ADVERTISEMENT

ಕೋವಿಡ್–19 ‍ಪೀಡಿತರ ಸಂಖ್ಯೆ 283ಕ್ಕೆ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2020, 19:45 IST
Last Updated 21 ಮಾರ್ಚ್ 2020, 19:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ (ಪಿಟಿಐ): ದೇಶದಲ್ಲಿ ಶನಿವಾರ ಹೊಸದಾಗಿ 65 ಜನರಲ್ಲಿ ಕೋವಿಡ್‌–19, ದೃಢಪಟ್ಟಿದ್ದು ಇದರಿಂದಾಗಿ ಕೋವಿಡ್ ಪೀಡಿತರ ಸಂಖ್ಯೆ 283ಕ್ಕೆ ಏರಿಕೆಯಾಗಿದೆ.

ಕರ್ನಾಟಕ, ದೆಹಲಿ, ಪಂಜಾಬ್ ಹಾಗೂ ಮಹಾರಾಷ್ಟ್ರದಲ್ಲಿ ಮೃತಪಟ್ಟ ಪ್ರಕರಣಗಳು ಸಹ ಇದರಲ್ಲಿ ಸೇರಿವೆ.

‘ಕೊರೊನಾ ವೈರಸ್ ಸೋಂಕು ಪತ್ತೆ ಪರೀಕ್ಷೆಯ ನಿಯಮಗಳನ್ನು ಪರಿಷ್ಕರಿಸಲಾಗಿದೆ. ಸೋಂಕಿತರ ಜತೆ ನೇರ ಸಂಪರ್ಕ ಹೊಂದಿದವರನ್ನು 5 ಹಾಗೂ 14ನೇ ದಿನದ ಅವಧಿಯೊಳಗೆ ಒಮ್ಮೆ ಪರೀಕ್ಷೆಗೆ ಒಳಪಡಿಸಬೇಕು ಎಂದು ಸೂಚಿಸಲಾಗಿದೆ. ಬೇರೆಯವರಲ್ಲಿ ವಿಶ್ವಾಸ ಮೂಡಿಸುವ ಸಲುವಾಗಿ ಜನರು ಕೊರೊನಾ ಸೋಂಕು ಪರೀಕ್ಷೆಗೆ ಒಳಗಾಗಬಾರದು’ ಎಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್‌ ಅಗರವಾಲ್ ತಿಳಿಸಿದ್ದಾರೆ.

ADVERTISEMENT

‘ಮುಖಗವುಸು ಹಾಗೂ ಸ್ಯಾನಿಟೈಜರ್‌ಗಳ ಉತ್ಪಾದನೆಗಳನ್ನು ಹೆಚ್ಚಿಸಲು ಸರ್ಕಾರ ಗಮನವಹಿಸಿದೆ. ಸುಗಂಧದ್ರವ್ಯ ತಯಾರಕರಿಗೆ ಸ್ಯಾನಿಟೈಜರ್‌ಗಳನ್ನು ಉತ್ಪಾದಿಸಲು ಅವಕಾಶ ನೀಡಬೇಕು ಎಂದು ರಾಜ್ಯ ಸರ್ಕಾರಗಳಿಗೆ ಸೂಚಿಸಲಾಗಿದೆ’ ಎಂದು ಅವರು ಹೇಳಿದ್ದಾರೆ.ವಿವಿಧ ರಾಜ್ಯಗಳಲ್ಲಿ ಮತ್ತಷ್ಟು ಹೊಸ ಪ್ರಕರಣಗಳು ವರದಿಯಾಗಿವೆ. ಆದರೆ ಆರೋಗ್ಯ ಸಚಿವಾಲಯ ಇವುಗಳನ್ನು ಇನ್ನೂ ಅಧಿಕೃತವಾಗಿ ಲೆಕ್ಕಕ್ಕೆ ಸೇರಿಸಿಕೊಂಡಿಲ್ಲ.

ವಿದೇಶಕ್ಕೆ ಪ್ರಯಾಣಿಸದ ಮಹಿಳೆಗೂ ಸೋಂಕು: ವಿದೇಶಕ್ಕೆ ಪ್ರಯಾಣ ಮಾಡದೆ ಇದ್ದರೂ ಮಹಾರಾಷ್ಟ್ರದ ಪುಣೆಯಲ್ಲಿ 40 ವರ್ಷದ ಮಹಿಳೆಗೆ ಕೋವಿಡ್‌ 19 ಸೋಂಕು ಇರುವುದು ಶನಿವಾರ ದೃಢಪಟ್ಟಿದೆ.

‘ಆದರೆ ಅವರು ಮದುವೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಇದೇ 3ರಂದು ನವಿ ಮುಂಬೈನ ವಾಶಿ ನಗರಕ್ಕೆ ಭೇಟಿ ನೀಡಿದ್ದರು. ವಿದೇಶಕ್ಕೆ ಪ್ರಯಾಣ ಮಾಡಿರುವವರ ಜತೆ ಈ ವೇಳೆ ಸಂಪರ್ಕಕ್ಕೆ ಬಂದಿರಬಹುದು. ಅಲ್ಲದೇ ಕ್ಯಾಬ್‌ನಲ್ಲಿ ಮುಂಬೈಗೆ ತೆರಳಿರುವುದರಿಂದ ಈ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ’ ಎಂದು ಜಿಲ್ಲಾಧಿಕಾರಿ ನವಲ್‌ ಕಿಶೋರ್‌ ರಾಮ್‌ ತಿಳಿಸಿದ್ದಾರೆ.

ದೆಹಲಿಯಲ್ಲಿ ದುಪ್ಪಟ್ಟು ಪಿಂಚಣಿ: ದೆಹಲಿಯಲ್ಲಿ ವಿಧವೆಯರು, ಅಂಗವಿಕಲರು ಹಾಗೂ ಹಿರಿಯರಿಗೆ ನೀಡುವ ಪಿಂಚಣಿಯನ್ನು ಈ ತಿಂಗಳು ದುಪ್ಪಟ್ಟು ನೀಡುವುದಾಗಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದಾರೆ.

‘ಈಗಿನ ಪರಿಸ್ಥಿತಿಯಿಂದ ಬಡವರ ಮೇಲೆ ಆರ್ಥಿಕವಾಗಿ ಹೆಚ್ಚು ಒತ್ತಡ ಉಂಟಾಗುತ್ತಿದೆ. ಆದ್ದರಿಂದ ನ್ಯಾಯಬೆಲೆ ಅಂಗಡಿಗಳಿಂದ ಪಡಿತರ ಖರೀದಿಸುವವರಿಗೆ ಮುಂದಿನ ತಿಂಗಳು ಶೇ 50 ಹೆಚ್ಚುವರಿ ಪಡಿತರ ನೀಡಲಾಗುವುದು’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.