸೋಂಕು ದೃಢ ಪ್ರಮಾಣವು ಶೇ 14.95ಕ್ಕೆ ಇಳಿಕೆಯಾಗಿದೆ. ಈವರೆಗೆ ಸೋಂಕಿತರಾದವರ ಒಟ್ಟು ಸಂಖ್ಯೆ 25.67 ಲಕ್ಷ ದಾಟಿದೆ.

ಕೋವಿಡ್ ಪೀಡಿತರಲ್ಲಿ ಮತ್ತೆ 42,444 ಮಂದಿ ಗುಣಮುಖರಾಗಿದ್ದಾರೆ. ಕೆಲ ದಿನಗಳಿಂದ ಚೇತರಿಸಿಕೊಳ್ಳುವವರ ಸಂಖ್ಯೆಯಲ್ಲಿ ಏರಿಕೆ ಕಂಡಿದ್ದು, ಈ ತಿಂಗಳು 29 ದಿನಗಳ ಅವಧಿಯಲ್ಲಿ 10.64 ಲಕ್ಷ ಮಂದಿ ಚೇತರಿಸಿಕೊಂಡಿದ್ದಾರೆ. ಈವರೆಗೆ ಗುಣಮುಖ ಹೊಂದಿದವರ ಸಂಖ್ಯೆ 21.89 ಲಕ್ಷ ದಾಟಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 3.50 ಲಕ್ಷಕ್ಕೆ ಇಳಿಕೆಯಾಗಿದೆ.

ADVERTISEMENT

ಬೆಂಗಳೂರಿನಲ್ಲಿ ಮತ್ತೆ 278 ಮಂದಿ ಮೃತಪಟ್ಟಿರುವುದು ದೃಢಪಟ್ಟಿದೆ.ಮೈಸೂರಿನಲ್ಲಿ 28 ಮಂದಿ, ಧಾರವಾಡದಲ್ಲಿ 19 ಮಂದಿ, ಬೆಂಗಳೂರು ಗ್ರಾಮಾಂತರದಲ್ಲಿ 16 ಮಂದಿ, ಉತ್ತರ ಕನ್ನಡದಲ್ಲಿ 15 ಮಂದಿ, ಶಿವಮೊಗ್ಗ ಹಾಗೂ ಬಳ್ಳಾರಿಯಲ್ಲಿ ತಲಾ 14 ಮಂದಿ, ತುಮಕೂರಿನಲ್ಲಿ 13 ಮಂದಿ ಸಾವಿಗೀಡಾಗಿರುವುದು ಖಚಿತಪಟ್ಟಿದೆ. ಈವರೆಗೆ ಕೋವಿಡ್‌ಗೆ ಮೃತಪಟ್ಟವರ ಸಂಖ್ಯೆ 28,298ಕ್ಕೆ ತಲುಪಿದೆ.

ಬೆಂಗಳೂರಿನಲ್ಲಿ ಕೋವಿಡ್‌ ಹೊಸ ಪ್ರಕರಣಗಳ ಸಂಖ್ಯೆ ಮತ್ತಷ್ಟು ಇಳಿಕೆಯಾಗಿದ್ದು, 24 ಗಂಟೆಗಳ ಅವಧಿಯಲ್ಲಿ 4,889 ಮಂದಿ ಸೋಂಕಿತರಾಗಿರುವುದು ದೃಢಪಟ್ಟಿದೆ. ಮೈಸೂರು (1,720), ತುಮಕೂರು (1,102), ಬೆಳಗಾವಿ (1,027), ಹಾಸನ (1,024) ಜಿಲ್ಲೆಯಲ್ಲಿ ಅಧಿಕ ಪ್ರಕರಣ ವರದಿಯಾಗಿವೆ. ಉಳಿದ ಜಿಲ್ಲೆಗಳಲ್ಲಿ ಸಾವಿರಕ್ಕಿಂತ ಕಡಿಮೆ ಸಂಖ್ಯೆಯಲ್ಲಿ ಹೊಸ ಪ್ರಕರಣಗಳು ದೃಢಪಟ್ಟಿವೆ.

ಕಪ್ಪು ಶಿಲೀಂಧ್ರ: 30 ಮಂದಿಗೆ ಸೋಂಕು
ಬೆಂಗಳೂರು:
ನಗರದಲ್ಲಿ 30 ಮಂದಿಗೆ ಕಪ್ಪು ಶಿಲೀಂಧ್ರ ಸೋಂಕು ತಗುಲಿರುವುದು ಶನಿವಾರ ದೃಢಪಟ್ಟಿದೆ.

ಸೋಂಕಿಗೆ ಒಳಗಾದವರಲ್ಲಿ ಇಬ್ಬರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಕೋವಿಡ್‌ನಿಂದ ಚೇತರಿಸಿಕೊಂಡು ಶಿಲೀಂಧ್ರ ಸೋಂಕಿಗೆ ಒಳಗಾದ 24 ಮಂದಿ ಬೌರಿಂಗ್ ಆಸ್ಪತ್ರೆಗೆ ಹಾಗೂ 6 ಮಂದಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದವರಲ್ಲಿ ಇಬ್ಬರು ಚೇತರಿಸಿಕೊಂಡು ಮನೆಗೆ ತೆರಳಿದ್ದಾರೆ. ಸದ್ಯ ಅಲ್ಲಿ 100ಕ್ಕೂ ಅಧಿಕ ರೋಗಿಗಳು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಸೋಂಕಿತನಾಗಿದ್ದ ಮೈಸೂರಿನ 11 ವರ್ಷದ ಬಾಲಕ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯಿಂದ (ನಿಮ್ಹಾನ್ಸ್) ಬೌರಿಂಗ್ ಆಸ್ಪತ್ರೆಗೆ ಶನಿವಾರ ವಾಪಸ್ ಆಗಿದ್ದಾನೆ. ಮಿದುಳಿಗೆ ಸೋಂಕು ಹರಡಿರುವ ಶಂಕೆ ವ್ಯಕ್ತವಾದ ಕಾರಣ ಬೌರಿಂಗ್ ಆಸ್ಪತ್ರೆಯ ವೈದ್ಯರು ನಿಮ್ಹಾನ್ಸ್‌ಗೆ ಸ್ಥಳಾಂತರ ಮಾಡಿದ್ದರು. ಇಎನ್‌ಟಿ ತಜ್ಞರು ಬಾಲಕನಿಗೆ ಶಸ್ತ್ರಚಿಕಿತ್ಸೆ ನೆರವೇರಿಸಲುನಿರ್ಧರಿಸಿದ್ದಾರೆ.

ಲಾಕ್‌ಡೌನ್ ಸಂಪೂರ್ಣ ತೆರವು ಸದ್ಯಕ್ಕಿಲ್ಲ?
‘ಲಾಕ್‌ಡೌನ್ ಮುಂದುವರಿಸಿದರೆ ಸೂಕ್ತ ಎಂಬ ವರದಿಯನ್ನು ತಜ್ಞರ ಸಮಿತಿ ನೀಡಿದೆ. ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು' ಎಂದು ಕಂದಾಯ ಸಚಿವ ಆರ್. ಅಶೋಕ ತಿಳಿಸಿದರು.

‘ದೆಹಲಿಯಲ್ಲಿ ಹೊಸ ಪ್ರಕರಣಗಳ ಸಂಖ್ಯೆ 1 ಸಾವಿರಕ್ಕಿಂತ ಕಡಿಮೆಯಾಗಿದೆ.ಬೆಂಗಳೂರಿನಲ್ಲಿ ನಿತ್ಯ 22 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತಿದ್ದವು. ಈ ಸಂಖ್ಯೆ ಈಗ 5 ಸಾವಿರಕ್ಕ ಇಳಿದಿದೆ. ಅದು 1 ಸಾವಿರಕ್ಕಿಂತ ಕಡಿಮೆಯಾದರೆ ಲಾಕ್‌ಡೌನ್ ಸಂಪೂರ್ಣ ತೆರವು ಮಾಡಬಹುದು’ ಎಂದು ಅಭಿಪ್ರಾಯಪಟ್ಟರು.

‘ಜೂನ್ 7ರ ತನಕ ಲಾಕ್‌ಡೌನ್ ಮುಂದುವರಿಯಲಿದೆ. ಒಮ್ಮೆಲೆ ಲಾಕ್‌ಡೌನ್ ತೆರವುಗೊಳಿಸಿದರೆ ಮತ್ತೆ ಕೋವಿಡ್ ಹರಡುವಿಕೆ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ, ಹಂತ–ಹಂತವಾಗಿ ಸಡಿಲ ಮಾಡುವಂತೆ ಮುಖ್ಯಮಂತ್ರಿ ಅವರಿಗೆ ಸಲಹೆ ನೀಡಿದ್ದೇವೆ. ಅಂತಿಮವಾಗಿ ಅವರು ತೀರ್ಮಾನ ಕೈಗೊಳ್ಳಲಿದ್ದಾರೆ. ಮೂರು ದಿನ ಮುಂಚೆಯೇ ನಿರ್ಧಾರ ಕೈಗೊಳ್ಳಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.