ADVERTISEMENT

ಕೋವಿಡ್‌ ಲಸಿಕೆ: ಸಿಗದ ಪ್ರಮಾಣ ಪತ್ರ

ತಾಂತ್ರಿಕ ಸಮಸ್ಯೆ; ಕಾರ್ಯನಿರ್ವಹಿಸದ ಮೊಬೈಲ್ ಆ್ಯಪ್

ವರುಣ ಹೆಗಡೆ
Published 30 ಜನವರಿ 2021, 18:42 IST
Last Updated 30 ಜನವರಿ 2021, 18:42 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬೆಂಗಳೂರು: ಕೋವಿಡ್‌ ಲಸಿಕೆ ಅಭಿಯಾನ ಪ್ರಾರಂಭವಾಗಿ 15 ದಿನಗಳಾದರೂ ತಾಂತ್ರಿಕ ಸಮಸ್ಯೆಗಳು ನಿವಾರಣೆಯಾಗಿಲ್ಲ. ಇದರಿಂದಾಗಿ ರಾಜ್ಯದಲ್ಲಿ ಈಗಾಗಲೇ ಕೋವಿಡ್‌ ಲಸಿಕೆ ಪಡೆದುಕೊಂಡವರಿಗೆ ಪ್ರಮಾಣ ಪತ್ರಗಳು ಸಿಗುತ್ತಿಲ್ಲ.

ಲಸಿಕೆ ವಿತರಣೆಯಲ್ಲಿ ಇಡೀ ದೇಶದಲ್ಲಿ ಮುಂಚೂಣಿಯಲ್ಲಿದೆ. ‘ಕೋವಿಶೀಲ್ಡ್‌’ ಹಾಗೂ ‘ಕೋವ್ಯಾಕ್ಸಿನ್’ ಲಸಿಕೆಗಳನ್ನು ನೀಡಲಾಗುತ್ತಿದ್ದು, 3 ಲಕ್ಷಕ್ಕೂ ಅಧಿಕ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ಹಾಕಲಾಗಿದೆ. ಕೇಂದ್ರ ಸರ್ಕಾರ 15.52 ಲಕ್ಷ ಡೋಸ್‌ಗಳನ್ನು ಕರ್ನಾಟಕಕ್ಕೆ ನೀಡಿದ್ದು, ಜಿಲ್ಲಾವಾರು ಹಂಚಿಕೆ ಮಾಡಲಾಗಿದೆ.

ಲಸಿಕೆ ವಿತರಣೆ ಸರಳಗೊಳಿಸಲು ಹಾಗೂ ಪಾರದರ್ಶಕ ವ್ಯವಸ್ಥೆಗೆ ‘ಕೋವಿನ್ ಆ್ಯಪ್’ ಅಭಿವೃದ್ಧಿಪಡಿಸಲಾಗಿದೆ. ಪೋರ್ಟಲ್‌ನಲ್ಲಿ ಹೆಸರು ನೋಂದಾಯಿಸಿದವರಿಗೆ ಲಸಿಕೆ ಪಡೆಯುವ ಕೇಂದ್ರ, ದಿನಾಂಕ ಮತ್ತಿತರ ಮಾಹಿತಿಗಳನ್ನು ಒದಗಿಸಲು ಆ್ಯಪ್ ಸಹಾಯಕ. ಈ ಆ್ಯಪ್ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದೆ. ನೋಂದಾಯಿತ ವ್ಯಕ್ತಿಯು ಮೊದಲ ಡೋಸ್ ಹಾಗೂ ಎರಡನೇ ಡೋಸ್ ಪಡೆದ ಬಳಿಕ ಆ್ಯಪ್‌ ಮೂಲಕವೇ ಪ್ರಮಾಣ ಪತ್ರ ನೀಡುವ ವ್ಯವಸ್ಥೆ ರೂಪಿಸಲಾಗಿತ್ತು. ಮೊದಲ ಡೋಸ್ ಲಸಿಕೆ ಪಡೆದವರಿಗೆ ತಾಂತ್ರಿಕ ಸಮಸ್ಯೆಯ ಕಾರಣಕ್ಕೆ ಈವರೆಗೂ ಪ್ರಮಾಣ ಪತ್ರ ದೊರೆತಿಲ್ಲ.

ADVERTISEMENT

ಎರಡನೇ ಹಂತ ದೂರ: ಲಸಿಕೆ ವಿತರಣೆಗೆ ಕೇಂದ್ರ ಸರ್ಕಾರದ 15,730 ಹಾಗೂ ರಾಜ್ಯ ಸರ್ಕಾರದ 7,75,400 ಆರೋಗ್ಯ ಕಾರ್ಯಕರ್ತರು ಹಾಗೂ2,580 ಸೇನಾ ವೈದ್ಯಕೀಯ ಸಿಬ್ಬಂದಿಯನ್ನು ಗುರುತಿಸಲಾಗಿದೆ. ಮೂರರಿಂದ ನಾಲ್ಕು ವಾರಗಳಲ್ಲಿ ಎಲ್ಲ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ವಿತರಣೆ ಮಾಡುವ ಗುರಿಯನ್ನು ಆರೋಗ್ಯ ಇಲಾಖೆ ಹಾಕಿಕೊಂಡಿತ್ತು. ಆದರೆ, ಶೇ 48 ರಷ್ಟು ಮಂದಿ ನಾನಾ ಕಾರಣಗಳಿಂದ ಗೈರಾಗಿದ್ದಾರೆ. ಇದರಿಂದಾಗಿ 50 ವರ್ಷ ಮೇಲ್ಪಟ್ಟವರು ಎರಡನೇ ಹಂತದಲ್ಲಿ ಲಸಿಕೆ ಪಡೆಯಲು ಇನ್ನಷ್ಟು ದಿನ ಕಾಯಬೇಕಾಗಿದೆ.

‘ಲಸಿಕೆ ಸುರಕ್ಷಿತವಾಗಿದೆ. ಕೆಲವರು ಕಾದು ನೋಡುವ ತಂತ್ರ ಅನುಸರಿಸುತ್ತಿದ್ದಾರೆ ಎಂದೆನಿಸುತ್ತದೆ. ರೋಗ ಬರದಂತೆ ತಡೆಯಲು ಹಾಗೂ ಹರಡುವುದನ್ನು ತಪ್ಪಿಸಲು ಲಸಿಕೆ ಸಹಾಯಕ. ನಾವು ಕೂಡ ಲಸಿಕೆ ಪಡೆದುಕೊಂಡು, ಉಳಿದವರಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ’ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷ ಡಾ.ಜಿ.ಎ. ಶ್ರೀನಿವಾಸ್ ತಿಳಿಸಿದರು.

ಪ್ರಮಾಣ ಪತ್ರದಲ್ಲಿ ಸಮಗ್ರ ವರದಿ

ಪಲ್ಸ್‌ ಪೋಲಿಯೊ ಸೇರಿದಂತೆ ವಿವಿಧ ಲಸಿಕೆಗಳನ್ನು ನೀಡಲಾಗುತ್ತಿದೆ. ಲಸಿಕೆ ಪಡೆದವರಿಗೆ ಇದೇ ಮೊದಲ ಬಾರಿಗೆ ಪ್ರಮಾಣ ಪತ್ರ ನೀಡಲು ನಿರ್ಧರಿಸಲಾಗಿದೆ. ಕೋವಿಡ್‌ ಲಸಿಕೆ ಪಡೆದವರಿಗೆ ನೀಡುವ ಪ್ರಮಾಣ ಪತ್ರದಲ್ಲಿ ಅವರ ವೈಯಕ್ತಿಕ ಮಾಹಿತಿಯ ಜತೆಗೆ ಆಧಾರ್ ಸೇರಿದಂತೆ ವಿವಿಧ ಗುರುತಿನ ಚೀಟಿಯ ಸಂಖ್ಯೆಯೂ ಇರಲಿದೆ. ವ್ಯಕ್ತಿಯ ಆರೋಗ್ಯದ ಸ್ಥಿತಿಗತಿ, ಲಸಿಕೆ ಪಡೆದ ದಿನಾಂಕ, ಸ್ಥಳ, ಲಸಿಕೆಯ ಹೆಸರು ಸೇರಿದಂತೆ ವಿವಿಧ ಮಾಹಿತಿಗಳು ಇರಲಿವೆ. ವಿದೇಶಗಳಲ್ಲಿ ಈ ಮಾದರಿಯ ವರದಿಗೆ ‘ಪ್ರತಿಕಾಯದ ಪಾಸ್‌ಪೋರ್ಟ್‌’ ಎಂದು ಪರಿಗಣಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.