ADVERTISEMENT

ಕೋವಿಡ್ ಎರಡನೇ ಅಲೆ ಸಾಮಾನ್ಯ: ತಾಂತ್ರಿಕ ಸಲಹಾ ಸಮಿತಿ ಸದಸ್ಯ ಡಾ.ವಿ. ರವಿ ಅಭಿಮತ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2021, 23:35 IST
Last Updated 25 ಫೆಬ್ರುವರಿ 2021, 23:35 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬೆಂಗಳೂರು: ‘ಕೋವಿಡ್‌ ಎರಡನೇ ಅಲೆ ಕಾಣಿಸಿಕೊಳ್ಳುವುದು ಸಾಮಾನ್ಯ. ಹೆಚ್ಚಿನ ಸಂಖ್ಯೆಯಲ್ಲಿ ಪರೀಕ್ಷೆ, ಲಸಿಕೆಯಿಂದಾಗಿ ಇಲ್ಲಿ ಎರಡನೇ ಅಲೆ ಕಾಣಿಸಿಕೊಂಡರೂ ಅದರ ತೀವ್ರತೆ ಕಡಿಮೆ ಇರಲಿದೆ’ ಎಂದು ವೈರಾಣು ತಜ್ಞ ಹಾಗೂ ಕೋವಿಡ್‌ ತಾಂತ್ರಿಕ ಸಲಹಾ ಸಮಿತಿಯ ಸದಸ್ಯ ಡಾ.ವಿ. ರವಿ ತಿಳಿಸಿದರು.

ನ್ಯೂಬರ್ಗ್ ಡಯಾಗ್ನಾಸ್ಟಿಕ್ ಆನ್‌ಲೈನ್ ವೇದಿಕೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ಕೊರೊನಾ ವೈರಾಣು–ರೂಪಾಂತರ ಮತ್ತು ಲಸಿಕೆ’ ಎಂಬ ವಿಷಯದ ಕುರಿತ ಚರ್ಚೆಯಲ್ಲಿ ಅವರು ಮಾತನಾಡಿದರು. ‘ಯಾವುದೇ ಹೊಸ ವೈರಾಣು ಈಗಲ್ಲದಿದ್ದರೂ ಮುಂದಿನ ದಿನಗಳಲ್ಲಿ ಪ್ರತಿಯೊಬ್ಬರ ದೇಹದ ಮೇಲೂ ದಾಳಿ ನಡೆಸಲಿದೆ. ಕೊರೊನಾ ವೈರಾಣು ಕೂಡ ಅದೇ ಮಾದರಿಯದು’ ಎಂದು ಹೇಳಿದರು.

‘ವೈರಾಣು ಕಾಯಿಲೆ ನಿಯಂತ್ರಣಕ್ಕೆ ಬರಬೇಕಾದರೆ ಹೆಚ್ಚಿನ ಸಂಖ್ಯೆಯಲ್ಲಿ ಪರೀಕ್ಷೆ ನಡೆಸುವುದರ ಜತೆಗೆ ಸಂಪರ್ಕಿತರನ್ನು ಪತ್ತೆ ಮಾಡಬೇಕಾಗುತ್ತದೆ. ಜನರಲ್ಲಿ ಕೂಡ ಜಾಗೃತಿ ಮೂಡುತ್ತಿದ್ದು, ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಲಾರಂಭಿಸಿದ್ದಾರೆ. ಲಸಿಕೆ ವಿತರಣೆ ಅಭಿಯಾನ ಕೂಡ ವೇಗವಾಗಿ ನಡೆಯುತ್ತಿರುವುದು ಎರಡನೇ ಅಲೆಗೆ ತಕ್ಕಮಟ್ಟಿನ ತಡೆಯೊಡ್ಡಿದೆ’ ಎಂದರು.

ADVERTISEMENT

ಅಪೋಲೊ ಆಸ್ಪತ್ರೆಯ ಸೋಂಕು ರೋಗಗಳ ತಜ್ಞ ಡಾ.ವಿ. ರಾಮಸುಬ್ರಹ್ಮಣ್ಯನ್, ‘ಲಸಿಕೆ ಪಡೆದ ಬಳಿಕವೂ ಮುಖಗವಸು ಧರಿಸುವುದು, ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ವಿವಿಧ ಮಾರ್ಗಸೂಚಿಗಳನ್ನು ಪಾಲಿಸಬೇಕಿದೆ. ಲಸಿಕೆ ಬಗ್ಗೆ ಹರಡಿದ ವದಂತಿಗಳಿಗೆ ಕಿವಿಗೊಡಬಾರದು. ಯಾವುದೇ ಲಸಿಕೆ ಪಡೆದರೂ ಸಣ್ಣ ಪ್ರಮಾಣದಲ್ಲಿ ಅಡ್ಡ ಪರಿ
ಣಾಮಗಳು ಗೋಚರಿಸುತ್ತವೆ. ಹಾಗಂತ ಹೆದರಬೇಕಿಲ್ಲ’ ಎಂದು ಹೇಳಿದರು.

ನ್ಯೂಬರ್ಗ್‌ ಡಯಾಗ್ನಾಸ್ಟಿಕ್‌ನ ಸೂಕ್ಷ್ಮ ಜೀವಶಾಸ್ತ್ರಜ್ಞೆ ಡಾ. ಶರಣ್ಯ ನಾರಾಯಣ ಮಾತನಾಡಿ, ‘ಮಹಾರಾಷ್ಟ್ರ, ಕೇರಳ ಸೇರಿದಂತೆ ಕೆಲ ರಾಜ್ಯಗಳಲ್ಲಿ ಮತ್ತೆ ಪ್ರಕರಣಗಳ ಸಂಖ್ಯೆ ಏರಿಕೆ ಕಾಣುತ್ತಿದೆ. ಹಾಗಾಗಿ, ಈ ಸಂದರ್ಭದಲ್ಲಿ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಿದೆ. ಸೋಂಕು ಲಕ್ಷಣ ಕಾಣಿಸಿಕೊಂಡವರು ಪರೀಕ್ಷೆ ಮಾಡಿಸಿಕೊಳ್ಳದಿರುವುದು ಹಾಗೂ ಬೇಕಾಬಿಟ್ಟಿ ಎಲ್ಲೆಂದರಲ್ಲಿ ಓಡಾಡುತ್ತಿರುವುದರಿಂದಾಗಿ ಕೋವಿಡ್‌ ಮತ್ತೆ ಹೆಚ್ಚಿನ ಪ್ರಮಾಣದಲ್ಲಿ ಹರಡಲು ಪ್ರಾರಂಭಿಸಿದೆ’ ಎಂದರು.

ಮಹಾರಾಷ್ಟ್ರದಲ್ಲಿ ಒಂದೇ ಹಾಸ್ಟೆಲ್‌ನ 229 ವಿದ್ಯಾರ್ಥಿಗಳಿಗೆ ಕೋವಿಡ್‌(ಮುಂಬೈ ವರದಿ): ‘ಮಹಾರಾಷ್ಟ್ರದ ವಾಶಿಮ್‌ ಜಿಲ್ಲೆಯ ಸರ್ಕಾರಿ ಶಾಲೆಯ ಹಾಸ್ಟೆಲ್‌ವೊಂದರಲ್ಲಿ 229 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ’ ಎಂದು ಅಧಿಕಾರಿಗಳು ಗುರುವಾರ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.