ADVERTISEMENT

ಕೋವಿಡ್ ಮೂರನೇ ಅಲೆ: ದೊಡ್ಡ ಪ್ರಮಾಣದ ಲಸಿಕಾ ಅಭಿಯಾನ ಅಗತ್ಯ – ತಜ್ಞರ ಸಮಿತಿ ಆಗ್ರಹ

ಖಾಸಗಿ ಆಸ್ಪತ್ರೆಗಳ ಒಕ್ಕೂಟದ ತಜ್ಞರ ಸಮಿತಿ ಆಗ್ರಹ * ಡಾ. ಹೇಮಾ ದಿವಾಕರ್ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ

​ಪ್ರಜಾವಾಣಿ ವಾರ್ತೆ
Published 15 ಜುಲೈ 2021, 20:41 IST
Last Updated 15 ಜುಲೈ 2021, 20:41 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ಕೋವಿಡ್ ಮೂರನೇ ಅಲೆಯನ್ನು ಯಶಸ್ವಿಯಾಗಿ ಎದುರಿಸಬೇಕಾದಲ್ಲಿ ದೊಡ್ಡ ಪ್ರಮಾಣದ ಲಸಿಕಾ ಅಭಿಯಾನ ಕೈಗೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರವೇ ಖಾಸಗಿ ಆಸ್ಪತ್ರೆಗಳಿಗೆ ಅಗತ್ಯ ಪ್ರಮಾಣದಲ್ಲಿ ಲಸಿಕೆ ಪೂರೈಕೆಗೆ ಕ್ರಮ ವಹಿಸಬೇಕು’ ಎಂದು ಖಾಸಗಿ ಆಸ್ಪತ್ರೆಗಳ ಒಕ್ಕೂಟ ರಚಿಸಿದ ತಜ್ಞರ ಸಮಿತಿ ಆಗ್ರಹಿಸಿದೆ.

ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್ಸ್ ಅಸೋಸಿಯೇಷನ್‌ (ಫನಾ) ಕೋವಿಡ್ ಮೂರನೇ ಅಲೆಗೆ ಸಂಬಂಧಿಸಿದಂತೆ ದಿವಾಕರ್ಸ್ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕಿ ಡಾ. ಹೇಮಾ ದಿವಾಕರ್ ಅಧ್ಯಕ್ಷತೆಯಲ್ಲಿ ತಜ್ಞರ ಸಮಿತಿ ರಚಿಸಿದೆ. ಪ್ರಾಥಮಿಕ ವರದಿಯನ್ನು ಸಿದ್ಧಪಡಿಸುವ ಸಂಬಂಧ ಸಮಿತಿ ಸಭೆ ನಡೆಸಿ, ರೂಪುರೇಷೆಯನ್ನು ತಯಾರಿಸಿದೆ.

‘ಮೂರನೇ ಅಲೆ ಸಂಬಂಧ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಹತ್ತು ದಿನಗಳಲ್ಲಿ 30 ಪುಟಗಳ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು’ ಎಂದು ಫನಾ ಅಧ್ಯಕ್ಷ ಡಾ. ಪ್ರಸನ್ನ ಎಚ್‌.ಎಂ. ತಿಳಿಸಿದರು.

ADVERTISEMENT

ವೈದ್ಯರಿಗೆ ತರಬೇತಿ: ‘ಮೂರನೇ ಅಲೆ ಎದುರಿಸಲು ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕಿದೆ. ವಯಸ್ಕರಿಗೆ ಚಿಕಿತ್ಸೆ ಒದಗಿಸುವ ವೈದ್ಯರಿಗೆ ಕೂಡ ಮಕ್ಕಳ ಆರೈಕೆ ಬಗ್ಗೆ ತರಬೇತಿ ಒದಗಿಸಬೇಕಿದೆ. ಸರ್ಕಾರ ಕೈಗೊಳ್ಳುವ ಕ್ರಮಗಳಿಗೆ ಸಹಕಾರ ನೀಡಬೇಕಾಗುತ್ತದೆ. ಈ ಬಗ್ಗೆ ವರದಿ ತಯಾರಿಸಲಾಗುತ್ತಿದೆ’ ಎಂದು ಸಮಿತಿಯ ಅಧ್ಯಕ್ಷೆ ಡಾ. ಹೇಮಾ ದಿವಾಕರ್ ತಿಳಿಸಿದರು.

‘ಸಿದ್ಧಪಡಿಸುತ್ತಿರುವ ವರದಿ ಖಾಸಗಿ ಆಸ್ಪತ್ರೆಗಳ ದೃಷ್ಟಿಕೋನದಲ್ಲಿ ಇರಲಿದೆ. ಲಸಿಕೆಯ ಬಗ್ಗೆ ಜನರಿಗೆ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ಈಗ ಸಾಕಷ್ಟು ಗೊಂದಲಗಳಿವೆ. ಮೊದಲು ಸರ್ಕಾರವೇ ಖಾಸಗಿ ಆಸ್ಪತ್ರೆಗಳಿಗೆ ಲಸಿಕೆ ಒದಗಿಸಿತು. ಬಳಿಕ ನೇರವಾಗಿ ಕಂಪನಿಗಳಿಂದ ಖರೀದಿಸಲು ಅವಕಾಶ ನೀಡಲಾಯಿತು. ಇದರಿಂದ ಕೆಲ ಆಸ್ಪತ್ರೆಗಳಿಗೆ ಮಾತ್ರ ಲಸಿಕೆ ದೊರೆತು, ಅಭಿಯಾನಕ್ಕೆ ಹಿನ್ನಡೆಯಾಯಿತು’ ಎಂದು ಡಾ. ಪ್ರಸನ್ನ ಎಚ್.ಎಂ. ಹೇಳಿದರು.

‘ಸರ್ಕಾರವೇ ಲಸಿಕೆ ಹಂಚಿಕೆ ಮಾಡಲಿ’

‘ಲಸಿಕೆಯ ಬಗ್ಗೆ ಪ್ರಾರಂಭಿಕ ದಿನಗಳಿಂದ ಕೂಡ ಗೊಂದಲವಿದೆ. ಅಭಿಯಾನಕ್ಕೆ ವೇಗ ದೊರೆಯಲು ಹಾಗೂ ಲಸಿಕೆ ಎಲ್ಲರಿಗೂ ಸುಲಭವಾಗಿ ದೊರೆಯುವಂತಾಗಲು ಸರ್ಕಾರವೇ ನೇರವಾಗಿ ಖರೀದಿಸಿ, ಖಾಸಗಿ ಆಸ್ಪತ್ರೆಗಳಿಗೆ ಹಂಚಿಕಿ ಮಾಡುವ ವ್ಯವಸ್ಥೆಯನ್ನು ರೂಪಿಸಬೇಕು. ಪ್ರಾರಂಭಿಕ ದಿನಗಳಲ್ಲಿ ಈ ವ್ಯವಸ್ಥೆ ಇದ್ದ ಕಾರಣ ಲಸಿಕೆ ಕೇಂದ್ರಗಳಲ್ಲಿ ಜನದಟ್ಟಣೆ ಉಂಟಾಗುತ್ತಿರಲಿಲ್ಲ. ಸೇವಾ ಶುಲ್ಕವನ್ನು ಮಾತ್ರ ಆಗ ಪಡೆಯಲಾಗುತ್ತಿತ್ತು, ಅದೇ ಮಾದರಿಯನ್ನು ಈಗ ಪುನಃ ಜಾರಿ ಮಾಡಬೇಕು’ ಎಂದು ಡಾ. ಪ್ರಸನ್ನ ಎಚ್‌.ಎಂ. ಆಗ್ರಹಿಸಿದರು.

‘ಮೂರಲೇ ಅಲೆಯ ಸಾಧ್ಯತೆಯ ಕಾರಣ ಸೋಂಕಿತರ ಸಂಖ್ಯೆ ಏರಿಕೆಯನ್ನು ಪ್ರಾರಂಭಿಕ ಹಂತದಲ್ಲಿಯೇ ಗುರುತಿಸಿ, ಚಿಕಿತ್ಸೆ ಒದಗಿಸಬೇಕಿದೆ. ಅದೇ ರೀತಿ, ಸೋಂಕು ಹರಡುವಿಕೆಯನ್ನು ತಡೆಯಲು ಕ್ರಮ ಕೈಗೊಳ್ಳಬೇಕು’ ಎಂದು ಫನಾದ ಕಾರ್ಯದರ್ಶಿ ಡಾ. ರಾಜಶೇಖರ್ ವೈ.ಎಲ್. ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.