ADVERTISEMENT

ಗುತ್ತಿಗೆದಾರರಿಗೆ ಇನ್ನೂ ಬಿಡುಗಡೆಯಾಗಿಲ್ಲ ಹಣ!

ಕೋವಿಡ್‌ ನಿಯಂತ್ರಣ: ಸೋಂಕು ನಿವಾರಕ ಸಿಂಪಡಣೆ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2021, 20:28 IST
Last Updated 23 ಫೆಬ್ರುವರಿ 2021, 20:28 IST
ಗುತ್ತಿಗೆದಾರರು ಸಿದ್ದರಾಮಯ್ಯ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು. ಎಂ.ಶಿವರಾಜು ಇದ್ದಾರೆ
ಗುತ್ತಿಗೆದಾರರು ಸಿದ್ದರಾಮಯ್ಯ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು. ಎಂ.ಶಿವರಾಜು ಇದ್ದಾರೆ   

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್‌ ಸೋಂಕು ದೃಢಪಟ್ಟವರ ಮನೆಯ ಪರಿಸರದಲ್ಲಿ ಹಾಗೂ ಕಂಟೈನ್‌ಮೆಂಟ್‌ ವಲಯಗಳಲ್ಲಿ ಸೋಂಕು ನಿವಾರಕ ಸಿಂಪಡಣೆ ಮಾಡಿದ ಬಿಲ್‌ ಇನ್ನೂ ಗುತ್ತಿಗೆದಾರರಿಗೆ ಪಾವತಿ ಆಗಿಲ್ಲ. ಇದರಿಂದ ನೊಂದ ಗುತ್ತಿಗೆದಾರರು, ‘ನಮ್ಮ ಹಣ ನಮಗೆ ದೊರಕಿಸಿಕೊಡಿ’ ಎಂದು ಒತ್ತಾಯಿಸಿದ್ದಾರೆ.

‘ಸೋಂಕು ನಿವಾರಕ ಸಿಂಪಡಣೆ ಮಾಡಿದವರಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರೇ ಹೆಚ್ಚು. ಅವರು ಜೀವದ ಹಂಗು ತೊರೆದು ಕೆಲಸ ಮಾಡಿದ್ದರು. ಅವರಿಗೆ ಸಮಸ್ಯೆ ಆಗಬಾರದು ಎಂಬ ಕಾರಣಕ್ಕೆ ಚಿನ್ನ ಅಡವಿಟ್ಟು ಹಣ ಪಾವತಿ ಮಾಡಿದ್ದೇವೆ. ಆದರೆ, ಸೋಂಕು ನಿವಾರಕ ಸಿಂಪಡಣೆಗಾಗಿ ಬಿಬಿಎಂಪಿಯಿಂದ ನಮಗೆ ಇನ್ನೂ ಹಣ ಬಿಡುಗಡೆಯಾಗಿಲ್ಲ. ನಾವು ಬೀದಿಗೆ ಬೀಳುವ ಪರಿಸ್ಥಿತಿ ತಲುಪಿದ್ದೇವೆ. ನಮ್ಮ ಹೆಂಡತಿ ಮಕ್ಕಳು ಕಷ್ಟಪಡುವ ಸ್ಥಿತಿ ಎದುರಾಗಿದೆ’ ಎಂದು ಬಿಬಿಎಂಪಿ ಪಶ್ಚಿಮ ವಲಯದ ಗುತ್ತಿಗೆದಾರರು ಆರೋಪಿಸಿದ್ದಾರೆ.

ಗುತ್ತಿಗೆದಾರರು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಮಂಗಳವಾರ ಭೇಟಿಯಾಗಿ ತಮಗೆ ಬರಬೇಕಾದ ಹಣವನ್ನು ಕೊಡಿಸುವಂತೆ ಒತ್ತಾಯಿಸಿದರು. ಈ ಬಗ್ಗೆ ವಿಚಾರಿಸುವುದಾಗಿ ಸಿದ್ದರಾಮಯ್ಯ ಭರವಸೆ ನೀಡಿದರು.

ADVERTISEMENT

‘2020ರ ಮಾರ್ಚ್‌ ತಿಂಗಳಿನಿಂದಲೇ ನಾವು ಕೋವಿಡ್‌ ನಿಯಂತ್ರಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇವೆ. ಸೋಂಕು ನಿವಾರಕ ದ್ರಾವಣ ಸಿಂಪಡಿಸಿದ ಹಣ ಕೇಳಿದರೆ ಅಧಿಕಾರಿಗಳು ದುಡ್ಡಿಲ್ಲ ಎನ್ನುತ್ತಿದ್ದಾರೆ. ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಬಿಡುಗಡೆ ಮಾಡಿದ ಅನುದಾನ ಏನಾಗಿದೆ’ ಎಂದು ಗುತ್ತಿಗೆದಾರರು ಪ್ರಶ್ನಿಸಿದರು.

‘ಲಾಕ್‌ಡೌನ್‌ ಜಾರಿಯಲ್ಲಿದ್ದ ಸಮಯದಲ್ಲಿ ಕೊರೊನಾ ಸೋಂಕಿಗೆ ಒಳಗಾಗಿದ್ದ ಪ್ರತಿಯೊಬ್ಬ ವ್ಯಕ್ತಿಯ ಮನೆಯನ್ನೂ ಬಿಡದೇ ನಮ್ಮ ಸಿಬ್ಬಂದಿ ಸೋಂಕು ನಿವಾರಕ ಸಿಂಪಡಣೆ ಮಾಡಿದ್ದಾರೆ. ಪಶ್ಚಿಮ ವಲಯದ 44 ವಾರ್ಡ್‌ಗಳಲ್ಲಿ ಕೆಲಸ ಮಾಡಿದ್ದಾರೆ. ಆಟೊ ಬಾಡಿಗೆಯನ್ನೂ ನಾವೇ ಭರಿಸಿದ್ದೇವೆ. ನಮಗೆ ನ್ಯಾಯಯುತವಾಗಿ ಸಲ್ಲಬೇಕಾದ ಹಣವನ್ನು ಪಡೆಯಲು ಬಿಬಿಎಂಪಿ ಕಚೇರಿಗಳಿಗೆ ಅಲೆದು ಸುಸ್ತಾಗಿದ್ದೇವೆ. ಇನ್ನು ಕಾಯಲು ಸಾಧ್ಯವಿಲ್ಲ’ ಎಂದರು.

‘ಕೊರೊನಾ ನಿಯಂತ್ರಣದಲ್ಲಿ ಸೋಂಕು ನಿವಾರಕ ಸಿಂಪಡಣೆ ಗುತ್ತಿಗೆದಾರರ ಪಾತ್ರವೂ ಪ್ರಮುಖವಾದುದು. ಈಗ ನಗರದಲ್ಲಿ ಕೋವಿಡ್‌ ಹರಡುವಿಕೆಯ ಎರಡನೇ ಅಲೆ ವ್ಯಾಪಿಸುವ ಆತಂಕ ಎದುರಾಗಿದೆ. ಇಂತಹ ಸಂದರ್ಭದಲ್ಲಿ ಬಿಬಿಎಂಪಿ ಗುತ್ತಿಗೆದಾರರ ಹಣ ಬಾಕಿ ಉಳಿಸಿಕೊಂಡರೆ ಸೋಂಕು ಹರಡುವಿಕೆ ನಿಯಂತ್ರಣ ಕಷ್ಟವಾಗಲಿದೆ. ಶೀಘ್ರವೇ ಅವರಿಗೆ ಸಲ್ಲಬೇಕಾದ ಹಣವನ್ನು ಬಿಬಿಎಂಪಿ ಬಿಡುಗಡೆ ಮಾಡಬೇಕು’ ಎಂದು ಕಾಂಗ್ರೆಸ್‌ ಮುಖಂಡ ಎಂ.ಶಿವರಾಜು ಒತ್ತಾಯಿಸಿದರು.

ಈ ಕುರಿತು ಪ್ರತಿಕ್ರಿಯಿಸಿದ ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತರಾದ ತುಳಸಿ ಮದ್ದಿನೇನಿ, ‘ಈ ಹಿಂದೆ ಕೋವಿಡ್‌ ನಿಯಂತ್ರಣ ಕಾರ್ಯಕ್ಕೆ ಆಯಾ ವಲಯದ ಉಪಾಯುಕ್ತರ ಹಂತದಲ್ಲೇ ಹಣ ಪಾವತಿಯಾಗುತ್ತಿತ್ತು. ಈಗ ಜಂಟಿ ಆಯುಕ್ತರ ಮೂಲಕ ಕೇಂದ್ರ ಕಚೇರಿಯ ಗಮನಕ್ಕೆ ತಂದು ನಂತರ ಹಣ ಬಿಡುಗಡೆ ಮಾಡುವ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ. ಇದರಲ್ಲಿ ಸ್ವಲ್ಪ ತಾಂತ್ರಿಕ ಸಮಸ್ಯೆ ಇದೆ. ಅನುದಾನದ ಕೊರತೆಯೂ ಇದೆ. ಅನುದಾನ ಒದಗಿಸುವಂತೆ ಸರ್ಕಾರವನ್ನೂ ಕೋರಿದ್ದೇವೆ. ಅನುದಾನ ಬಿಡುಗಡೆಯಾದ ತಕ್ಷಣವೇ ಎಲ್ಲರ ಬಾಕಿ ಮೊತ್ತವನ್ನು ಬಿಡುಗಡೆ ಮಾಡುತ್ತೇವೆ’ ಎಂದು ತಿಳಿಸಿದರು.

***

ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್‌ ನಿಯಂತ್ರಣ ಕಾರ್ಯ ಮಾಡಿರುವ ವೆಚ್ಚಕ್ಕೆ ಸಂಬಂಧಿಸಿದಂತೆ ಸರ್ಕಾರದಿಂದಲೂ ಅನುದಾನ ಬಿಡುಗಡೆ ಬಾಕಿ ಇದೆ. ಅನುದಾನ ಒದಗಿಸುವಂತೆ ಸರ್ಕಾರವನ್ನು ಕೋರಿದ್ದೇವೆ

-ಎನ್‌.ಮಂಜುನಾಥ ಪ್ರಸಾದ್‌, ಬಿಬಿಎಂಪಿ ಆಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.