ADVERTISEMENT

ಕೋವಿಡ್ ಪ್ರಕರಣ: 8 ಲಕ್ಷದತ್ತ ದಾಪುಗಾಲು

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2020, 19:43 IST
Last Updated 24 ಅಕ್ಟೋಬರ್ 2020, 19:43 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ರಾಜ್ಯದಲ್ಲಿ ಶನಿವಾರ ಹೊಸದಾಗಿ 4,471 ಪ್ರಕರಣಗಳು ವರದಿಯಾವೆ. ಇವು ಈ ತಿಂಗಳಲ್ಲಿ 24 ಗಂಟೆಗಳ ಅವಧಿಯಲ್ಲಿ ವರದಿಯಾದ ಕನಿಷ್ಠ ಪ್ರಕರಣಗಳಾಗಿವೆ. ಹಾಗಿದ್ದರೂ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 8 ಲಕ್ಷದ ಗಡಿಯತ್ತ (7.98 ಲಕ್ಷ) ದಾಪುಗಾಲು ಇರಿಸಿದೆ.

ರಾಜ್ಯದಲ್ಲಿ ಮಾರ್ಚ್ 8 ರಂದು ಮೊದಲ ಕೋವಿಡ್ ಪ್ರಕರಣ ವರದಿಯಾಗಿತ್ತು. ಬಳಿಕ ಪ್ರಕರಣಗಳ ಸಂಖ್ಯೆ 1 ಲಕ್ಷದ ಗಡಿ ತಲುಪಲು 108 ದಿನಗಳು ಹಿಡಿದಿತ್ತು. ಕೊನೆಯ ಒಂದು ಲಕ್ಷ ಪ್ರಕರಣಗಳು ಕೇವಲ 10 ದಿನಗಳಲ್ಲಿ ವರದಿಯಾಗಿವೆ. ಮುಂದಿನ 98 ಸಾವಿರ ಪ್ರಕರಣಗಳು 14 ದಿನಗಳಲ್ಲಿ ಪತ್ತೆಯಾಗಿವೆ. ಈ ವಾರದ ಆರು ದಿನಗಳ ಅವಧಿಯಲ್ಲಿ 32,792 ಮಂದಿ ಕೋವಿಡ್ ಪೀಡಿತರಾಗಿರುವುದು ದೃಢಪಟ್ಟಿದೆ. ಈ ಅವಧಿಯಲ್ಲಿ ಪ್ರತಿನಿತ್ಯ ಸರಾಸರಿ 5,465 ಮಂದಿ ಸೋಂಕಿತರಾಗಿದ್ದಾರೆ.

ಕೋವಿಡ್ ಪೀಡಿತರಲ್ಲಿ ಬೆಂಗಳೂರಿನಲ್ಲಿ 26 ಮಂದಿ ಸೇರಿದಂತೆ ರಾಜ್ಯದಲ್ಲಿ 52 ಮಂದಿ ಮೃತಪಟ್ಟಿರುವುದು ಶನಿವಾರ ದೃಢಪಟ್ಟಿದ್ದು, ಸೋಂಕಿನಿಂದ ಸಾವಿಗೀಡಾದವರ ಒಟ್ಟು ಸಂಖ್ಯೆ 10,873ಕ್ಕೆ ತಲುಪಿದೆ. ಒಂದೇ ದಿನ 90,564 ಆರ್‌ಟಿ–ಪಿಸಿಆರ್ ಸೇರಿದಂತೆ 1.12 ಲಕ್ಷ ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗಿದೆ. ಈವರೆಗೆ 72.81 ಲಕ್ಷ ಮಂದಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದಾರೆ.

ADVERTISEMENT

ಕೋವಿಡ್ ಪೀಡಿತರಲ್ಲಿ ಬೆಂಗಳೂರಿನಲ್ಲಿ 3,005 ಮಂದಿ ಸೇರಿದಂತೆ ರಾಜ್ಯದಲ್ಲಿ 7,153 ಮಂದಿಗೆ ಕಾಯಿಲೆ ವಾಸಿಯಾಗಿದೆ. ಇದರಿಂದಾಗಿ ಗುಣಮುಖರ ಸಂಖ್ಯೆ 7 ಲಕ್ಷದ ಗಡಿ ದಾಟಿದೆ. ಸಕ್ರಿಯ ಪ್ರಕರಣಗಳು ಮತ್ತಷ್ಟು ಇಳಿಕೆ ಕಂಡಿದ್ದು, ಸದ್ಯ 86,749 ಮಂದಿ ಸೋಂಕಿತರು ಆಸ್ಪತ್ರೆ ಸೇರಿದಂತೆ ವಿವಿಧೆಡೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇವರಲ್ಲಿ 935 ಮಂದಿ ತೀವ್ರ ನಿಗಾ ಘಟಕದಲ್ಲಿದ್ದಾರೆ.

ಬೆಂಗಳೂರಿನಲ್ಲಿ ಮತ್ತೆ 2,251 ಮಂದಿ ಕೋವಿಡ್ ಪೀಡಿತರಾಗಿದ್ದು, ಸೋಂಕಿತರ ಸಂಖ್ಯೆ 3.23 ಲಕ್ಷ ದಾಟಿದೆ. ತುಮಕೂರಿನಲ್ಲಿ ಹೊಸದಾಗಿ 232 ಪ್ರಕರಣಗಳು ಪತ್ತೆಯಾಗಿವೆ. ಮೈಸೂರು (173), ಮಂಡ್ಯ (163), ಹಾಸನ (136), ದಕ್ಷಿಣ ಕನ್ನಡ (136) ಜಿಲ್ಲೆಯಲ್ಲಿ ಅಧಿಕ ಪ್ರಕರಣಗಳು ವರದಿಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.