ADVERTISEMENT

4 ಲಕ್ಷ ಮಂದಿ ಕೋವಿಡ್‌ ಮುಕ್ತ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2020, 18:03 IST
Last Updated 19 ಸೆಪ್ಟೆಂಬರ್ 2020, 18:03 IST

ಬೆಂಗಳೂರು: ಕೋವಿಡ್‌ ಪೀಡಿತರಲ್ಲಿ ಮತ್ತೆ 10,815 ಮಂದಿಗೆ ಕಾಯಿಲೆ ವಾಸಿಯಾಗಿದೆ. ಇದರೊಂದಿಗೆ ರಾಜ್ಯದಲ್ಲಿ ಒಟ್ಟು ಗುಣಮುಖರಾದವರ ಸಂಖ್ಯೆ 4 ಲಕ್ಷದ ಗಡಿ ದಾಟಿದೆ.

ಈ ತಿಂಗಳ 19 ದಿನಗಳಲ್ಲಿಯೇ ಸೋಂಕಿತರಲ್ಲಿ 1.55 ಲಕ್ಷ ಮಂದಿ ಚೇತರಿಸಿಕೊಂಡಿದ್ದಾರೆ. ಈ ಅವಧಿಯಲ್ಲಿ ಪ್ರತಿನಿತ್ಯ ಸರಾಸರಿ 8,177 ಮಂದಿಗೆ ಕಾಯಿಲೆ ವಾಸಿಯಾಗಿದೆ. ರಾಜ್ಯದಲ್ಲಿ ಹೊಸದಾಗಿ 8,364 ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 5.11ಲಕ್ಷಕ್ಕೆ ಏರಿಕೆಯಾಗಿದೆ. ಈ ತಿಂಗಳು 1.67 ಲಕ್ಷ ಮಂದಿ ಕೋವಿಡ್ ಪೀಡಿತರಾಗಿದ್ದಾರೆ. ಸೋಂಕಿತರಲ್ಲಿ ಬೆಂಗಳೂರಿನಲ್ಲಿ 33 ಮಂದಿ ಸೇರಿದಂತೆ ರಾಜ್ಯದಲ್ಲಿ 114 ಮಂದಿ ಮೃತಪಟ್ಟಿರುವುದು ದೃಢಪಟ್ಟಿದ್ದು, ಈವರೆಗೆ ಕೋವಿಡ್‌ಗೆ ಸಾವಿಗೀಡಾದವರ ಸಂಖ್ಯೆ 7,922ಕ್ಕೆ ಏರಿಕೆಯಾಗಿದೆ.

ಒಂದೇ ದಿನ 63,784 ಮಂದಿಗೆ ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗಿದೆ. ಈವರೆಗೆ ಪರೀಕ್ಷೆ ಮಾಡಿಸಿಕೊಂಡವರ ಸಂಖ್ಯೆ 41.79 ಲಕ್ಷಕ್ಕೆ ಏರಿಕೆಯಾಗಿದೆ. ಕಳೆದ 14 ದಿನಗಳ ಅವಧಿಯಲ್ಲಿ ಸೋಂಕಿತರೊಂದಿಗೆ ನೇರ ಸಂಪರ್ಕ ಹೊಂದಿದ್ದ 6 ಲಕ್ಷ ಮಂದಿ ಹಾಗೂ ಪರೋಕ್ಷ ಸಂಪರ್ಕ ಹೊಂದಿದ್ದ 5.51 ಲಕ್ಷ ಮಂದಿಯನ್ನು ಪತ್ತೆ ಮಾಡಲಾಗಿದೆ. ಸದ್ಯ 4.83 ಲಕ್ಷ ಮಂದಿ ಮನೆ ಕ್ವಾರಂಟೈನ್‌ನಲ್ಲಿ ಇದ್ದಾರೆ. ತೀವ್ರ ನಿಗಾ ಘಟಕಕ್ಕೆ (ಐಸಿಯು) ದಾಖಲಾಗುವ ರೋಗಿಗಳ ಸಂಖ್ಯೆ ಏರಿಕೆ ಕಂಡಿದ್ದು, ಸದ್ಯ 822 ಸೋಂಕಿತರು ಐಸಿಯುವಿನಲ್ಲಿ ಇದ್ದಾರೆ.

ADVERTISEMENT

ಬೆಂಗಳೂರಿನಲ್ಲಿ ಹೊಸದಾಗಿ 3,733 ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ 1.91 ಲಕ್ಷ ದಾಟಿದೆ. ಮೈಸೂರಿನಲ್ಲಿ ಮತ್ತೆ 626 ಮಂದಿ ಕೋವಿಡ್‌ ಪೀಡಿತರಾಗಿದ್ದಾರೆ. ಅಲ್ಲಿ ಒಟ್ಟು ಸೋಂಕಿತರ ಸಂಖ್ಯೆ 29 ಸಾವಿರ ದಾಟಿದೆ. ದಕ್ಷಿಣ ಕನ್ನಡ (432), ಗದಗ (391), ಬಳ್ಳಾರಿ (300) ಜಿಲ್ಲೆಯಲ್ಲಿಯೂ ಅಧಿಕ ಪ್ರಕರಣಗಳು ಹೊಸದಾಗಿ ವರದಿಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.