ADVERTISEMENT

ಗಾರ್ಮೆಂಟ್ಸ್‌: ಶೇ 50ರಷ್ಟು ಸಿಬ್ಬಂದಿಗೆ ಅವಕಾಶ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2021, 20:54 IST
Last Updated 28 ಏಪ್ರಿಲ್ 2021, 20:54 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಲಾಕ್‌ಡೌನ್ ಅವಧಿಯಲ್ಲಿ ಸಿದ್ಧ ಉಡುಪು ತಯಾರಿಕಾ (ಗಾರ್ಮೆಂಟ್ಸ್‌) ಕೈಗಾರಿಕೆಗಳು ತಮ್ಮ ಸಾಮರ್ಥ್ಯದ ಶೇಕಡ 50ರಷ್ಟು ಸಿಬ್ಬಂದಿಯನ್ನು ಬಳಸಿಕೊಂಡು ಕಾರ್ಯಾಚರಣೆ ನಡೆಸಲು ಅವಕಾಶ ಕಲ್ಪಿಸಿ ರಾಜ್ಯ ಸರ್ಕಾರ ಬುಧವಾರ ಪರಿಷ್ಕೃತ ಆದೇಶ ಹೊರಡಿಸಿದೆ.

ಲಾಕ್‌ಡೌನ್‌ ಜಾರಿಗೊಳಿಸಿ ಹೊರಡಿಸಿದ ಆದೇಶದಲ್ಲಿ ಎಲ್ಲ ಉದ್ದಿಮೆಗಳೂ ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸಿದ್ದ ಸರ್ಕಾರ, ಸಿದ್ಧ ಉಡುಪು ತಯಾರಿಕಾ ಕೈಗಾರಿಕೆಗಳನ್ನು ತೆರೆಯದಂತೆ ನಿರ್ಬಂಧ ವಿಧಿಸಿತ್ತು. ಲಕ್ಷಾಂತರ ಮಂದಿ ಕಾರ್ಮಿಕರು ಕೆಲಸ ಮಾಡುವ ಗಾರ್ಮೆಂಟ್‌ ಉದ್ಯಮಕ್ಕೂ ಕಾರ್ಯಾಚರಣೆ ನಡೆಸಲು ಅವಕಾಶ ನೀಡಬೇಕು ಎಂಬ ಒತ್ತಾಯ ಕೇಳಿಬಂದಿತ್ತು.

ಕೆಲಸದಿಂದ ವಜಾಗೊಳಿಸದಂತೆ ಮನವಿ
ಯಾವುದೇ ಉದ್ಯೋಗದಾತರು ಕರ್ಫ್ಯೂ ಅವಧಿಯಲ್ಲಿ ತನ್ನ ನೌಕರರನ್ನು ಕೆಲಸದಿಂದ ತೆಗೆದು ಹಾಕಬಾರದು ಮತ್ತು ವೇತನ ಕಡಿತ ಮಾಡಬಾರದು ಎಂದು ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್‌ ಮನವಿ ಮಾಡಿದ್ದಾರೆ.

ADVERTISEMENT

ಕರ್ಫ್ಯೂ ಅವಧಿಯಲ್ಲಿ ಉದ್ಯೋಗದಾತರು ನೌಕರರನ್ನು ಕೆಲಸದಿಂದ ತೆಗೆದು ಹಾಕುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಸಂಕಷ್ಟದ ಸಂದರ್ಭದಲ್ಲಿ ಅಂತಹ ನಿರ್ಧಾರಗಳನ್ನು ಕೈಗೊಳ್ಳಬಾರದು ಎಂದು ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ಪ್ರಕಟಿಸಿರುವ ಅಧಿಕೃತ ಮನವಿಯಲ್ಲಿ ಕೋರಿದ್ದಾರೆ.

ಕೆಲವು ಕಡೆಗಳಲ್ಲಿ ಮನೆ, ಕಟ್ಟಡಗಳ ಮಾಲೀಕರು ಮನೆ, ಪೇಯಿಂಗ್‌ ಗೆಸ್ಟ್‌ ಮತ್ತು ಅಂಗಡಿಗಳ ಬಾಡಿಗೆದಾರರನ್ನು ತೆರವುಗೊಳಿಸುತ್ತಿರುವುದೂ ಕಂಡುಬಂದಿದೆ. ಯಾವುದೇ ಕಟ್ಟಡಗಳ ಮಾಲೀಕರು ಬಾಡಿಗೆದಾರರನ್ನು ಬಲವಂತದಿಂದ ತೆರವುಗೊಳಿಸಬಾರದು ಎಂದು ಮುಖ್ಯ ಕಾರ್ಯದರ್ಶಿ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.