ADVERTISEMENT

ಒಳನೋಟ: ಸಂತ್ರಸ್ತ ಮಕ್ಕಳಿಗೆ ಮಡಿಲಾದ ಮಠಗಳು

ಸುತ್ತೂರು, ತೋಂಟದಾರ್ಯ ಮಠದಲ್ಲಿ ಉಚಿತ ಶಿಕ್ಷಣ

ಮೋಹನ್ ಕುಮಾರ ಸಿ.
Published 16 ಏಪ್ರಿಲ್ 2022, 21:25 IST
Last Updated 16 ಏಪ್ರಿಲ್ 2022, 21:25 IST
ಗದುಗಿನ ತೋಂಟದಾರ್ಯ ಮಠ
ಗದುಗಿನ ತೋಂಟದಾರ್ಯ ಮಠ   

ಮೈಸೂರು: ವಾತ್ಸಲ್ಯದ ಕರುಳುಬಳ್ಳಿಯನ್ನು ಕೋವಿಡ್‌ ಕತ್ತರಿಸಿ ಹಾಕಿದ ಬಳಿಕ ಅನಾಥರಾದ ಮ‌ಕ್ಕಳನ್ನು ಮೈಸೂರಿನ ಸುತ್ತೂರು ಮಠ ಹಾಗೂ ಗದಗದ ತೋಂಟದಾರ್ಯ ಮಠಗಳು ಅಕ್ಷರಶಃ ತಾಯಿ ಮಡಿಲಿನಂತೆ ಕಾಪಾಡುತ್ತಿವೆ.

ಅನಾಥ ಮಕ್ಕಳಿಗೆ 1ರಿಂದ 10ನೇ ತರಗತಿವರೆಗೆ ಉಚಿತ ಶಿಕ್ಷಣ ನೀಡುವುದಾಗಿ ನೀಡಿದ್ದ ವಚನವನ್ನು ಮಠಗಳು ಪಾಲಿಸುತ್ತಿವೆ. ಸುತ್ತೂರಿನಲ್ಲಿ 10 ಹಾಗೂ ಗದಗನಲ್ಲಿ 32 ಮಕ್ಕಳು ಆಶ್ರಯ ಪಡೆದಿದ್ದಾರೆ.

ಸುತ್ತೂರು ಮಠದಲ್ಲಿ ಮೂವರು ಬಾಲಕಿಯರು, ಏಳು ಬಾಲಕರಿದ್ದಾರೆ. ಅವರಲ್ಲಿ ಇಬ್ಬರು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದು, ಕಾಲೇಜು ಶಿಕ್ಷಣವನ್ನೂ ಉಚಿತವಾಗಿ ನೀಡುವುದಾಗಿ ಸಂಸ್ಥೆ ಹೇಳಿದೆ. ಜೆಎಸ್‌ಎಸ್‌ ವಸತಿ ಶಾಲೆಯಲ್ಲಿ ವಿಜಯಪುರ, ಚಾಮರಾಜನಗರ, ಬೆಂಗಳೂರಿನ ತಲಾ ಇಬ್ಬರು ಹಾಗೂ ರಾಮನಗರ, ದಾವಣಗೆರೆ, ಮೈಸೂರು, ಕಲಬುರಗಿಯ ತಲಾ ಒಬ್ಬರು ಶಿಕ್ಷಣ ಪಡೆಯುತ್ತಿದ್ದಾರೆ.

ADVERTISEMENT

ತಂದೆಯನ್ನು ಕಳೆದುಕೊಂಡಿರುವ ಅಣ್ಣ–ತಂಗಿ, ಅಕ್ಕ–ತಮ್ಮ ಈ ವಸತಿಶಾಲೆಯಲ್ಲಿ ಓದುತ್ತಿದ್ದಾರೆ. ಚಾಮರಾಜನಗರದ ಬಿಸಲವಾಡಿಯ ಎಸ್‌.ಯೋಗೇಶ್‌, ಎಸ್‌.ದಾಕ್ಷಾಯಿಣಿ ಹಾಗೂ ವಿಜಯಪುರ ಜಿಲ್ಲೆಯ
ಸಿಂದಗಿ ತಾಲ್ಲೂಕಿನ ಬೆನಕೂಟಗಿ ಗ್ರಾಮದ ಆದಿತ್ಯರಾಜು ರಾಠೋಡ, ಐಶ್ವರ್ಯ ರಾಠೋಡ ಓದು ಮುಂದುವರೆಸಿದ್ದಾರೆ.

‘ಸಂತ್ರಸ್ತ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವುದಾಗಿ 2021ರ ಮೇ ತಿಂಗಳಲ್ಲಿ ಘೋಷಿಸಿದ್ದೆವು. ಕಡುಬಡ ಕುಟುಂಬದ 12 ಮಂದಿ ಪ್ರವೇಶ ಪಡೆದಿದ್ದರು. ಇಬ್ಬರಷ್ಟೇ ಶಾಲೆ ಬಿಟ್ಟು ಸಂಬಂಧಿಕರ ಮನೆಗೆ ತೆರಳಿದರು. ಉಳಿದವರು ನೋವು ಮರೆತು ಎಲ್ಲಾ ಮಕ್ಕಳೊಂದಿಗೆ ಬೆರೆತಿದ್ದಾರೆ’ ಎಂದು ವಸತಿ ಶಾಲೆಯ ಸಮನ್ವಯಾಧಿಕಾರಿ ಜಿ.ಎಲ್‌.ತ್ರಿಪುರಾಂತಕ ‘ಪ್ರಜಾವಾಣಿ’ ಜತೆ ಮಾಹಿತಿ ಹಂಚಿಕೊಂಡರು.

‘ಮಕ್ಕಳು ಮನೆಯಲ್ಲೇ ಇದ್ದಿದ್ದರೆ ಪೋಷಕರ ನೆನಪು ಕಾಡುವ ಸಾಧ್ಯತೆ ಇತ್ತು. ಶಾಲೆಯಲ್ಲಿ ಖಿನ್ನತೆಗೆ ಒಳಗಾಗುವ ಸಾಧ್ಯತೆಯೂ ಇತ್ತು. ಅವರೆಲ್ಲ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡರು. ಈ ಮಕ್ಕಳಲ್ಲಿ ಅನಾಥಪ್ರಜ್ಞೆ ಸುಳಿಯದಂತೆ ಎಚ್ಚರ ವಹಿಸಿದೆವು’ ಎಂದರು.

32 ಮಕ್ಕಳಿಗೆ ಆಸರೆ: ತೋಂಟದಾರ್ಯ ಮಠದಲ್ಲಿ ಪ್ರಾಥಮಿಕ ಶಾಲಾ ಹಂತದಿಂದ ಎಂಜಿನಿಯರಿಂಗ್‌ವರೆಗೆ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ.

‘ಮಠ ಘೋಷಿಸಿದ್ದಂತೆ ನಡೆದುಕೊಂಡಿದೆ. ಕೋವಿಡ್‌ನಿಂದಪೋಷಕರು ಮೃತಪಟ್ಟಿದ್ದಾರೆ ಎಂಬ ಪ್ರಮಾಣಪತ್ರವನ್ನೂ ಮಕ್ಕಳಿಂದ ಪಡೆಯಲಿಲ್ಲ. ನೆರವು ಕೇಳಿ ಬಂದವರೆಲ್ಲರಿಗೂ ಮಾನವೀಯತೆಯ ಆಧಾರದಲ್ಲಿ ಅವಕಾಶ ಕಲ್ಪಿಸಲಾಗಿದೆ’ ಎಂದು ಮಠದ ಆಡಳಿತಾಧಿಕಾರಿ ಎಸ್.ಎಸ್.ಪಟ್ಟಣಶೆಟ್ಟಿ ತಿಳಿಸಿದರು.

‘ಪ್ರಾಥಮಿಕ, ಪ್ರೌಢಶಾಲಾ ವಿದ್ಯಾರ್ಥಿಗಳ ಜತೆಗೆ ನಾಲ್ವರಿಗೆ ಎಂಜಿನಿಯರಿಂಗ್‌ ಪ‍ದವಿ ಶಿಕ್ಷಣಕ್ಕೂ ಅವಕಾಶ ಮಾಡಿಕೊಟ್ಟಿದ್ದು, ಎಲ್ಲ ಶುಲ್ಕ ಮನ್ನಾ ಮಾಡಲಾಗಿದೆ’ ಎಂದರು.

ಪೂರಕ ಮಾಹಿತಿ: ಸತೀಶ್‌ ಬೆಳ್ಳಕ್ಕಿ, ಗದಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.