ADVERTISEMENT

ಆತ್ಮಬಲವೇ ಕೋವಿಡ್ ಮಣಿಸಿತು: ಕೊರೊನಾ ಗೆದ್ದ ತೆರಿಗೆ ಇಲಾಖೆ ಅಧಿಕಾರಿಯ ಮಾತು

ಕೋವಿಡ್ ಗೆದ್ದವರ ನೋಡಿ; ಭಯ ಬಿಟ್ಟುಬಿಡಿ

​ಪ್ರಜಾವಾಣಿ ವಾರ್ತೆ
Published 18 ಜುಲೈ 2020, 21:22 IST
Last Updated 18 ಜುಲೈ 2020, 21:22 IST
ಬಿ.ವಿ. ಮುರುಳಿಕೃಷ್ಣ
ಬಿ.ವಿ. ಮುರುಳಿಕೃಷ್ಣ   

ಬೆಂಗಳೂರು:‘ಮನೋಬಲ ಹೆಚ್ಚಿಸಿಕೊಂಡರೆ, ವೈಯಕ್ತಿಕ ಸ್ವಚ್ಛತೆಕಾಪಾಡಿಕೊಂಡರೆ ಕೋವಿಡ್ ಸೋಲಿಸುವುದು ದೊಡ್ಡ ವಿಷಯವೇ ಅಲ್ಲ.’

ಕೋವಿಡ್‌ ತಗುಲಿ ಗುಣಮುಖರಾದ ವಾಣಿಜ್ಯ ತೆರಿಗೆ ಇಲಾಖೆ ಹೆಚ್ಚುವರಿ ಆಯುಕ್ತ(ಇ–ಆಡಳಿತ) ಡಾ. ಬಿ.ವಿ. ಮುರಳಿಕೃಷ್ಣ ಹೇಳುವ ಮಾತಿದು. 57 ವರ್ಷ ವಯಸ್ಸಿನ ಇವರಿಗೆ ಮಧುಮೇಹ ಇದೆ.ಆತ್ಮಸ್ಥೈರ್ಯ ಹೆಚ್ಚಿಸಿಕೊಂಡು ಕೊರೊನಾ ಜಯಿಸಿದ್ದಾರೆ.

‘ಪ್ರತಿಯೊಬ್ಬರ ದೇಹದಲ್ಲೂ ಫೈಟ್ ಅಥವಾ ಫ್ಲೈಟ್ ‌(ಹೋರಾಡು ಅಥವಾ ಪಲಾಯನವಾದ) ಎಂಬ ಎರಡು ರೀತಿಯ ಹಾರ್ಮೋನ್‌ಗಳು ಇರುತ್ತವೆ. ನಮ್ಮ ಮನಸ್ಸು ಹೋರಾಡಲು ನಿರ್ಧಾರ ಮಾಡಿದರೆ ಅದಕ್ಕೆ ಬೇಕಾದ ಹಾರ್ಮೋನ್‌ಗಳು ದೇಹದಲ್ಲಿ ವೃದ್ಧಿಯಾಗುತ್ತವೆ. ಹೀಗಾಗಿ ಆತ್ಮಸ್ಥೈರ್ಯ ಹೆಚ್ಚಿಸಿಕೊಳ್ಳಬೇಕು’ ಎಂದು ಹೇಳಿದರು.

ADVERTISEMENT

‘ಇಬ್ಬರು ಮಕ್ಕಳು, ಪತ್ನಿ ಸೇರಿ ನಾಲ್ವರಿಗೂ ಸೋಂಕು ತಗುಲಿತ್ತು. ಮಗಳು ವೈದ್ಯೆ, ನಾನು ಮೂಲತಃ ಪಶುವೈದ್ಯ. ಮನೆಯಲ್ಲೇ ಪ್ರತ್ಯೇಕವಾಗಿದ್ದು, ಗುಣಪಡಿಸಿಕೊಳ್ಳಬಹುದಿತ್ತು. ಆದರೆ, ಸರ್ಕಾರದ ನಿಗಮಗಳ ಪ್ರಕಾರ ಆಸ್ಪತ್ರೆಗೆ ದಾಖಲಾದೆವು. ಅವರು ಕೊಡುವ ಮಾತ್ರೆಗಳು, ಊಟ, ನಿಯಮಿತವಾಗಿ ಬಿಸಿನೀರು ಸೇವಿಸಿದೆವು. ವೈರಾಣುವಿನ ಬಗ್ಗೆ ಅರಿವಿದ್ದ ಕಾರಣ ಹೆದರಲಿಲ್ಲ. ಎಲ್ಲರೂ ಗುಣಮುಖರಾಗಿ ಮನೆಗೆ ಬಂದೆವು’ ಎಂದು ವಿವರಿಸಿದರು.

‘ಸ್ವಯಂ ಸ್ವಚ್ಛತೆ ಕಾಪಾಡಿಕೊಂಡರೆ ಬೇರೆಯವರಿಗೆ ಹರಡುವುದನ್ನು ತಡೆಯಬಹುದು. ಈಗಲೂ ಕಚೇರಿಯಿಂದ ಮನೆಗೆ ಹೋಗುವಾಗಬಾಗಿಲು ತೆರೆದಿಡುವಂತೆ ಫೋನ್ ಮಾಡಿ ತಿಳಿಸುತ್ತೇನೆ. ಮನೆಯಲ್ಲಿನ ಯಾವ ವಸ್ತುವನ್ನೂ ಮುಟ್ಟದೆ ನೇರವಾಗಿ ಸ್ನಾನದ ಮನೆಗೆ ಹೋಗುತ್ತೇನೆ. ಬಟ್ಟೆಗಳನ್ನು ಯಾರೂ ಮುಟ್ಟದಂತೆ ಪ್ರತ್ಯೇಕವಾಗಿ ಇರಿಸುತ್ತೇನೆ. ಅವುಗಳನ್ನು ನಾನೇ ತೊಳೆಯುತ್ತೇನೆ’ ಎಂದರು.

‘ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕು.ಅದನ್ನೂ ದಾಟಿ ಸೋಂಕು ಬಂದರೆ ಎದುರಿಸುವ ಮನೋಬಲವನ್ನು ಮೊದಲು ಬೆಳಸಿಕೊಳ್ಳಬೇಕು.ಲಕ್ಷಣ ಕಂಡ ಕೂಡಲೇ ಪ್ರತ್ಯೇಕ ಕೊಠಡಿಯಲ್ಲಿ ಇರಬೇಕು. ತಟ್ಟೆ ಮತ್ತು ಲೋಟವನ್ನು ಪ್ರತ್ಯೇಕವಾಗಿ ಇಟ್ಟುಕೊಳ್ಳಬೇಕು. ಮನೆಯವರಿಂದಲೂ ಅಂತರ ಕಾಯ್ದುಕೊಳ್ಳಬೇಕು. ಯಾವಾಗಲೂ ಮುಖಗವಸು ಧರಿಸಿಯೇ ಇರಬೇಕು. ಸೋಂಕು ತಗುಲಿದ್ದರೂ ಮನೆಯಲ್ಲೇ ಪ್ರತ್ಯೇಕವಾಗಿ ಇದ್ದುಕೊಂಡು ವೈದ್ಯರ ಸಲಹೆ ಪಾಲಿಸಿದರೆ ಗುಣಮುಖರಾಗಬಹುದು’ ಎಂದು ತಿಳಿಸಿದರು.

‘ಸೋಂಕಿನ ಲಕ್ಷಣ ಇಲ್ಲದಿದ್ದರೆ ಪರೀಕ್ಷೆ ಮಾಡಿಸಲೇಬಾರದು. ಲಕ್ಷಣ ಇದ್ದವರು ಪರೀಕ್ಷೆ ಮಾಡಿಸಿಕೊಳ್ಳಲು ಅವಕಾಶ ಮಾಡಿಕೊಟ್ಟರೆಅವರಿಗೆ ಬೇಗ ಚಿಕಿತ್ಸೆ ಸಿಗುತ್ತದೆ. ಬೇರೆಯವರಿಗೆ ಹರಡುವುದನ್ನೂ ತಡೆದಂತೆ ಆಗಲಿದೆ’ ಎಂದು ಹೇಳಿದರು.

**

ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕು. ಅದನ್ನೂ ದಾಟಿ ಸೋಂಕು ಬಂದರೆ ಎದುರಿಸುವ ಮನೋಬಲವನ್ನು ಮೊದಲು ಬೆಳಸಿಕೊಳ್ಳಬೇಕು.
–ಡಾ. ಬಿ.ವಿ. ಮುರಳಿಕೃಷ್ಣ, ವಾಣಿಜ್ಯ ತೆರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತ(ಇ–ಆಡಳಿತ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.