ADVERTISEMENT

‘ಶಕ್ತಿ ಕೇಂದ್ರ’ ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲೇ ಕೋವಿಡ್ ನಿಯಮ ಉಲ್ಲಂಘನೆ

ವಿಧಾನ ಪರಿಷತ್‍ ನೂತನ ಸದಸ್ಯರ ಪ್ರಮಾಣ ವಚನ

​ಪ್ರಜಾವಾಣಿ ವಾರ್ತೆ
Published 6 ಜನವರಿ 2022, 19:45 IST
Last Updated 6 ಜನವರಿ 2022, 19:45 IST
ವಿಧಾನ ಪರಿಷತ್‌ಗೆ ಸ್ಥಳೀಯ ಸಂಸ್ಥೆಗಳಿಂದ ನೂತನವಾಗಿ ಆಯ್ಕೆಯಾದ ಸದಸ್ಯರಿಗೆ ಗುರುವಾರ ಪ್ರಮಾಣವಚನ ಸಮಾರಂಭ ನಡೆಯಿತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಇದ್ದರು –ಪ್ರಜಾವಾಣಿ ಚಿತ್ರ
ವಿಧಾನ ಪರಿಷತ್‌ಗೆ ಸ್ಥಳೀಯ ಸಂಸ್ಥೆಗಳಿಂದ ನೂತನವಾಗಿ ಆಯ್ಕೆಯಾದ ಸದಸ್ಯರಿಗೆ ಗುರುವಾರ ಪ್ರಮಾಣವಚನ ಸಮಾರಂಭ ನಡೆಯಿತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಇದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿರುವ ಕಾರಣಕ್ಕೆ ಕಠಿಣ ಮಾರ್ಗಸೂಚಿ ಹೊರಡಿಸಿರುವ ಬೆನ್ನಲ್ಲೆ, ಆಡಳಿತ ಶಕ್ತಿ ಕೇಂದ್ರ ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಆ ಎಲ್ಲ ನಿಯಮಗಳು ಉಲ್ಲಂಘನೆಯಾದವು. ಅದೂ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಧಾನ ಪರಿಷತ್‌ ಸಭಾಪತಿ ಬಸವರಾಜ ಬೊಮ್ಮಾಯಿ ಸಮ್ಮುಖದಲ್ಲಿ!

ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಆಯ್ಕೆಯಾದ ನೂತನ 25 ಸದಸ್ಯರಿಗೆ ಗುರುವಾರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಮಾರಂಭಕ್ಕೆ ಅನಿರೀಕ್ಷಿತ ಸಂಖ್ಯೆಯಲ್ಲಿ ನೂತನ ಸದಸ್ಯರ ಬೆಂಬಲಿಗರು, ಅಭಿಮಾನಿಗಳು, ಕುಟುಂಬದವರು ಬಂದಿದ್ದರು. ಅವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು. ಎಲ್ಲರೂ ಸಭಾಂಗಣದ ಒಳಗೆ ನುಗ್ಗಿದ್ದರಿಂದ ಭದ್ರತಾ ಸಿಬ್ಬಂದಿ ಅಸಹಾಯಕರಾದರು.

ಅಂತರ ಮರೆತು, ಮಾಸ್ಕ್‌ ಇಲ್ಲದೆ ನೂತನ ಸದಸ್ಯರಿಗೆ ಶುಭ ಕೋರಲು ಅವರ ಅಭಿಮಾನಿಗಳು ಧಾವಿಸಿದ್ದರಿಂದ ನೂಕುನುಗ್ಗಲು ಉಂಟಾಯಿತು. ಮುಖ್ಯಮಂತ್ರಿ ಮತ್ತು ಸಭಾಪತಿ ಜೊತೆ ಫೋಟೊ ತೆಗೆಸಿಕೊಳ್ಳಲು ಸದಸ್ಯರು, ಅವರ ಕುಟುಂಬದವರು ಅಕ್ಷರಶಃ ಮುಗಿಬಿದ್ದರು. ವಿಧಾನಸೌಧ, ವಿಕಾಸೌಧಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧ ವಿಧಿಸಿದ್ದರೂ ಸಚಿವರ ಕಚೇರಿಗಳು ಮತ್ತು ಕಾರಿಡಾರ್‌ಗ
ಳಲ್ಲಿ ಜನರ ದಂಡು ಕಾಣಿಸಿತು. ಮಾಸ್ಕ್ ಧರಿಸುವಂತೆ ಉದ್ಘೋಷಕರು ನಿರಂತರವಾಗಿ ಕರೆ ಕೊಡುತ್ತಿದ್ದರೂ ಅಲ್ಲಿದ್ದವರು ಆ ಸಂದೇಶ ಕಿವಿ ಮೇಲೆ ಹಾಕಿಕೊಂಡಂತೆ ಕಾಣಿಸಲಿಲ್ಲ. ಇದು ಇನ್ನಷ್ಟು ನಿಯಮ ಉಲ್ಲಂಘನೆಗೂ ಕಾರಣವಾಯಿತು.

ADVERTISEMENT

20 ಸದಸ್ಯರಿಂದ ಪ್ರಮಾಣ ವಚನ: ವಿಧಾನಪರಿಷತ್‌ಗೆ ಆಯ್ಕೆಯಾದ 25 ಸದಸ್ಯರ ಪೈಕಿ 20 ಮಂದಿ ಪ್ರಮಾಣ ವಚನ ಸ್ವೀಕರಿಸಿದರು. ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಸಂಸದ ಪ್ರತಾಪ್ ಸಿಂಹ ಸೇರಿ ಹಲವು ನಾಯಕರು ಪಾಲ್ಗೊಂಡು ನೂತನ ಸದಸ್ಯರಿಗೆ ಶುಭಕೋರಿದರು. ನೂತನ ಸದಸ್ಯರಾದ ಬಿ.ಜಿ. ಪಾಟೀಲ, ಸಲೀಂ ಅಹ್ಮದ್, ಲಖನ್ ಜಾರಕಿಹೊಳಿ, ಗಣಪತಿ ಉಳ್ವೇಕರ್, ಎಂ.ಕೆ. ಪ್ರಾಣೇಶ್ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರೆ, ಪ್ರದೀಪ ಶೆಟ್ಟರ್, ಕೆ.ಎಸ್. ನವೀನ್, ಡಿ.ಎಸ್. ಅರುಣ್, ದಿನೇಶ್ ಗೂಳಿಗೌಡ, ಎಚ್.ಎಸ್. ಗೋಪಿನಾಥ್ ಮತ್ತು ಡಾ.ಡಿ. ತಿಮ್ಮಯ್ಯ ಅವರು ಭಗವಂತನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.

ವಿ.ಎಸ್.ಆಚಾರ್ಯ ಹೆಸರಲ್ಲಿ ಕೋಟ ಪ್ರಮಾಣ: ಚನ್ನರಾಜ ಹಟ್ಟಿಹೊಳಿ ಅವರು ವೀರಭದ್ರೇಶ್ವರ ಮತ್ತು ಬಸವೇಶ್ವರ, ಶರಣಗೌಡ ಪಾಟೀಲ ಬಯ್ಯಪುರ ಭಗವಂತ ಮತ್ತು ತಂದೆ-ತಾಯಿ, ಕೋಟ ಶ್ರೀನಿವಾಸ ಪೂಜಾರಿ ಅವರು ಭಗವಂತ ಮತ್ತು ವಿ.ಎಸ್. ಆಚಾರ್ಯ, ರಾಘವೇಂದ್ರ ರಾಜಣ್ಣ ಅವರು ಭಗವಂತ ಮತ್ತು ರೈತರು ಹಾಗೂ ಸಿ.ಎನ್. ಮಂಜೇಗೌಡ ತಾಯಿ ಚಾಮುಂಡೇಶ್ವರಿ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದು ವಿಶೇಷವಾಗಿತ್ತು. ಸುಜಾ ಕುಶಾಲಪ್ಪ ಕೊಡಗು ಧಿರಿಸಿನಲ್ಲಿ ಬಂದಿದ್ದರು. ಮೇಕೆದಾಟು ಜಟಾಪಟಿ ಸಂದರ್ಭ
ದಲ್ಲಿಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಡಿ.ಕೆ. ಶಿವಕುಮಾರ್ ಹಸ್ತಲಾಘವ ಮಾಡಿದ್ದು, ರಾಮನಗರ ಪ್ರಕರಣದಲ್ಲಿ ಎದೆಯುಬ್ಬಿಸಿ ನುಗ್ಗಿದ್ದ ಪರಿಷತ್ ನೂತನ ಸದಸ್ಯ ರವಿ ಅವರನ್ನುಮುಖ್ಯಮಂತ್ರಿ ಕಿಚಾಯಿಸಿದ ಪ್ರಸಂಗವೂ ನಡೆಯಿತು.

ಸೂರಜ್ ರೇವಣ್ಣ ಗೈರು: ಐವರು ಸದಸ್ಯರು ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಗೈರಾಗಿದ್ದರು. ಈ ಪೈಕಿ, ಜೆಡಿಎಸ್‌ ಶಾಸಕ ಎಚ್.ಡಿ.ರೇವಣ್ಣ ಅವರ ಸೂಚನೆ ಮೇರೆಗೆ ಅವರ ಪುತ್ರ ಸೂರಜ್‌ ಪ್ರಮಾಣ ವಚನ ಕಾರ್ಯಕ್ರಮದಿಂದ ದೂರ ಉಳಿದರೆಂದು ತಿಳಿದುಬಂದಿದೆ. ಒಳ್ಳೆಯ ದಿನ ಪ್ರಮಾಣ ವಚನ ಸ್ವೀಕರಿಸಬೇಕೆಂಬ ಸಲಹೆಯಂತೆ, ಮುಂದಿನ ವಾರ ಪ್ರಮಾಣ ವಚನ ಸ್ವೀಕರಿಸುವರೆಂದು ಜೆಡಿಎಸ್ ಮೂಲಗಳು ತಿಳಿಸಿವೆ.

‘ನಮಗೆ ಮಾತ್ರ ಕಾನೂನು ಅನ್ವಯವೇ?’:‘ವಿಧಾನಸೌಧದಲ್ಲಿ ಗುರುವಾರ ನಡೆದ ವಿಧಾನಪರಿಷತ್‌ ನೂತನ ಸದಸ್ಯರ ಪ್ರಮಾಣವಚನ ಕಾರ್ಯಕ್ರಮದಲ್ಲಿ ಎಷ್ಟು ಸಾವಿರ ಜನ ಇದ್ದರು’ ಎಂದು ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ.

‘ಡಿ.ಕೆ.ಶಿವಕುಮಾರ್ ಅವರ ನಾಟಕದ ಹೇಳಿಕೆಗಳಿಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ’ ಎಂಬ ಮುಖ್ಯಮಂತ್ರಿ ಹೇಳಿಕೆಗೆ ಸುದ್ದಿಗೋಷ್ಠಿಯಲ್ಲಿ ಅವರು, ’ಪ್ರಮಾಣವಚನ ನೀಡುವುದೇ ಆಗಿದ್ದರೆ, 25 ನೂತನ ಸದಸ್ಯರನ್ನು ಕರೆದು, ಅಂತರ ಕಾಪಾಡಿಕೊಂಡು, ಅವರ ಕುಟುಂಬದವರಿಗೆ ಗ್ಯಾಲರಿಯಲ್ಲಿ ಅವಕಾಶ ಮಾಡಿಕೊಟ್ಟು ಪ್ರಮಾಣವಚನ ನೀಡಬೇಕಿತ್ತು‘ ಎಂದರು.

’ವಿಧಾನಸೌಧದಲ್ಲಿ ಕಾನೂನು ಅನ್ವಯವಾಗುವುದಿಲ್ಲವೇ? ಕಾರ್ಯಕ್ರಮದಲ್ಲಿ ಭಾಗವಹಿಸಲು ಸಚಿವರಿಗೆ ಏಕೆ ಅನುಮತಿ ಕೊಟ್ಟಿರಿ? ಅವರ ವಿರುದ್ಧ ಏಕೆ ಪ್ರಕರಣ ದಾಖಲಿಸಿಲ್ಲ? ನಮಗೆ ಮಾತ್ರ ಕಾನೂನು ಅನ್ವಯವೇ?’ ಎಂದೂ ಕೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.