ADVERTISEMENT

ಕೊರೊನಾ ಜತೆಗೆ ತಾರತಮ್ಯದ ಮನಸ್ಸೂ ತೊಲಗಲಿ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2020, 20:09 IST
Last Updated 14 ಏಪ್ರಿಲ್ 2020, 20:09 IST
ಹಿರಿಯ ಕಾದಂಬರಿಕಾರ ಎಸ್‌.ಎಲ್‌.ಭೈರಪ್ಪ
ಹಿರಿಯ ಕಾದಂಬರಿಕಾರ ಎಸ್‌.ಎಲ್‌.ಭೈರಪ್ಪ   

ಕೊರೊನಾ ತಲ್ಲಣ ತಂದ ‘ಸಾಮಾಜಿಕ ಅಂತರ’ ಇದೀಗ ಚರ್ಚೆಗೆ ಗ್ರಾಸವಾಗಿದೆ. ಇದು ರೋಗವನ್ನು ಪರಿಣಾಮಕಾರಿಯಾಗಿ ತಡೆಯಲು ಸೂಚಿಸಿರುವ ಮಾರ್ಗ. ಆರೋಗ್ಯದ ದೃಷ್ಟಿಗೆ ಮಾತ್ರ ಸೀಮಿತ. ಆರೋಗ್ಯಪೂರ್ಣ ಸಮಾಜದ ದೃಷ್ಟಿಗೆ ಇದು ಸಲ್ಲ. ಸಾಮಾಜಿಕ ಅಂತರ ಎನ್ನುವ ಶಬ್ದ ನಮಗೆ ಏನೇನನ್ನೋ ನೆನಪಿಸುತ್ತದೆ. ಭಾರತದಲ್ಲಿದ್ದ ಹಳೆಯ ಪದ್ಧತಿಯನ್ನು ಹೊಗಳುವ ಮತ್ತು ಅದೇ ಸರಿ ಇತ್ತು ಎನ್ನುವ ಮಾತು ಸಾಮಾಜಿಕ ಜಾಲ ತಾಣದಲ್ಲಿ ಹಾರಾಡಲು ಆರಂಭಿಸಿಬಿಟ್ಟಿದೆ. ಈ ಹಿನ್ನೆಲೆಯಲ್ಲಿ ನಾಡಿನ ಸಂವೇದನಾಶೀಲರು ‘ಸ್ಪರ್ಶವಿಲ್ಲದೇ ಬದುಕೇ ಇಲ್ಲ’ ಎನ್ನುವ ಮೂಲಕ ಮುಟ್ಟುವುದರ ಮಹತ್ವವನ್ನು ಇಲ್ಲಿ ಹೇಳಿದ್ದಾರೆ.

***

ಕೊರೊನಾ ವೈರಸ್‌ನ ಸಂದರ್ಭದಲ್ಲಿ ಚರ್ಚೆಯಾಗುತ್ತಿರುವ ‘ಸಾಮಾಜಿಕ ಅಂತರ’ದ ಪರಿಕಲ್ಪನೆಯನ್ನು ಖಂಡಿತವಾಗಿಯೂ ನಮ್ಮಲ್ಲಿ ಪ್ರಚಲಿತವಾಗಿರುವ ಮಡಿ–ಮೈಲಿಗೆಗಳ ಪರಿಕಲ್ಪನೆಯೊಂದಿಗೆ ಹೋಲಿಸಬಾರದು. ಕೊರೊನಾ ವೈರಸ್‌ನಿಂದ ಬರುವ ಕೋವಿಡ್‌ –19 ರೋಗ ಒಬ್ಬರಿಂದ ಒಬ್ಬರಿಗೆ ಬಹುಬೇಗ ಹರಡುವಂಥದ್ದು; ಹೀಗಾಗಿ ಈ ರೋಗವನ್ನು ತಡೆಯಲು ಸಾಮಾಜಿಕ ಅಂತರ ಅನಿವಾರ್ಯ ಎಂದು ವೈದ್ಯ ವಿಜ್ಞಾನ ಗುರುತಿಸಿದೆ; ಈ ಅಂತರವನ್ನು ಪಾಲಿಸಿದರೆ ರೋಗದ ಹರಡುವಿಕೆ ನಿಲ್ಲುತ್ತದೆ. ಇದೊಂದು ವೈಜ್ಞಾನಿಕ ಸತ್ಯ. ಇದಕ್ಕೂ ನಮ್ಮ ಹಿಂದಿನ ಯಾವುದೋ ಆಚರಣೆಗಳಿಗೂ ಸೋಷಿಯಾಲಜಿಯ ಮತ್ತ್ಯಾವುದೋ ಸಂಗತಿಗಳಿಗೂ ಬೆಸುಗೆ ಹಾಕುವುದು ಸಲ್ಲದು. ಗಂಭೀರ ವಿಷಯದ ಬಗ್ಗೆ ಇಂಥ ಹುಡುಗಾಟಿಕೆಯನ್ನು ಒಪ್ಪಲಾಗದು.

ADVERTISEMENT

-ಡಾ. ಎಸ್‌. ಎಲ್‌. ಭೈರಪ್ಪ ಕಾದಂಬರಿಕಾರ

***

ಕೊರೊನಾ ಸಾಂಕ್ರಾಮಿಕ ವೈರಸ್‌ ಮನುಷ್ಯರನ್ನು ಉದುರಿಸುತ್ತಿದೆ. ಬೇರೆಯವರನ್ನ ಮುಟ್ಟುವುದು ಇರಲಿ, ನಮ್ಮ ನಮ್ಮ ಕೈಯಿಂದಲೇ ನಮ್ಮ ನಮ್ಮ ಬಾಯಿ, ಕಣ್ಣು, ಮೂಗು ಮುಟ್ಟಲು ಆತಂಕ ಪಡುವಂತೆ ಮಾಡಿಬಿಟ್ಟಿದೆ. ಈ ಪರಿಸ್ಥಿತಿಯು ಮಾನವ ಕುಲ ತನ್ನನ್ನು ತಾನು ನೋಡಿಕೊಳ್ಳಲು ಕಾರಣವಾಗಬೇಕು. ಆದರೆ, ಭಾರತದಲ್ಲಿ ಕೊರೊನಾದಿಂದ ತಪ್ಪಿಸಿಕೊಳ್ಳಲು ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂಬುದನ್ನೂ ಹಿಂದಿನ ಜಾತಿಧರ್ಮ ಪದ್ಧತಿಯನ್ನು ಸಮರ್ಥಿಸಿಕೊಳ್ಳಲು ಬಳಸಿಕೊಳ್ಳಲಾಗುತ್ತಿದೆ. ಭಾರತದಲ್ಲಿ ಪಳಿಯುಳಿಕೆಯಂತೆ ಒಂದಿಷ್ಟು ಉಳಿದಿರುವ ಜಾತಿಧರ್ಮದ ರೋಗಿಷ್ಠ ಮನಸ್ಸನ್ನು ತೊಡೆದುಹಾಕಲು ದೇವರೂ ಅಸಮರ್ಥನೇನೋ. ಹಾಗಾಗಿ ಅಸಹಾಯಕನಾಗಿ ಕೊರೊನಾಗೇನೇ ಪ್ರಾರ್ಥಿಸುವೆ–‘ಕೊರೊನಾ ಆದಷ್ಟು ಬೇಗ ನಿರ್ಗಮಿಸು. ನೀನು ನಿರ್ಗಮಿಸುವಾಗ ಭಾರತದ ಜಾತಿಧರ್ಮದ ಸಾಮಾಜಿಕ ಅಂತರ, ತಾರತಮ್ಯ ರೋಗದ ವೈರಸನ್ನು ದಯವಿಟ್ಟು ನಿನ್ನೊಡನೆಯೇ ಕೊಂಡೊಯ್ಯೊ’.

-ದೇವನೂರ ಮಹಾದೇವ,ಸಾಹಿತಿ

***

ನಮ್ಮ ಪುರಾತನ ಪದ್ಧತಿಗಳು ಅರ್ಥಪೂರ್ಣ, ಪರಿಣಾಮಕಾರಿಯಾಗಿದ್ದವು. ಅವುಗಳನ್ನು ಆಚರಣೆಗೆ ತರುವಾಗ ಸ್ವಲ್ಪ ಹೆಚ್ಚು ಕಮ್ಮಿ ಆಗಿದೆ. ಆದರೆ, ಮುಖ್ಯವಾಗಿ ನಮ್ಮ ಆಹಾರ ಪದ್ಧತಿಯಲ್ಲಿ ಸಾಕಷ್ಟು ಔಷಧೀಯ ಗುಣವುಳ್ಳ ಪದಾರ್ಥಗಳನ್ನು ಬಳಕೆ ಮಾಡುತ್ತೇವೆ. ಅವೆಲ್ಲವೂ ರೋಗವನ್ನು ನಿಯಂತ್ರಿಸುವವೇ ಆಗಿವೆ. ಅದೇ ರೀತಿ ಸಾಮಾಜಿಕ ಅಂತರ ಕೂಡ. ಅದರಲ್ಲಿ ಕೋಮು ಎನ್ನುವ ಅಂಶವೊಂದನ್ನು ಬಿಟ್ಟುಬಿಟ್ಟರೆ, ಅದರ ಮೂಲ ಉದ್ದೇಶ ಆರೋಗ್ಯವಾಗಿರಬೇಕು ಎನ್ನುವುದೇ ಆಗಿದೆ. ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು. ಇಲ್ಲದೇ ಕೊರೊನಾ ಹೋರಾಟದಲ್ಲಿ ಯಶಸ್ಸು ಸಿಗುವುದಿಲ್ಲ. ಜಾತಿಭೇದ, ಅಸ್ಪೃಶತೆಯನ್ನು ಒಪ್ಪಲು ಸಾಧ್ಯವಿಲ್ಲ. ಅದೆಲ್ಲವನ್ನೂ ದಾಟಿ ತುಂಬಾ ಮುಂದೆ ಬಂದಿದ್ದೀವಿ. ಈಗ ಅದರತ್ತ ತಿರುಗಿ ನೋಡುವುದು ಸರಿಯಲ್ಲ.

-ವೀಣಾ ಶಾಂತೇಶ್ವರ,ಲೇಖಕಿ

***

ನಾನು ಬರೆದ ‘ಮುಟ್ಟು’ ಎನ್ನುವ ಸಾನೆಟ್‌ನಲ್ಲಿ ಸ್ಪಷ್ಟವಾಗಿ ಸ್ಪರ್ಶದ ಬಗ್ಗೆ ಹೇಳಿದ್ದೀನಿ. ಮುಟ್ಟುವುದು ಶ್ರೇಷ್ಠವಾದುದು, ಮುಟ್ಟದಿರುವುದು ಮೈಲಿಗೆ. ಮುಟ್ಟುವುದೇ ಮಡಿ, ಏಕೆಂದರೆ, ಭೂಮಿಯನ್ನು ಮುಟ್ಟುವುದಕ್ಕೋಸ್ಕರವೇ ಸೂರ್ಯಕಿರಣಗಳು ಪ್ರಯಾಣ ಮಾಡಿ ಭೂಮಿಗೆ ಬರುತ್ತವೆ. ಅವು ಭೂಮಿಯನ್ನು ಮುಟ್ಟುವುದರಿಂದ ಭೂಮಿ ಸೃಷ್ಟಿಶೀಲವಾಗುತ್ತದೆ. ಮುಟ್ಟು ಎನ್ನುವುದು ಮುಖ್ಯ. ಪ್ರೀತಿಯಿಂದ ಮುಟ್ಟುವಾಗ ಇಡೀ ಜಗತ್ತು ಸೃಷ್ಟಿ ಆಗುವುದು. ಆದುದರಿಂದ ಮೈಲಿಗೆ ಅನ್ನೋದು ಇದೆಯಲ್ಲಾ, ಇದನ್ನ ನಾವು ಮಾಡಿಕೊಂಡಿರುವುದು ಅಷ್ಟೆ. ಈ ಭಾವ ಹೋಗಬೇಕು. ನನ್ನ ದೃಷ್ಟಿಯಲ್ಲಿ ಮುಟ್ಟುವುದು ಬಹಳ ಮುಖ್ಯವಾದದು, ಪವಿತ್ರವಾದದು.

-ಡಾ.ಎಚ್‌.ಎಸ್‌.ವೆಂಕಟೇಶಮೂರ್ತಿ,ಕವಿ

***

ಅಸ್ಪೃಶ್ಯತೆ ಮತ್ತು ಸಾಮಾಜಿಕ ಅಂತರವನ್ನು ಒಂದಾಗಿ ನೋಡುವುದಕ್ಕೆ ಸಾಧ್ಯವೇ ಇಲ್ಲ. ಮನುಷ್ಯರನ್ನು ಮುಟ್ಟದೇ ಬದುಕಲು ಸಾಧ್ಯವೇ? ಈಗ ಕೊರೊನಾ ವೈರಸ್‌ ಕಾರಣಕ್ಕಾಗಿ ನಾವು ದೂರ ಇದ್ದೇವೆ. ಪರಸ್ಪರರನ್ನು ಮುಟ್ಟದೆಯೇ, ಆರೈಕೆ ಮಾಡದೇ ಇರಲು ಸಾಧ್ಯವೇ? ಮಗು ಹುಟ್ಟಿದಾಗ ದೃಷ್ಟಿ ಸರಿಯಾಗಿ ಇರುವುದಿಲ್ಲ. ತಾಯಿಯ ಸ್ಪರ್ಶ ಮತ್ತು ಬೆವರಿನ ವಾಸನೆಯಿಂದ ಮಗು ಅಮ್ಮನನ್ನು ಕಂಡು ಹಿಡಿಯುತ್ತದೆ. ಜಾತಿಯ ಮನಸ್ಸುಗಳು ಹೇಗಾದರೂ ಮಾಡಿ ಜಾತಿಯನ್ನು ಉಳಿಸಿಕೊಳ್ಳುವ ಯತ್ನ ಮಾಡುತ್ತಿರುತ್ತವೆ. ಇದು ಜೀವವಿರೋಧಿ. ’ಅಸ್ಪೃಶತೆ ಧರ್ಮ ಸಮ್ಮತವಾದ ಆಚರಣೆ ಅಲ್ಲ. ಅದು ಹಿಂದೂ ಧರ್ಮಕ್ಕೆ ಮಾತ್ರವಲ್ಲ, ಮಾನವತೆಗೇ ಅಪಚಾರ ಮಾಡಿರುವಂತಹ ಆಚರಣೆ‘ ಎಂದು ಗಾಂಧೀಜಿ ಹೇಳಿರುವುದು ಈಗ ನೆನಪಾಗುತ್ತಿದೆ.

-ದು.ಸರಸ್ವತಿ,ಸಾಮಾಜಿಕ ಕಾರ್ಯಕರ್ತೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.