ADVERTISEMENT

ಅನಗತ್ಯ ಹೊರಬಂದರೆ ಬಂಧನ: ಉತ್ತರ ವಲಯ ಡಿಐಜಿ ಸೇತುರಾಮನ್‌

ಕಾಸರಗೋಡು ಜಿಲ್ಲೆಯಲ್ಲಿ 44 ಮಂದಿಗೆ ಕೋವಿಡ್‌–19

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2020, 11:11 IST
Last Updated 26 ಮಾರ್ಚ್ 2020, 11:11 IST
   

ಮಂಗಳೂರು: ಕಾಸರಗೋಡು ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 44 ಮಂದಿಯಲ್ಲಿ ಕೋವಿಡ್‌ –19 ದೃಢಪಟ್ಟಿದೆ. ಈ ಪೈಕಿ 41 ಮಂದಿ ಇನ್ನೂ ಚಿಕಿತ್ಸೆಯಲ್ಲಿದ್ದು, ಮೂವರು ಗುಣಮುಖರಾಗಿ ಬಿಡುಗಡೆ ಆಗಿದ್ದಾರೆ.

ಜಿಲ್ಲೆಯಲ್ಲಿ 2,470 ಮಂದಿ ನಿಗಾದಲ್ಲಿದ್ದಾರೆ. ಈ ಪೈಕಿ 61 ಮಂದಿ ಆಸ್ಪತ್ರೆಗಳ ಐಸೋಲೇಶನ್‌ ವಾರ್ಡ್‌ಗಳಲ್ಲಿದ್ದಾರೆ. 825 ಮಂದಿ ಕೊರೊನಾ ನಿಯಂತ್ರಣಕ್ಕಿರುವ ಜಿಲ್ಲಾ ಕೇಂದ್ರದಲ್ಲಿ ನೇರವಾಗಿ ನಿಗಾದಲ್ಲಿದ್ದಾರೆ. ಉಳಿದ 1,584 ಮಂದಿ ವಿವಿಧ ಪಂಚಾಯಿತಿ, ನಗರಸಭೆ ವಾರ್ಡ್‌ಗಳ ಜಾಗೃತಾ ಸಮಿತಿಗಳ ನೇತೃತ್ವದಲ್ಲಿ ನಿಗಾದಲ್ಲಿದ್ದಾರೆ ಎಂದು ಕಾಸರಗೋಡು ಡಿಎಂಒ ಡಾ.ಎ.ವಿ. ರಾಮದಾಸ್‌ ತಿಳಿಸಿದ್ದಾರೆ.

ವಿದೇಶದಿಂದ ಮಾರ್ಚ್‌ 1 ರಿಂದ ಕಾಸರಗೋಡು ಜಿಲ್ಲೆಗೆ ತಲುಪಿದವರ ಹೆಸರು ಸೇರಿದಂತೆ ಪೂರ್ಣ ವಿವರಗಳನ್ನು ಜಿಲ್ಲಾ ಪೊಲೀಸರು ಸಂಗ್ರಹಿಸಿದ್ದಾರೆ. 4 ಸಾವಿದರಷ್ಟು ಮಂದಿ ಮಂಗಳೂರು, ಕಣ್ಣೂರು, ಕರಿಪ್ಪೂರ್‌ (ಕ್ಯಾಲಿಕಟ್‌), ನೆಡುಂಬಾಶ್ವೇರಿ (ಕೊಚ್ಚಿ), ತಿರುವನಂತಪುರ ವಿಮಾನ ನಿಲ್ದಾಣಗಳ ಮೂಲಕ ಬಂದವರಾಗಿದ್ದಾರೆ.

ADVERTISEMENT

ಇವರ ಮನೆಗಳಿಗೆ ಆಯಾಯ ಪೊಲೀಸ್‌ ಠಾಣೆಗಳ ಪೊಲೀಸರು ತೆರಳಿ, ಅವರ ಎಲ್ಲ ಮಾಹಿತಿಗಳನ್ನು ಸಂಗ್ರಹಿಸುತ್ತಿದ್ದಾರೆ. ಅಂಥವರು ಪೊಲೀಸ್‌ ನಿಗಾದಲ್ಲಿರುತ್ತಾರೆ. ನಿಗಾ ಕಾಲಾವಧಿಗೂ ಮುನ್ನವೇ ಹೊರಗೆ ಬಂದರೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಉತ್ತರ ವಲಯ ಡಿಐಜಿ ಸೇತುರಾಮನ್‌ ನೇತೃತ್ವದಲ್ಲಿ ನಡೆದ ಉನ್ನತ ಪೊಲೀಸ್‌ ಅಧಿಕಾರಿಗಳ ಸಭೆಯಲ್ಲಿ ಸೂಚನೆ ನೀಡಲಾಗಿದೆ.

ಕಾಸರಗೋಡು ಜಿಲ್ಲೆಯಲ್ಲಿ ಬೆಳಿಗ್ಗೆ 11 ರಿಂದ ಸಂಜೆ 5 ಗಂಟೆಯವರೆಗೆ ಬೇಕರಿಗಳು ತೆರೆಯಬೇಕು. ಆದರೆ ಬೇಕರಿ ಅಂಗಡಿಗಳಲ್ಲಿ ಚಾಯ, ಕಾಫಿ ಸಹಿತ ಪಾನೀಯಗಳನ್ನು ವಿತರಿಸಬಾರದು. ಯಾವುದೇ ಕಾರಣಕ್ಕೂ ಅಂಗಡಿಗಳಲ್ಲಿ ಗುಂಪು ಸೇರಬಾರದು ಎಂದು ಜಿಲ್ಲಾಧಿಕಾರಿ ಡಾ.ಡಿ. ಸಜಿತ್‌ ಬಾಬು ತಿಳಿಸಿದ್ದಾರೆ.

ಅನಗತ್ಯವಾಗಿ ಮನೆಯಿಂದ ಹೊರಗೆ ಬಂದು ತಿರುಗಾಡುವವರನ್ನು ಬಂಧಿಸಲು ತೀರ್ಮಾನಿಸಲಾಗಿದೆ. ಇದಕ್ಕಾಗಿ 10 ವಾಹನಗಳಲ್ಲಿ 50 ಮಂದಿ ಪೊಲೀಸರನ್ನು ನೇಮಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.