ADVERTISEMENT

ಮಕ್ಕಳ ಆಸರೆ ಕಸಿದ ಕೊರೊನಾ: ‘ದೇವರು ಕ್ರೂರಿ, ಅಮ್ಮನನ್ನು ದೂರ ಮಾಡಿಬಿಟ್ಟ‘

ಕೋವಿಡ್‌ನಿಂದ ಅಪ್ಪ–ಅಮ್ಮನ ಕಳೆದುಕೊಂಡ ಕಂದಮ್ಮಗಳ ವ್ಯಥೆ

ಜಿ.ಶಿವಕುಮಾರ
Published 13 ಜೂನ್ 2021, 5:57 IST
Last Updated 13 ಜೂನ್ 2021, 5:57 IST
ಮೃತ ಆಶಾ ಅವರ ಕುಟುಂಬ
ಮೃತ ಆಶಾ ಅವರ ಕುಟುಂಬ   

ಬೆಂಗಳೂರು: ‘ಅಮ್ಮ ಗಟ್ಟಿಗಿತ್ತಿ. ಯಾವುದಕ್ಕೂ ಅಂಜಿದವಳಲ್ಲ. ನಿತ್ಯವೂ ಕೂಲಿ ಕೆಲಸಕ್ಕೆ ಹೋಗುತ್ತಿದ್ದಳು. ಮನೆಗೆ ಮರಳಿದ ಬಳಿಕ ಅಡುಗೆ ಮಾಡಿ ನಮಗೆಲ್ಲಾ ಬಡಿಸುತ್ತಿದ್ದಳು. ಈಗ ಅಮ್ಮ ಜತೆಯಲ್ಲಿಲ್ಲ. ದೇವರು ಬಹಳ ಕ್ರೂರಿ. ಮೂರೇ ದಿನಗಳಲ್ಲಿ ಆಕೆಯನ್ನು ನಮ್ಮಿಂದ ದೂರ ಮಾಡಿಬಿಟ್ಟ’...

ಕೋವಿಡ್‌ನಿಂದಾಗಿ ತಾಯಿಯನ್ನು ಕಳೆದುಕೊಂಡ ಹಾರೋಗದ್ದೆಯ ವೈಷ್ಣವಿ ಅವರ ಭಾವುಕ ನುಡಿಗಳಿವು.

ಹೋದ ವರ್ಷ ತಂದೆಯನ್ನು ಕಳೆದುಕೊಂಡಿದ್ದ ವೈಷ್ಣವಿ ಕುಟುಂಬಕ್ಕೆ ತಾಯಿಯೇ ಆಧಾರವಾಗಿದ್ದರು. ಆಕೆ ಕೂಲಿ ಮಾಡಿ ತಂದ ಹಣದಲ್ಲೇ ಜೀವನ ಸಾಗುತ್ತಿತ್ತು. ಆಕೆಯ ಅಕಾಲಿಕ ನಿಧನದಿಂದ ಮಕ್ಕಳುಈಗ ತಬ್ಬಲಿಗಳಾಗಿದ್ದಾರೆ. ಅವರ ಭವಿಷ್ಯವೂ ಡೋಲಾಯಮಾನವಾಗಿದೆ.

ADVERTISEMENT

ವೈಷ್ಣವಿಗೆ ಈಗ15ರ ಹರೆಯ. ಅವಳಿಗೆ ಕಿರಿಯ ಸಹೋದರಿ ವರ್ಷಿಣಿ ಹಾಗೂ ಸಹೋದರ ವೈಶಾಖ್‌ ಇದ್ದಾರೆ. ಇವರು ಕ್ರಮವಾಗಿ7 ಹಾಗೂ 3ನೇ ತರಗತಿಗಳಲ್ಲಿ ಓದುತ್ತಿದ್ದು, ಸದ್ಯ ಅತ್ತೆಯ (ಅಪ್ಪನ ತಂಗಿ) ಮನೆಯಲ್ಲಿ ಆಶ್ರಯ ಪಡೆದಿದ್ದಾರೆ. ಇವರ ತಾಯಿಯ ಹೆಸರು ಆಶಾ. ಅವರಿಗೆ ಸುಮಾರು 30 ವರ್ಷ ವಯಸ್ಸಾಗಿತ್ತು.

‘ಏಪ್ರಿಲ್‌ 30ರಂದು ಅಮ್ಮ ಎಂದಿನಂತೆ ಕೆಲಸಕ್ಕೆ ಹೋಗಿದ್ದಳು. ಸಂಜೆ ಮನೆಗೆ ಮರಳಿದ ಮೇಲೆ ಕೆಮ್ಮು ಕಾಣಿಸಿಕೊಂಡಿತು. ಹೀಗಾಗಿ ಮಾತ್ರೆ ನುಂಗಿ ಮಲಗಿದ್ದಳು. ಭಾನುವಾರ (ಮೇ2) ಇದ್ದಕ್ಕಿದ್ದಂತೆ ಜ್ವರ ಶುರುವಾಯಿತು. ಚಿಕಿತ್ಸೆಗೆ ವಿನಾಯಕ ಆಸ್ಪತ್ರೆಗೆ ಹೋಗಿದ್ದಳು. ಆಸ್ಪತ್ರೆಯವರು ಚಿಕಿತ್ಸೆಗೆ ದಾಖಲಾಗುವಂತೆ ಹೇಳಿದ್ದರು. ಅಲ್ಲಿ ಸೇರಿದರೆ ಲಕ್ಷಾಂತರ ಹಣ ಕಟ್ಟಬೇಕು. ಅಷ್ಟೊಂದು ದುಡ್ಡು ಹೊಂದಿಸುವುದು ಕಷ್ಟ ಎಂಬುದನ್ನು ಮನಗಂಡು ಕೇವಲ ಚುಚ್ಚುಮದ್ದು ಪಡೆದು ಮನೆಗೆ ವಾಪಸ್ಸಾಗಿದ್ದಳು’ ಎನ್ನುತ್ತಾಳೆ ವೈಷ್ಣವಿ.

‘ವಿಪರೀತ ಬಳಲಿದಂತಿದ್ದ ಅಮ್ಮ ಮಾತನಾಡುವುದಕ್ಕೂ ಕಷ್ಟಪಡುತ್ತಿದ್ದಳು. ಅಮ್ಮನನ್ನು ಆ ಪರಿಸ್ಥಿತಿಯಲ್ಲಿ ನಾವುಹಿಂದೆಂದೂ ನೋಡಿರಲೇ ಇಲ್ಲ’ ಎನ್ನುತ್ತಾ ವೈಷ್ಣವಿ ಮೌನಕ್ಕೆ ಜಾರಿದಳು.

‘ಅದೇ ದಿನ ಸಂಜೆ 7 ಗಂಟೆಗೆ ಅಮ್ಮ ಪ್ರಾಣಬಿಟ್ಟಳು. ಕೋವಿಡ್‌ ದೃಢಪಟ್ಟಿದ್ದರಿಂದ ರಾತ್ರೋ ರಾತ್ರಿ ಶವ ಸಂಸ್ಕಾರ ನೆರವೇರಿಸಲಾಯಿತು. ಅಮ್ಮ ನಮ್ಮನ್ನು ಅಕ್ಕರೆಯಿಂದ ನೋಡಿಕೊಳ್ಳುತ್ತಿದ್ದಳು. ಚೆನ್ನಾಗಿ ಓದಿ ದೊಡ್ಡ ಕೆಲಸಕ್ಕೆ ಸೇರಬೇಕು ಎಂದು ಆಗಾಗ ಹೇಳುತ್ತಿದ್ದಳು. ಶಿಕ್ಷಕಿಯಾಗಿ ಆಕೆಯ ಕನಸು ನನಸಾಗಿಸಬೇಕು ಎಂದುಕೊಂಡಿದ್ದೇನೆ. ಆ ಹಾದಿಯೇ ಈಗ ದುರ್ಗಮವೆನಿಸಿದೆ. ವಿದ್ಯಾಭ್ಯಾಸ ಮುಂದುವರಿಸುವುದು ಹೇಗೆ ಎಂಬ ಚಿಂತೆ ಕಾಡುತ್ತಿದೆ. ಸರ್ಕಾರಿ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ನಮ್ಮನ್ನು ಸೌಜನ್ಯಕ್ಕೂ ಭೇಟಿಯಾಗಿಲ್ಲ. ನಾವು ತುಂಬಾ ಬಡವರು. ಶಿಕ್ಷಣ ಮುಂದುವರಿಸುವುದಕ್ಕಾದರೂ ಸರ್ಕಾರ ಸಹಾಯ ಮಾಡಿದರೆ ಹೇಗೊ ಬದುಕು ಕಟ್ಟಿಕೊಳ್ಳಬಹುದು’ ಎಂದು ಮನವಿ ಮಾಡಿದಳು.

‘ನಮ್ಮ ಕಣ್ಣ ಮುಂದೆ ಇರಲಿ ಬಿಡಿ’:

‘ಹಾರೋಗದ್ದೆಯಲ್ಲಿ ಮಕ್ಕಳನ್ನು ನೋಡಿಕೊಳ್ಳುವವರು ಯಾರೂ ಇಲ್ಲ. ಹೀಗಾಗಿ ನನ್ನ ಮನೆಗೆ ಕರೆದುಕೊಂಡು ಬಂದಿದ್ದೇನೆ. ಒಂದು ತಿಂಗಳಿಂದ ಇಲ್ಲೇ ಇದ್ದಾರೆ. ನಮ್ಮೂರಿನಲ್ಲೇ ಸರ್ಕಾರಿ ಶಾಲೆಗೆ ಸೇರಿಸಿ ಓದಿಸುತ್ತೇವೆ’ ಎಂದು ವೈಷ್ಣವಿ ಅವರ ಮಾವ ಕೃಷ್ಣಪ್ಪ ತಿಳಿಸಿದರು. ಕೃಷ್ಣಪ್ಪ ಅವರು ಸರ್ಜಾಪುರ ಸಮೀಪದಕೋಟಿಗಾನಹಳ್ಳಿ ನಿವಾಸಿ.

‘ನಾನು ಪೇಂಟಿಂಗ್‌ ಕೆಲಸ ಮಾಡುತ್ತೇನೆ. ಕೋವಿಡ್‌ನಿಂದಾಗಿ ಎಲ್ಲಿಯೂ ಕೆಲಸ ಸಿಗುತ್ತಿಲ್ಲ. ಹೀಗಾಗಿ ಜೀವನ ನಿರ್ವಹಣೆ ಕಷ್ಟವಾಗಿದೆ. ವೈಷ್ಣವಿ, ವೈಶಾಖ್‌ ಹಾಗೂ ವರ್ಷಿಣಿ ಅವರನ್ನು ಹಾಸ್ಟೆಲ್‌ಗೆ ಸೇರಿಸುವ ಆಲೋಚನೆ ಇತ್ತು. ಅದಕ್ಕೆ ನನ್ನ ಪತ್ನಿ ಒಪ್ಪಲಿಲ್ಲ. ತನ್ನ ಅಣ್ಣನ ಮಕ್ಕಳು ಇನ್ನೂ ಚಿಕ್ಕವರು. ಏನೂ ಅರಿಯದವರು. ಕಣ್ಣ ಮುಂದೆಯೇ ಇರಲಿ ಎಂಬುದು ಆಕೆಯ ಬಯಕೆ. ಹೆಂಡತಿಯ ಆಸೆಯಂತೆಯೇ ಮೂವರು ಮಕ್ಕಳನ್ನೂ ನಮ್ಮ ಮನೆಯಲ್ಲಿ ಇಟ್ಟುಕೊಂಡು ಸಾಕುತ್ತೇವೆ. ಸ್ವಲ್ಪ ಕಷ್ಟ ಆಗುತ್ತದೆ. ಹಾಗಂತ ಈ ಸಮಯದಲ್ಲಿ ಅವರನ್ನು ದೂರ ಮಾಡಲು ಆಗುವುದಿಲ್ಲ’ ಎಂದರು.

* ನೀನು ಡಾಕ್ಟರ್‌ ಆಗಬೇಕು ಮಗ. ಚೆನ್ನಾಗಿ ಓದು ಅಂತ ಅಮ್ಮ ಹೇಳುತ್ತಿದ್ದಳು. ಅವಳ ಆಸೆಯನ್ನು ಖಂಡಿತವಾಗಿಯೂ ಈಡೇರಿಸುತ್ತೇನೆ.

-ವೈಶಾಖ್‌, ಮೃತ ಆಶಾ ಅವರ ಮಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.