ADVERTISEMENT

ನಾಳೆಯಿಂದ ಜಿಮ್‌ ‘ಯೋಗ’; ಮಾರ್ಗಸೂಚಿ ಬಿಡುಗಡೆ

ಕೇಂದ್ರ ಸರ್ಕಾರದ ಷರತ್ತುಬದ್ಧ ಅನುಮತಿ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2020, 22:13 IST
Last Updated 3 ಆಗಸ್ಟ್ 2020, 22:13 IST
ಜಿಮ್‌ನಲ್ಲಿ ಕಸರತ್ತು– ಸಾಂದರ್ಭಿಕ ಚಿತ್ರ
ಜಿಮ್‌ನಲ್ಲಿ ಕಸರತ್ತು– ಸಾಂದರ್ಭಿಕ ಚಿತ್ರ   

ನವದೆಹಲಿ: ಕೋವಿಡ್‌ ಹರಡುವಿಕೆ ತಡೆಯ ಭಾಗವಾಗಿ ಮುಚ್ಚಲಾಗಿದ್ದ ಜಿಮ್‌ ಮತ್ತು ಯೋಗಕೇಂದ್ರಗಳು ಬುಧವಾರದಿಂದ ಬಾಗಿಲು‌ ತೆರೆಯಲಿವೆ.

ಜಿಮ್‌ ಮತ್ತು ಯೋಗ ಕೇಂದ್ರಗಳ ಕಾರ್ಯಾರಂಭಕ್ಕೆ ಕೇಂದ್ರ ಸರ್ಕಾರ ಸೋಮವಾರ ಷರತ್ತುಬದ್ಧ ಒಪ್ಪಿಗೆ ನೀಡಿದೆ. ಆದರೆ, ಸ್ಪಾ, ಸ್ಟೀಮ್‌ ಬಾತ್‌, ಈಜು ಕೊಳ, ಸ್ನಾನಗೃಹಗಳನ್ನು ತೆರೆಯಲು ಸದ್ಯಕ್ಕೆ ಒಪ್ಪಿಗೆ ನೀಡಿಲ್ಲ.

ಈ ಸಂಬಂಧ ಕೇಂದ್ರ ಆರೋಗ್ಯ ಸಚಿವಾಲಯವು ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದು, ಅನುಸರಿಸಬೇಕಾದ ಸುರಕ್ಷತೆ ಮತ್ತು ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ತಿಳಿಸಿದೆ.

ADVERTISEMENT

ಕೊರೊನಾ ಸೋಂಕು ಹರಡದಂತೆ ತಡೆಯಲು ವ್ಯಾಯಾಮ ಅಥವಾ ಯೋಗ ಮಾಡುವಾಗ ಮಾಸ್ಕ್‌ ಬದಲು ಫೇಸ್‌ಶೀಲ್ಡ್‌ (ವೈಸರ್‌) ಬಳಸುವಂತೆ ಸೂಚಿಸಿದೆ. ವ್ಯಕ್ತಿಗಳ ಮಧ್ಯೆಕಡ್ಡಾಯವಾಗಿ ಆರು ಅಡಿ ಅಂತರ ಕಾಯ್ದುಕೊಳ್ಳುವಂತೆ ಸಲಹೆ ಮಾಡಿದೆ. ತರಬೇತಿ ಕೇಂದ್ರಗಳ‌ ಆವರಣದಲ್ಲಿರುವಾಗ ಮಾಸ್ಕ್‌ ಅಥವಾ ಫೇಸ್‌ ಶೀಲ್ಡ್‌ ಧರಿಸುವುದು ಕಡ್ಡಾಯ ಎಂದು ಹೇಳಿದೆ.

ಆರೋಗ್ಯ ಇಲಾಖೆ ಮಾರ್ಗಸೂಚಿ

*ವ್ಯಾಯಾಮ ಮಾಡುವಾಗ ಉಸಿರಾಟಕ್ಕೆ ತೊಂದರೆಯಾಗುವುದರಿಂದ ಮಾಸ್ಕ್‌ ಬದಲು ಫೇಸ್‌ಶೀಲ್ಡ್‌ ಅಥವಾ ಫೇಸ್‌ ಕವರ್‌ ಬಳಸುವುದು ಸೂಕ್ತ

*ಜಿಮ್‌ ಸಿಬ್ಬಂದಿ ಮತ್ತು ಬಳಕೆದಾರರ ಮಧ್ಯೆ ಸಾಧ್ಯವಾದಷ್ಟು ಸಂಪರ್ಕ ಕಡಿಮೆಗೊಳಿಸುವುದು ಉತ್ತಮ

*ಎಲ್ಲ ಯೋಗ ಕೇಂದ್ರ ಮತ್ತು ಜಿಮ್‌ಗಳು ಬಳಕೆದಾರರಿಗೆ ಮಾಸ್ಕ್, ಸ್ಯಾನಿಟೈಸರ್‌, ಫೇಸ್‌ ಕವರ್‌, ವೈಸರ್ ಒದಗಿಸಬೇಕು

*ಯೋಗ ತರಗತಿಯಲ್ಲಿ ಎಲ್ಲರೂ ಪ್ರತ್ಯೇಕ ಮ್ಯಾಟ್‌ ಬಳಸಬೇಕು. ಒಬ್ಬರು ಬಳಸಿದ ಮ್ಯಾಟ್‌ ಅನ್ನು ಮತ್ತೊಬ್ಬರು ಬಳಸುವಂತಿಲ್ಲ

*ವ್ಯಾಯಾಮ ಆರಂಭಿಸುವ ಮೊದಲು ಪಲ್ಸ್‌ ಆಕ್ಸಿಮೀಟರ್‌ ಮೂಲಕ ದೇಹದಲ್ಲಿನ ಆಮ್ಲಜನಕ ಪ್ರಮಾಣ ಪರೀಕ್ಷಿಸಬೇಕು. ಎಲ್ಲ ಜಿಮ್ ಮತ್ತು ಯೋಗಕೇಂದ್ರ‌ಗಳಲ್ಲಿ ‘ಪಲ್ಸ್‌ ಆಕ್ಸಿಮೀಟರ್’ ಕಡ್ಡಾಯವಾಗಿ ಇಡಬೇಕು

*ದೇಹದಲ್ಲಿ ಆಮ್ಲಜನಕ ಮಟ್ಟ ಶೇ 95ಕ್ಕಿಂತ ಕಡಿಮೆ ಇದ್ದರೆ ವ್ಯಾಯಾಮ ಮಾಡಲು ಅವಕಾಶ ನೀಡಬಾರದು

*ಆರೋಗ್ಯ ಸಮಸ್ಯೆ ಇರುವವರು, 65 ವರ್ಷಕ್ಕೂ ಮೇಲ್ಪಟ್ಟ ವ್ಯಕ್ತಿಗಳು, ಗರ್ಭಿಣಿಯರು ಮತ್ತು ಹತ್ತು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಜಿಮ್‌ ಬಳಸುವುದು ಬೇಡ

*ಕಷ್ಟಕರವಾದ ಯೋಗ ಕ್ರಿಯೆಗಳನ್ನು ಸದ್ಯಕ್ಕೆ ಅಭ್ಯಾಸ ಮಾಡದಿರುವುದು ಒಳ್ಳೆಯದು. ಒಂದು ವೇಳೆ ಮಾಡುವುದಾದರೆ ಬಯಲು ಪ್ರದೇಶಗಳಲ್ಲಿ ಮಾಡುವುದು ಒಳಿತು

*ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಯೋಗ ಕೇಂದ್ರ ಮತ್ತು ಜಿಮ್‌ಗಳ ಒಳಾಂಗಣ ವಿನ್ಯಾಸಗಳನ್ನು ಬದಲಿಸಬೇಕು

*ಜಿಮ್ ಸಾಧನ, ಸಲಕರಣೆಗಳ ಮಧ್ಯೆ ಕನಿಷ್ಠ ಆರು ಅಡಿ ಅಂತರವಿರುವಂತೆ ಮರು ವಿನ್ಯಾಸ ಮಾಡಬೇಕು

*ತರಬೇತಿ ಕೇಂದ್ರದ ಸಿಬ್ಬಂದಿ ಆದಷ್ಟೂ ವರ್ಕೌಟ್‌ ಪ್ರದೇಶಕ್ಕೆ ತೆರಳದಂತೆ ನೋಡಿಕೊಳ್ಳಬೇಕು

*ಜನದಟ್ಟಣೆ ತಪ್ಪಿಸಲು ಎರಡು ತರಗತಿಗಳ ಮಧ್ಯೆ ಕನಿಷ್ಠ 15ರಿಂದ 30 ನಿಮಿಷ ಅಂತರವಿರಲಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.