ADVERTISEMENT

ಬೆಂಗಳೂರು: ಕೋವಿಡ್ ಜಯಿಸಿದ 99ರ ವೃದ್ಧೆ

9 ದಿನಗಳಲ್ಲಿಯೇ ಗುಣಮುಖ, ಆಸ್ಪತ್ರೆಯಲ್ಲಿನ ಚಿಕಿತ್ಸೆಗೆ ಮೆಚ್ಚುಗೆ

​ಪ್ರಜಾವಾಣಿ ವಾರ್ತೆ
Published 27 ಜೂನ್ 2020, 13:42 IST
Last Updated 27 ಜೂನ್ 2020, 13:42 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಕೊರೊನಾ ಸೋಂಕಿತ 99 ವರ್ಷದ ವೃದ್ಧೆಯೊಬ್ಬರು ಕೇವಲ ಒಂಬತ್ತು ದಿನಗಳಲ್ಲಿ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ಕೋವಿಡ್‌ಗೆ ಚೇತರಿಸಿಕೊಂಡವರಲ್ಲಿ ರಾಜ್ಯದಲ್ಲಿಯೇ ಹಿರಿಯ ವ್ಯಕ್ತಿ ಇವರಾಗಿದ್ದಾರೆ.

‌ನಗರದ ಕುಮಾರಸ್ವಾಮಿ ಬಡವಾಣೆಯ ನಿವಾಸಿಯಾಗಿರುವವೃದ್ಧೆ, ಜೂ.18ರಂದು ನಗರದ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದರು. ಅದೇ ದಿನ ಅವರ 99ನೇ ಜನ್ಮದಿನವಾಗಿತ್ತು. ವೃದ್ಧೆಯ ಮಗ, ಸೊಸೆ ಕೂಡ ಸೋಂಕಿತರಾಗಿ ಆಸ್ಪತ್ರೆ ಸೇರಿದ್ದರು. ಅವರಿಗಿಂತ ಮೊದಲೇ ವೃದ್ಧೆ ಗುಣಮುಖರಾಗಿದ್ದಾರೆ. ಇವರು ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸಿದ್ದು, ಏಳನೇ ದಿನಕ್ಕೆ ಕೋವಿಡ್ ಪರೀಕ್ಷೆ ಮಾಡಲಾಗಿತ್ತು. ವರದಿಯಲ್ಲಿ ಗುಣಮುಖರಾಗಿದ್ದಾರೆ ಎನ್ನುವುದು ದೃಢಪಟ್ಟ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಯ ಸಿಬ್ಬಂದಿ ಮನೆಗೆ ಕಳುಹಿಸಿದ್ದಾರೆ.

ಮೊದಲು ವೃದ್ಧೆಯ ಸೊಸೆ ಸೋಂಕಿತರಾಗಿ ಆಸ್ಪತ್ರೆ ಸೇರಿದ್ದರು. ಬಳಿಕ ಮಗ ಹಾಗೂ ಮೊಮ್ಮಗ ಕೂಡ ಕೋವಿಡ್ ಪೀಡಿತರಾಗಿದ್ದರು. ಅವರ ಸಂಪರ್ಕದಲ್ಲಿದ್ದ ವೃದ್ಧೆ ಕೂಡ ರೋಗಿಯಾಗಿ ಆಸ್ಪತ್ರೆ ಸೇರಿದರು. ಆದರೆ, ಅವರಿಗೆ ಸೋಂಕಿನ ಲಕ್ಷಣಗಳು ಬಹಿರಂಗವಾಗಿ ಗೋಚರಿಸಿರಲಿಲ್ಲ. ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರಿಂದ ಕೃತಕ ಉಸಿರಾಟದ ವ್ಯವಸ್ಥೆ ಕಲ್ಪಿಸಲಾಗಿತ್ತು. ಉಳಿದಂತೆ ಎಲ್ಲ ರೋಗಿಗಳಿಗೆ ನೀಡಲಾದ ಚಿಕಿತ್ಸೆಯನ್ನೇ ಅವರಿಗೂ ನೀಡಲಾಗಿದೆ ಎನ್ನುವುದು ಆಸ್ಪತ್ರೆಯ ಮೂಲಗಳಿಂದ ತಿಳಿದು ಬಂದಿದೆ. ‌

ADVERTISEMENT

ವೃದ್ಧೆಯ 70 ವರ್ಷದ ಮಗ, 66 ವರ್ಷದ ಸೊಸೆ ಹಾಗೂ ಮೊಮ್ಮಗನಿಗೆ ಚಿಕಿತ್ಸೆಯನ್ನು ಮುಂದುವರೆಸಲಾಗಿದೆ. ಅವರು ಶೀತ, ಜ್ವರ ಹಾಗೂ ಕೆಮ್ಮಿನ ಸಮಸ್ಯೆ ಎದುರಿಸುತ್ತಿದ್ದರು.

‘ಅಜ್ಜಿ ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸಿದ್ದಾರೆ. ಮನೆಗೆ ಕಳುಹಿಸುವ ಮೊದಲು ಎರಡು ಬಾರಿ ಕೋವಿಡ್ ಪರೀಕ್ಷೆ ನಡೆಸಲಾಗಿತ್ತು. ಅವರು ಬೇಗವಾಗಿ ಗುಣಮುಖರಾಗಿರುವುದು ನಮಗೆ ಕೂಡ ಖಷಿ ನೀಡಿದೆ. ಅವರು ಸಕಾರಾತ್ಮಕವಾಗಿ ಚಿಂತಿಸುತ್ತಿದ್ದರು’ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ಉತ್ತಮವಾದ ಚಿಕಿತ್ಸೆ: ‘ಸರ್ಕಾರಿ ಆಸ್ಪತ್ರೆ ಎಂದೊಡನೆ ಹಲವರಲ್ಲಿ ತಪ್ಪು ಕಲ್ಪನೆಯಿದೆ. ನಾನು ಕೂಡ ಇದಕ್ಕೆ ಹೊರತಾಗಿರಲಿಲ್ಲ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಉತ್ತಮವಾಗಿ ಚಿಕಿತ್ಸೆ ನೀಡುವ ಜತೆಗೆ ವೈದ್ಯರು ಹಾಗೂ ಶುಶ್ರೂಷಕರು ಕಾಳಜಿಯಿಂದ ಆರೈಕೆ ಮಾಡಿದ್ದಾರೆ. ಒಳ್ಳೆಯ ಊಟ–ತಿಂಡಿಯನ್ನೂ ಒದಗಿಸಿದ್ದಾರೆ. ಮನೆಗೆ ತೆರಳುವ ವೇಳೆ ವಾರ್ಡ್‌ನಲ್ಲಿನ ರೋಗಿಗಳಿಗೆ ಧೈರ್ಯ ಹೇಳಿ ಬಂದಿದ್ದೇನೆ’ ಎಂದು ಗುಣಮುಖರಾದ ವೃದ್ಧೆ ತಿಳಿಸಿದರು.

‘ಕೋವಿಡ್‌ ರೋಗ ಬಂತೆಂದ ಮಾತ್ರಕ್ಕೆ ಹೆದರಬೇಕಾಗಿಲ್ಲ. ಬದಲಾಗಿ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆದು, ಧೈರ್ಯದಿಂದ ರೋಗವನ್ನು ಎದುರಿಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.