ADVERTISEMENT

ಪ್ಲಾಸ್ಮಾ ಥೆರಪಿ: 150 ದಾನಿಗಳು ನೋಂದಣಿ

ಆಸ್ಪತ್ರೆಗಳಲ್ಲಿ ಸದ್ಯ 14 ಮಂದಿಗೆ ಥೆರಪಿ * ಗುಣಮುಖರು ಪ್ಲಾಸ್ಮಾ ದಾನ ಮಾಡುವಂತೆ ಡಾ.ವಿಶಾಲ್ ರಾವ್ ಮನವಿ

​ಪ್ರಜಾವಾಣಿ ವಾರ್ತೆ
Published 28 ಜುಲೈ 2020, 18:30 IST
Last Updated 28 ಜುಲೈ 2020, 18:30 IST
ಡಾ. ವಿಶಾಲ್‌ ರಾವ್‌
ಡಾ. ವಿಶಾಲ್‌ ರಾವ್‌   

ಬೆಂಗಳೂರು: ನಗರದ ಎಚ್‌ಸಿಜಿ ಆಸ್ಪತ್ರೆಯ ಪ್ಲಾಸ್ಮಾ ಬ್ಯಾಂಕ್‌ನಲ್ಲಿ ಪ್ಲಾಸ್ಮಾ ದಾನ ಮಾಡಲು ಈವರೆಗೆ 150 ಮಂದಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ಸದ್ಯ ವಿವಿಧ ಆಸ್ಪತ್ರೆಗಳಲ್ಲಿ 14 ಮಂದಿಗೆ ಪ್ಲಾಸ್ಮಾ ಥೆರಪಿ ಮಾಡಲಾಗುತ್ತಿದೆ.

ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಸಂಸ್ಥೆ (ಬಿಎಂಸಿಆರ್‌ಐ) ಮತ್ತು ಎಚ್‌ಸಿಜಿ ಕ್ಯಾನ್ಸರ್ ಆಸ್ಪತ್ರೆ ಸಹಯೋಗದಲ್ಲಿ ರಾಜ್ಯದಲ್ಲಿ ಪ್ಲಾಸ್ಮಾ ಥೆರಪಿಗೆ ಏ.25ರಂದು ಚಾಲನೆ ನೀಡಲಾಗಿತ್ತು. ನಗರದ ವಿಕ್ಟೋರಿಯಾ, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ನಡೆಸಿದ ಪ್ಲಾಸ್ಮಾ ಥೆರಪಿಗಳು ಯಶಸ್ವಿಯಾಗಿವೆ. ಗಂಭೀರ ಸ್ಥಿತಿ ತಲುಪಿದ ಕೆಲ ರೋಗಿಗಳು ಥೆರಪಿ ಬಳಿಕ ಚೇತರಿಸಿಕೊಂಡ ಉದಾಹರಣೆಗಳಿವೆ. ಹೀಗಾಗಿ ಇನ್ನಷ್ಟು ಮಂದಿಗೆ ಪ್ಲಾಸ್ಮಾ ಥೆರಪಿ ಮಾಡಲು ಅವಕಾಶ ನೀಡಲಾಗಿದೆ. ಕ್ಯಾನ್ಸರ್ ತಜ್ಞ ಡಾ. ವಿಶಾಲ್ ರಾವ್‌ ಅವರು ಪ್ಲಾಸ್ಮಾ ಥೆರಪಿಯಕ್ಲಿನಿಕಲ್ ಪ್ರಯೋಗದ ಮುಖ್ಯಸ್ಥರಾಗಿದ್ದು, ಅವರ ನೇತೃತ್ವದ ವೈದ್ಯರ ತಂಡವು ಕೋವಿಡ್‌ನಿಂದ ಹೆಚ್ಚಿನ ಪ್ರಮಾಣದಲ್ಲಿ ಅಸ್ವಸ್ಥರಾದ ರೋಗಿಗಳಿಗೆ ಪ್ಲಾಸ್ಮಾ ಥೆರಪಿ ನಡೆಸುತ್ತಿದೆ.

ನಗರದಲ್ಲಿ 331 ಸೇರಿದಂತೆ ರಾಜ್ಯದಲ್ಲಿ 612 ರೋಗಿಗಳು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಗತ್ಯ ಪ್ರಮಾಣದಲ್ಲಿ ಪ್ಲಾಸ್ಮಾ ದೊರೆತಲ್ಲಿ ಗಂಭೀರ ಹಂತ ತಲುಪಿದ ಎಲ್ಲ ರೋಗಿಗಳಿಗೆ ಪ್ಲಾಸ್ಮಾ ಥೆರಪಿ ಮಾಡಲು ವೈದ್ಯರ ತಂಡ ನಿರ್ಧರಿಸಿದೆ. ಬೆಂಗಳೂರಿನಲ್ಲಿ 12,761 ಸೇರಿದಂತೆ ರಾಜ್ಯದಲ್ಲಿ 40,504 ಮಂದಿ ಈವರೆಗೆ ಗುಣಮುಖರಾಗಿದ್ದಾರೆ. ಸದ್ಯ 15 ಮಂದಿಯ ಪ್ಲಾಸ್ಮಾ ಪಡೆಯಲಾಗಿದೆ.

ADVERTISEMENT

ಪ್ರತಿರೋಧ ಕಣಗಳು ವೃದ್ಧಿ: ‘ಸೋಂಕಿನಿಂದ ಗುಣಮುಖರಾದವರು ಅಪಾಯದಲ್ಲಿರುವ ರೋಗಿಗಳಿಗೆ ನೆರವಾಗಬೇಕು. ದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬಂದಲ್ಲಿ ಪ್ಲಾಸ್ಮಾ ಥೆರಪಿಯ ಮೂಲಕ ಸಾವಿನ ಪ್ರಮಾಣವನ್ನು ಗಣನೀಯವಾಗಿ ಇಳಿಕೆ ಮಾಡಲು ಶ್ರಮಿಸಬಹುದು. ವಿಶ್ವದ ವಿವಿಧೆಡೆ ನಡೆಸಲಾಗಿರುವ ಅಧ್ಯಯನಗಳಲ್ಲಿ ಪ್ಲಾಸ್ಮಾ ಥೆರಪಿ ಉತ್ತಮ ಫಲಿತಾಂಶ ನೀಡಲಿದೆ ಎಂಬುದು ಸಾಬೀತಾಗಿದೆ’ ಎಂದು ಡಾ. ವಿಶಾಲ್ ರಾವ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ರಕ್ತದಲ್ಲಿ ಸಮಾನವಾಗಿ ಕೋಶ ಮತ್ತು ರಸಗಳು (ಪ್ಲಾಸ್ಮಾ) ಇರುತ್ತವೆ. ರೋಗದಿಂದ ಗುಣಮುಖರಾದವರ ದುಗ್ಧ ರಸದಲ್ಲಿ ಇರುವ ಪ್ರತಿರೋಧ ಕಣಗಳನ್ನು ತೆಗೆದುಕೊಂಡು, ರೋಗದಿಂದ ಬಳಲುತ್ತಿರುವ ವ್ಯಕ್ತಿಯ ರಕ್ತಕ್ಕೆ ಸೇರಿಸಲಾಗುತ್ತದೆ. ಈ ಪ್ರತಿರೋಧ ಕಣಗಳು ಕೊರೊನಾ ಸೋಂಕಿನ ಮೇಲೆ ದಾಳಿ ನಡೆಸುವ ಗುಣಗಳನ್ನು ಬೆಳೆಸಿಕೊಂಡಿರುತ್ತದೆ. ಈಗಾಗಲೇ ಗುಣಮುಖರಾದ ಬಹುತೇಕ ಎಲ್ಲರಲ್ಲಿಯೂ ಪ್ರತಿರೋಧ ಕಣಗಳು ವೃದ್ಧಿಯಾಗಿವೆ.ಹೆಸರು ನೋಂದಾಯಿಸಿಕೊಂಡ ಕೆಲವರಲ್ಲಿ ಅಗತ್ಯ ಪ್ರಮಾಣದಲ್ಲಿ ಪ್ರತಿರೋಧ ಕಣಗಳು ವೃದ್ಧಿಯಾಗದ ಕಾರಣ ಅವರಿಂದ ಪ್ಲಾಸ್ಮಾ ಪಡೆಯುವುದನ್ನು ಮುಂದೂಡಲಾಗಿದೆ ’ ಎಂದು ಮಾಹಿತಿ ನೀಡಿದರು.

ಶುಲ್ಕ ರಹಿತ ದೂರವಾಣಿ ಸಂಖ್ಯೆ: 0744 711 8949

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.