ADVERTISEMENT

ಕಲ್ಯಾಣ ಕರ್ನಾಟಕ: ಕೋವಿಡ್‌ನಿಂದ 156 ಶಿಕ್ಷಕರ ಸಾವು, ಶೈಕ್ಷಣಿಕ ವಲಯಕ್ಕೆ ನಷ್ಟ

ಮನೋಜ ಕುಮಾರ್ ಗುದ್ದಿ
Published 17 ಮೇ 2021, 19:30 IST
Last Updated 17 ಮೇ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕಲಬುರ್ಗಿ: ಕಳೆದ ವರ್ಷದ ಮಾರ್ಚ್‌ನಿಂದ ಪ್ರಸ್ತುತ ಮೇ 16ರವರೆಗೆಕಲ್ಯಾಣ ಕರ್ನಾಟಕದಲ್ಲಿ156 ಸರ್ಕಾರಿ ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿ ಕೋವಿಡ್‌ನಿಂದ ಸಾವಿಗೀಡಾಗಿದ್ದಾರೆ. ಅತಿ ಹೆಚ್ಚಿನ ಸಾವುಗಳು ಬೀದರ್‌ ಜಿಲ್ಲೆಯಲ್ಲಿ ಸಂಭವಿಸಿವೆ.

ಸಾರ್ವಜನಿಕ ಶಿಕ್ಷಣ ಇಲಾಖೆ ಈ ವಿವರವನ್ನು ಸಂಗ್ರಹಿಸಿದೆ. ಹುದ್ದೆ, ಇಲಾಖೆಗೆ ಸೇರ್ಪಡೆಯಾದ ವರ್ಷ, ಕೋವಿಡ್‌ ಕರ್ತವ್ಯ ಹಾಗೂ ಚುನಾವಣಾ ಕರ್ತವ್ಯದಲ್ಲಿದ್ದಾಗ ಸಾವು ಸಂಭವಿಸಿದೆಯೇ ಎಂಬ ಮಾಹಿತಿಯನ್ನು ಸಂಗ್ರಹಿಸಿ ಅದನ್ನು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌.ಸುರೇಶ್‌ಕುಮಾರ್‌ ಅವರಿಗೆ ಸಲ್ಲಿಸಿದೆ.

156 ಶಿಕ್ಷಕರ ಪೈಕಿ ಕೋವಿಡ್ ಕರ್ತವ್ಯಕ್ಕೆ ನಿಯೋಜಿತರಾಗಿದ್ದ ಆರು ಜನ ಹಾಗೂ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ 9 ಶಿಕ್ಷಕರು ಸೇರಿ 15 ಶಿಕ್ಷಕರು ಮೃತಪಟ್ಟಿದ್ದಾರೆ. ಈ ಶಿಕ್ಷಕರಿಗೆ ಕೋವಿಡ್‌ ವಾರಿಯರ್‌ಗಳಿಗೆ ನೀಡಲಾಗುವ ಪರಿಹಾರ ದೊರೆಯಲಿದೆ ಎಂದು ಶಿಕ್ಷಣ ಇಲಾಖೆ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ADVERTISEMENT

ಕೋವಿಡ್‌ ಮೊದಲ ಅಲೆಯ ಸಂದರ್ಭದಲ್ಲಿ ಮೃತಪಟ್ಟವ ಶಿಕ್ಷಕರ ಸಂಖ್ಯೆ ಹೆಚ್ಚಾಗಿಲ್ಲ. ಆದರೆ, ಏಪ್ರಿಲ್‌ನಿಂದ ಆರಂಭವಾದ ಎರಡನೇ ಅಲೆಯಲ್ಲಿ ಹೆಚ್ಚು ಜನ ಸಾವಿಗೀಡಾಗಿದ್ದಾರೆ.

‘ಇಲಾಖೆ ಸೂಚಿಸಿದಂತೆ ವಿದ್ಯಾರ್ಥಿಗಳಿಲ್ಲದಿದ್ದರೂ ಶಾಲೆಗಳಿಗೆ ಭೇಟಿ ನೀಡಿ ಕರ್ತವ್ಯ ನಿರ್ವಹಿಸಿದ್ದಾರೆ. ವಿದ್ಯಾಗಮ ಯೋಜನೆಯಡಿ ಪಾಠ ಹೇಳಿದವರಿಗೂ ಕೋವಿಡ್‌ ತಗುಲಿದೆ. ಸರ್ಕಾರದ ಮಾನದಂಡಗಳ ಪ್ರಕಾರ ಇವರಿಗೆ ಕೋವಿಡ್‌ ಸಂಬಂಧಿ ಕೆಲಸದಲ್ಲಿ ತೊಡಗಿದ್ದಾರೆ ಎಂದು ಪರಿಗಣಿಸುವುದಿಲ್ಲ. ಈ ನಿಯಮವನ್ನು ಸಡಿಲಿಸಿ ಕೋವಿಡ್‌ನಿಂದ ಮೃತಪಟ್ಟ ಎಲ್ಲ ಶಿಕ್ಷಕರಿಗೂ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು’ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಸಚಿವ ಸುರೇಶಕುಮಾರ್ ಅವರಿಗೆ ಮನವಿ ಸಲ್ಲಿಸಿದೆ.

ಕೋವಿಡ್‌ನಿಂದ ಸಾವಿಗೀಡಾದ ಎಲ್ಲಶಿಕ್ಷಕರನ್ನು ಕೊರೊನಾ ವಾರಿಯರ್‌ಗಳೆಂದು ಪರಿಗಣಿಸಿ ₹ 1 ಕೋಟಿ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು. ಕೋವಿಡ್‌ ರೋಗಿಗಳ ಸಂಪೂರ್ಣ ವೈದ್ಯಕೀಯ ವೆಚ್ಚವನ್ನು ಭರಿಸಬೇಕು ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಲಿ ಒತ್ತಾಯಿಸಿದ್ದಾರೆ.

****

ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡ 15 ಜನ ಶಿಕ್ಷಕರು ಮೃತಪಟ್ಟಿದ್ದು, ಪರಿಹಾರ ನೀಡುವ ಸಂಬಂಧ ಸರ್ಕಾರಕ್ಕೆ ಮಾಹಿತಿ ಕಳಿಸಿದ್ದೇವೆ.

- ಡಾ. ಬಿಕೆಎಸ್ ವರ್ಧನ್, ನಿರ್ದೇಶಕ‌, ಸಾರ್ವಜನಿಕ ಶಿಕ್ಷಣ ಇಲಾಖೆ, ಕಲಬುರ್ಗಿ ವಿಭಾಗ

ಶಿಕ್ಷಣ ಇಲಾಖೆ ವ್ಯಾಪ್ತಿಯ ಜಿಲ್ಲೆಗಳಲ್ಲಿ ಕೋವಿಡ್ ಹಾಗೂ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡ 15 ಜನ ಶಿಕ್ಷಕರು ಮೃತಪಟ್ಟಿದ್ದು, ನಿಯಮಾನುಸಾರ ಪರಿಹಾರ ನೀಡುವ ಸಂಬಂಧ ಸರ್ಕಾರಕ್ಕೆ ಮಾಹಿತಿ ಕಳಿಸಿದ್ದೇವೆ.

- ಡಾ.ಬಿಕೆಎಸ್ ವರ್ಧನ್, ನಿರ್ದೇಶಕ‌, ಸಾರ್ವಜನಿಕ ಶಿಕ್ಷಣ ಇಲಾಖೆ, ಕಲಬುರ್ಗಿ ವಿಭಾಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.