ADVERTISEMENT

ಇಎಸ್‌ಐ ಆಸ್ಪತ್ರೆ: 15 ತಿಂಗಳ ಬಳಿಕ ಕೋವಿಡ್‌ ಮೃತದೇಹ ಪತ್ತೆ

ಇದು ಇಎಸ್‌ಐ ಆಸ್ಪತ್ರೆಯ ಶೈತ್ಯಾಗಾರದ ದುಸ್ಥಿತಿ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2021, 19:30 IST
Last Updated 29 ನವೆಂಬರ್ 2021, 19:30 IST
ದುರ್ಗಾ ಸುಮಿತ್ರ ಅವರ ಅಕ್ಕ ಜಿ.ಬಿ.ಸುಜಾತ (ಎಡ) ಹಾಗೂ ಮುನಿರಾಜು ಪುತ್ರಿ ರಾಜೇಶ್ವರಿ ಅವರು ಮೃತ ದೇಹಗಳನ್ನು ಪಡೆಯಲು ವಿಕ್ಟೋರಿಯಾ ಆಸ್ಪತ್ರೆಯ ಎದುರು ನಿಂತಿದ್ದ ದೃಶ್ಯ –ಪ್ರಜಾವಾಣಿ ಚಿತ್ರ 
ದುರ್ಗಾ ಸುಮಿತ್ರ ಅವರ ಅಕ್ಕ ಜಿ.ಬಿ.ಸುಜಾತ (ಎಡ) ಹಾಗೂ ಮುನಿರಾಜು ಪುತ್ರಿ ರಾಜೇಶ್ವರಿ ಅವರು ಮೃತ ದೇಹಗಳನ್ನು ಪಡೆಯಲು ವಿಕ್ಟೋರಿಯಾ ಆಸ್ಪತ್ರೆಯ ಎದುರು ನಿಂತಿದ್ದ ದೃಶ್ಯ –ಪ್ರಜಾವಾಣಿ ಚಿತ್ರ    

ಬೆಂಗಳೂರು: ಶವಾಗಾರ ಸ್ವಚ್ಛಗೊಳಿಸುವ ವೇಳೆ ರಾಜಾಜಿನಗರದ ಇಎಸ್‌ಐ ಆಸ್ಪತ್ರೆಯಲ್ಲಿ ಕೋವಿಡ್‌ ಮೃತದೇಹಗಳು ಪತ್ತೆಯಾಗಿವೆ. 15 ತಿಂಗಳಿನಿಂದ ಶೈತ್ಯಾಗಾರದಲ್ಲಿಯೇ ಇದ್ದ ಶವಗಳು ಕೊಳೆತ ಸ್ಥಿತಿಯಲ್ಲಿ ಸಿಕ್ಕಿದ್ದು, ಅವುಗಳನ್ನು ಕಂಡು ಕುಟುಂಬದವರು ದಿಗ್ಭ್ರಾಂತರಾಗಿದ್ದಾರೆ.

ಮೃತದೇಹಗಳನ್ನುಚಾಮರಾಜಪೇಟೆಯ ದುರ್ಗಾ ಸುಮಿತ್ರಾ (40) ಹಾಗೂ ಕೆ.ಪಿ.ಅಗ್ರಹಾರದ ಎನ್‌.ಎಲ್‌.ಮುನಿರಾಜು (67) ಎಂದು ಗುರುತಿಸಲಾಗಿದೆ. ಇವರು 2020ರ ಜುಲೈನಲ್ಲಿ ಅಸುನೀಗಿದ್ದರು.

‘ಆಸ್ಪತ್ರೆ ಆವರಣದಲ್ಲಿರುವ ಹಳೆಯ ಶೈತ್ಯಾಗಾರದಲ್ಲಿ ಮೃತದೇಹಗಳನ್ನು ಇಡಲಾಗಿತ್ತು. ಅವುಗಳನ್ನು ವಿಲೆ ಮಾಡಲು ಸಿಬ್ಬಂದಿ ಮರೆತಿದ್ದರು. ಕೋವಿಡ್‌ ಮರಣ ಪ್ರಕರಣಗಳು ಕಡಿಮೆಯಾಗಿದ್ದರಿಂದ ಶೈತ್ಯಾಗಾರದತ್ತ ಸಿಬ್ಬಂದಿ ತಿರುಗಿಯೂ ನೋಡಿರಲಿಲ್ಲ. 2021ರ ಆಗಸ್ಟ್‌ನಲ್ಲಿ ಅದಕ್ಕೆ ಬೀಗ ಹಾಕಲಾಗಿತ್ತು. ಆಗಲೂ ಒಳಗೆ ಹೋಗಿ ಪರೀಕ್ಷಿಸಿರಲಿಲ್ಲ. ಹೋದ ಶನಿವಾರ ಸ್ವಚ್ಛತಾ ಸಿಬ್ಬಂದಿ ಬಾಗಿಲು ತೆರೆದು ನೋಡಿದಾಗ ಮೃತದೇಹಗಳು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿವೆ. ಆಸ್ಪತ್ರೆಯ ಸಿಬ್ಬಂದಿಯ ನಿರ್ಲಕ್ಷಕ್ಕೆ ಇದುನಿದರ್ಶನ’ ಎಂದು ಆಸ್ಪತ್ರೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

‘ಶೈತ್ಯಾಗಾರದಲ್ಲಿ ಶವ ಇಟ್ಟ ನಂತರ ಅದರ ಮೇಲೆ ಸ್ಟಿಕ್ಕರ್‌ ಅಂಟಿಸುವ ಪ್ರತೀತಿ ಇದೆ. ಈಗ ಪತ್ತೆಯಾಗಿರುವ ದೇಹಗಳನ್ನು ಇಡಲಾಗಿದ್ದ ಶೈತ್ಯಗಾರಗಳ ಮೇಲೆ ಸ್ಟಿಕ್ಕರ್‌ ಅಂಟಿಸಿರಲಿಲ್ಲ’ ಎಂದು ಅವರು ಹೇಳಿದ್ದಾರೆ.

‘2020ರ ಜುಲೈನಲ್ಲಿ ದುರ್ಗಾಳಿಗೆ ಕೆಮ್ಮು ಬಾಧಿಸಿತ್ತು. ಉಸಿರಾಟದ ಸಮಸ್ಯೆಯೂ ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ದಾಖಲಿಸಿದ್ದೆವು. ಆಗ ಹಾಸಿಗೆ ಸಮಸ್ಯೆ ತಲೆದೋರಿತ್ತು. ವರದಿಗಾರರೊಬ್ಬರ ನೆರವಿನಿಂದ ಇಎಸ್‌ಐ ಆಸ್ಪತ್ರೆಗೆ ಸೇರಿಸಿದ್ದೆವು. 15 ತಿಂಗಳಾದರೂ ಆಕೆಯ ಮೃತದೇಹ ವಿಲೆ ಮಾಡಿಲ್ಲ. ಇದು ಆಸ್ಪತ್ರೆಯ ನಿರ್ಲಕ್ಷಕ್ಕೆ ಸಾಕ್ಷಿ. ಆಕೆಯನ್ನು ಆಸ್ಪತ್ರೆಗೆ ಸೇರಿಸುವ ಬದಲು ಮನೆಯಲ್ಲೇ ಇಟ್ಟುಕೊಂಡಿದ್ದರೆ ಚೆನ್ನಾಗಿತ್ತೇನೊ ಎಂದು ಈಗ ಅನಿಸುತ್ತಿದೆ’ ಎಂದು ದುರ್ಗಾ ಅವರ ಸಹೋದರ ನರೇಂದ್ರ ಕುಮಾರ್‌ ಬೇಸರ ವ್ಯಕ್ತಪಡಿಸಿದರು.

‘ಅಪ್ಪ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಎದೆ ನೋವು ಹಾಗೂ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದರಿಂದ 2020ರ ಜುಲೈ 2ರಂದು ಇಎಸ್‌ಐ ಆಸ್ಪತ್ರೆಗೆ ದಾಖಲಿಸಿದ್ದೆವು. ಆಸ್ಪತ್ರೆ ಸಿಬ್ಬಂದಿಯೊಬ್ಬರು ಕೊರೊನಾ ಸೋಂಕು ತಗುಲಿರಬಹುದೆಂಬ ಶಂಕೆ ವ್ಯಕ್ತಪಡಿಸಿದ್ದರಿಂದ ಕೂಡಲೇ ಚಿಕಿತ್ಸೆಗೆ ದಾಖಲಿಸಿದ್ದೆವು’ ಎಂದು ಮುನಿರಾಜು ಅವರ ಪುತ್ರಿ ಚೇತನಾ ಸತೀಶ್‌ಕುಮಾರ್‌ ತಿಳಿಸಿದರು.

‘ಇಎಸ್‌ಐ ಆಸ್ಪತ್ರೆಯಲ್ಲಿ ಗುಣಮಟ್ಟದ ಚಿಕಿತ್ಸೆ ನೀಡುತ್ತಿರಲಿಲ್ಲ. ಅಪ್ಪನ ಆರೋಗ್ಯ ಸ್ಥಿತಿಯ ಕುರಿತು ಮಾಹಿತಿಯನ್ನೂ ಕೊಡುತ್ತಿರಲಿಲ್ಲ. ಚಿಕಿತ್ಸೆಗೆ ದಾಖಲಿಸಿ ಮೂರು ದಿನದ ನಂತರ ಅವರು ನಿಧನರಾದರು. ಅವರಿಗೆ ಕೋವಿಡ್‌ ಇತ್ತು ಎಂಬುದನ್ನು 10 ದಿನಗಳ ನಂತರ ನಮಗೆ ತಿಳಿಸಿದರು. ಮೃತದೇಹ ಕೇಳಲು ಹೋದಾಗ ಅದನ್ನು ಅದಾಗಲೇ ಬಿಬಿಎಂಪಿಯವರಿಗೆ ಹಸ್ತಾಂತರಿಸಿದ್ದಾಗಿ ಹೇಳಿದ್ದರು. ನಮ್ಮ ಸಹಿ ಇಲ್ಲದೆ ಹೇಗೆ ಕೊಟ್ಟಿದ್ದೀರಿ ಎಂದು ಪ್ರಶ್ನಿಸಿದ್ದಾಗ ಪರವಾಗಿಲ್ಲ ಈಗ ಸಹಿ ಹಾಕಿ ಎಂದಿದ್ದರು. ಇದು ಸಿಬ್ಬಂದಿಯ ಬೇಜವಾಬ್ದಾರಿಗೆ ನಿದರ್ಶನ’ ಎಂದು ಕಿಡಿಕಾರಿದರು.

ಪ್ರಕರಣದ ಕುರಿತು ಪ್ರತಿಕ್ರಿಯೆ ಪಡೆಯಲು ಆಸ್ಪತ್ರೆಯ ಡೀನ್‌ ಇಮ್ತಿಹಾನ್‌ ಹುಸೇನ್‌ ಅವರನ್ನು ಸಂಪರ್ಕಿಸಿದರೆ, ಅವರು ಲಭ್ಯವಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.