ADVERTISEMENT

ಕೋವಿಡ್ ಲಸಿಕೆ: ಎರಡನೇ ಡೋಸ್ ಮುಂದೂಡಿಕೆ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2021, 17:05 IST
Last Updated 12 ಫೆಬ್ರುವರಿ 2021, 17:05 IST
ಕೋವಿಡ್‌ ಲಸಿಕೆ ನೀಡುತ್ತಿರುವ ಸಂಗ್ರಹ ಚಿತ್ರ
ಕೋವಿಡ್‌ ಲಸಿಕೆ ನೀಡುತ್ತಿರುವ ಸಂಗ್ರಹ ಚಿತ್ರ    

ಬೆಂಗಳೂರು: ಕೇಂದ್ರ ಆರೋಗ್ಯ ಸಚಿವಾಲಯವು ಮಾರ್ಗಸೂಚಿ ಹೊರಡಿಸಿ, ನಿರ್ದೇಶನ ನೀಡದಿರುವುದರಿಂದ ರಾಜ್ಯದಲ್ಲಿ ಕೋವಿಡ್‌ ಲಸಿಕೆ ಎರಡನೇ ಡೋಸ್ ವಿತರಣೆಯನ್ನು ಮುಂದೂಡಲಾಗಿದೆ.

ರಾಜ್ಯದ ವಿವಿಧೆಡೆ ಲಸಿಕೆ ವಿತರಣೆಗೆ ಕಳೆದ ಜ.16ರಂದು ಚಾಲನೆ ನೀಡಲಾಗಿತ್ತು. ಅಂದು ರಾಜ್ಯದ 243 ಕೇಂದ್ರಗಳಲ್ಲಿ 13 ಸಾವಿರ ಮಂದಿ ಹಾಜರಾಗಿ, ಲಸಿಕೆ ಪಡೆದುಕೊಂಡಿದ್ದರು. ಮೊದಲ ಡೋಸ್ ಪಡೆದ 28ನೇ ದಿನಕ್ಕೆ ಎರಡನೇ ಡೋಸ್ ನೀಡುವುದಾಗಿ ಆರೋಗ್ಯ ಇಲಾಖೆ ಹೇಳಿತ್ತು. ಆದರೆ, ಕೇಂದ್ರ ಸರ್ಕಾರವು ಎರಡನೇ ಡೋಸ್ ವಿತರಣೆಗೆ ಸಂಬಂಧಿಸಿದಂತೆ ರಾಜ್ಯಗಳಿಗೆ ಸೂಚನೆ ನೀಡಿಲ್ಲ.

‘ಕೋವಿಡ್ ಲಸಿಕೆ ಬಗ್ಗೆ ಕೇಂದ್ರ ಸರ್ಕಾರವು ರಾಜ್ಯಗಳ ಜತೆಗೆ ಶನಿವಾರ ಪ್ರಗತಿ ಪರಿಶೀಲನಾ ಸಭೆ ನಡೆಸಲಿದೆ. ಈ ವೇಳೆ ಎರಡನೇ ಡೋಸ್ ವಿತರಣೆಗೆ ಸಂಬಂಧಿಸಿದಂತೆ ಚರ್ಚಿಸಿ, ನಿರ್ಧಾರ ಕೈಗೊಳ್ಳಲಾಗುತ್ತದೆ’ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ADVERTISEMENT

ನಾಲ್ವರಿಗೆ ಅಡ್ಡ ಪರಿಣಾಮ: ರಾಜ್ಯದಲ್ಲಿ ಶುಕ್ರವಾರ 26,633 ಆರೋಗ್ಯ ಕಾರ್ಯಕರ್ತರನ್ನು ಲಸಿಕೆ ಪಡೆಯಲು ಗುರುತಿಸಲಾಗಿತ್ತು. ಅವರಲ್ಲಿ 2,944 ಮಂದಿ ಮಾತ್ರ ಹಾಜರಾಗಿದ್ದಾರೆ. ಅದೇ ರೀತಿ, ನಿಗದಿಪಡಿಸಲಾಗಿದ್ದ 84,238 ಕೋವಿಡ್‌ ಮುಂಚೂಣಿ ಯೋಧರಲ್ಲಿ 11,571 ಮಂದಿ ಲಸಿಕೆ ಹಾಕಿಸಿಕೊಂಡಿದ್ದಾರೆ. ಒಟ್ಟಾರೆ ಶೇ 13 ರಷ್ಟು ಮಂದಿ ಮಾತ್ರ ಹಾಜರಾಗಿದ್ದಾರೆ. ಲಸಿಕೆ ಪಡೆದವರಲ್ಲಿ ನಾಲ್ವರಲ್ಲಿ ತೀವ್ರ ಮತ್ತು ಗಂಭೀರ ಸ್ವರೂಪದ ಅಡ್ಡ ಪರಿಣಾಮಗಳು ಕಾಣಿಸಿಕೊಂಡಿಲ್ಲ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಜ.16ರಿಂದ ಈವರೆಗೆ ನಿಗದಿಪಡಿಸಲಾಗಿದ್ದ 8,20,791 ಆರೋಗ್ಯ ಕಾರ್ಯಕರ್ತರಲ್ಲಿ 4,08,424 ಮಂದಿ ಲಸಿಕೆ ಹಾಕಿಸಿಕೊಂಡಿದ್ದಾರೆ. ಇದರಿಂದ ಶೇ 50ರಷ್ಟು ಗುರಿ ಸಾಧ್ಯವಾಗಿದೆ. 2,86,562 ಮುಂಚೂಣಿ ಯೋಧರನ್ನು ಈವರೆಗೆ ಲಸಿಕೆ ಪಡೆಯಲು ಗುರುತಿಸಲಾಗಿತ್ತು. ಅವರಲ್ಲಿ 81,430 ಮಂದಿ ಹಾಜರಾಗಿ ಲಸಿಕೆ ಪಡೆದುಕೊಂಡಿದ್ದಾರೆ. ಇದರಿಂದ ಶೇ 28ರಷ್ಟು ಗುರಿ ಸಾಧ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.