ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಎರಡನೇ ಅಲೆ ಕಾಣಿಸಿಕೊಂಡ ಕಾರಣ ಎಲ್ಲ ಅಂಗವಿಕಲರಿಗೆ ಲಸಿಕೆಯನ್ನು ಒದಗಿಸಬೇಕು ಎಂದು ಕರ್ನಾಟಕ ರಾಜ್ಯ ಅಂಗವಿಕಲರ ರಕ್ಷಣಾ ಸಮಿತಿಯು ಸರ್ಕಾರಕ್ಕೆ ಒತ್ತಾಯಿಸಿದೆ.
ಈ ಸಂಬಂಧ ಸಮಿತಿಯ ಅಧ್ಯಕ್ಷ ಚಂದ್ರಶೇಖರ್ ಪುಟ್ಟಪ್ಪ ಅವರು ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಆಯುಕ್ತರಿಗೆ ಪತ್ರ ಬರೆದಿದ್ದಾರೆ.
ಕೋವಿಡ್ ಲಸಿಕೆ ಅಭಿಯಾನದಡಿ ಅಂಗವಿಕಲರನ್ನು ಕಡೆಗಣಿಸಲಾಗಿದೆ. ಬೌದ್ಧಿಕ ಮತ್ತು ದೈಹಿಕ ಅಂಗವಿಕಲತೆ ಹೊಂದಿರುವ 45 ವರ್ಷದೊಳಗಿನವರಿಗೆ ಕೂಡ ಲಸಿಕೆ ಒದಗಿಸಬೇಕಿದೆ. ಅಂಗವಿಕಲರು ಕೋವಿಡ್ ಪೀಡಿತರಾದಲ್ಲಿ ಹೆಚ್ಚಿನ ಅಪಾಯ ಎದುರಿಸಬೇಕಾಗುತ್ತದೆ. ಸೋಂಕಿನಿಂದ ಚೇತರಿಸಿಕೊಳ್ಳುವಿಕೆ ಅವರಿಗೆ ಸವಾಲಾಗಲಿದೆ.
2011ರ ಜನಗಣತಿ ಪ್ರಕಾರ ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ 1.8ರಷ್ಟು ಮಂದಿ (13.24 ಲಕ್ಷ ) ಅಂಗವಿಕಲರಿದ್ದಾರೆ. ಅಂಗವಿಕಲರ ಹಕ್ಕುಗಳ ಕಾಯ್ದೆ 2016ರ ಸೆಕ್ಷನ್ 25ರ ಪ್ರಕಾರ ಅವರಿಗೆ ಸರ್ಕಾರ ಮತ್ತು ಸ್ಥಳೀಯ ಪ್ರಾಧಿಕಾರಗಳು ಆರೋಗ್ಯ ರಕ್ಷಣೆ ಒದಗಿಸಬೇಕು. ಅದೇ ರೀತಿ, ಚಿಕಿತ್ಸೆಗೆ ಆದ್ಯತೆ ನೀಡಬೇಕು ಎಂದು ಚಂದ್ರಶೇಖರ್ ಪುಟ್ಟಪ್ಪ ತಿಳಿಸಿದ್ದಾರೆ.
ಈ ಕೂಡಲೇ ಎಲ್ಲ ಅಂಗವಿಕಲರಿಗೆ ‘ಕೋವಿಶೀಲ್ಡ್’ ಅಥವಾ ‘ಕೋವ್ಯಾಕ್ಸಿನ್’ ಲಸಿಕೆ ಒದಗಿಸಲು ಅಗತ್ಯ ಕ್ರಮಗಳನ್ನು ಸರ್ಕಾರ ಕೈಗೊಳ್ಳಬೇಕು. ಸರ್ಕಾರದ ಮಾಹಿತಿ ಪ್ರಕಾರಸದ್ಯ ಅಗತ್ಯ ಪ್ರಮಾಣದಲ್ಲಿ ಲಸಿಕೆ ಲಭ್ಯವಿದೆ. ಹಾಗಾಗಿ, ಅವರಿಗೆ ಆರೋಗ್ಯ ಭದ್ರತೆ ಒದಗಿಸಲು ಲಸಿಕೆಯನ್ನು ಉಚಿತವಾಗಿ ನೀಡಬೇಕು. ಈ ಸಂಬಂಧ ವಿಶೇಷ ಶಿಬಿರಗಳನ್ನು ನಡೆಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.