ADVERTISEMENT

ಗಣಿ ದೂಳು: ಕೇಳೋರಿಲ್ಲ ಗೋಳು!

ಮಂಟಿ ಬಿಳಗೂಲಿ ಗ್ರಾಮದಲ್ಲಿ ಬಿರುಕು ಬಿಟ್ಟ ಗೋಡೆಗಳು l ಕಮರಿದ ಬೆಳೆ l ಅನಾರೋಗ್ಯಕ್ಕೀಡಾಗುತ್ತಿರುವ ಗ್ರಾಮಸ್ಥರು

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2021, 21:32 IST
Last Updated 27 ಫೆಬ್ರುವರಿ 2021, 21:32 IST
ಮಂಗಳೂರಿನ ಗುಂಡವಪದವು ಕೊರಗರ ಕಾಲೊನಿ ಬಳಿ ನಡೆಯುತ್ತಿರುವ ಗಣಿಗಾರಿಕೆ
ಮಂಗಳೂರಿನ ಗುಂಡವಪದವು ಕೊರಗರ ಕಾಲೊನಿ ಬಳಿ ನಡೆಯುತ್ತಿರುವ ಗಣಿಗಾರಿಕೆ   

ಬೆಟ್ಟದಪುರ/ಮೈಸೂರು: ಬಿರುಕು ಬಿಟ್ಟ ಗೋಡೆ, ಗುಂಡಿಬಿದ್ದ ರಸ್ತೆ, ನಿತ್ಯ ದೂಳಿನ ಸ್ನಾನದಿಂದ ಕಮರಿದ ಬೆಳೆ, ಮೂಗಿಗೆ ಅಡರುವ ಸ್ಫೋಟಕದ ಘಾಟು ವಾಸನೆಯಿಂದ ಉಸಿರಾಡಲು ಏದುಸಿರು ಬಿಡುತ್ತಿರುವಮಕ್ಕಳು ಹಾಗೂ ವೃದ್ಧರು.

ಪಿರಿಯಾಪಟ್ಟಣ ತಾಲ್ಲೂಕಿನ ಬೆಟ್ಟದಪುರ ಹೋಬಳಿಯ ಮಂಟಿ ಬಿಳಗೂಲಿ ಗ್ರಾಮದ ಚಿತ್ರಣವಿದು. ಇದು ಇಂದು, ನಿನ್ನೆಯ ಕತೆಯಲ್ಲ. ಹಲವು ವರ್ಷಗಳಿಂದ ಗ್ರಾಮಸ್ಥರು ಅನುಭವಿಸುತ್ತಿರುವ ಗೋಳು. ಇದಕ್ಕೆ ಕಾರಣ ಗ್ರಾಮದ ಎರಡು ಕಿ.ಮೀ ವ್ಯಾಪ್ತಿಯಲ್ಲಿರುವ ಬೆಟ್ಟಗುಡ್ಡಗಳಲ್ಲಿ ವರ್ಷಗಳಿಂದ ನಡೆಯುತ್ತಿರುವ ಕಲ್ಲು ಗಣಿಗಾರಿಕೆ.

ಜಿಲ್ಲೆಯ ಪ್ರಭಾವಿ ರಾಜಕಾರಣಿಗಳು, ಕೇರಳ ಮೂಲದ ಉದ್ಯಮಿಗಳು ಹಾಗೂ ಕುಶಾಲನಗರದ ಉದ್ಯಮಿಯೊಬ್ಬರು ಈ ಭಾಗದ ಸೀತೆಬೆಟ್ಟದಲ್ಲಿ ನಡೆಸುತ್ತಿರುವ ಕ್ರಷರ್‌ ಸುತ್ತಮುತ್ತಲಿನ ಗ್ರಾಮಗಳಿಗೆ ಸಂಕಷ್ಟ ತಂದೊಡ್ಡಿದೆ.

ADVERTISEMENT

ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳನ್ನು ವಿಚಾರಿಸಿದರೆ, ‘ಜಿಲ್ಲೆಯಲ್ಲಿ ಗಣಿಗಾರಿಕೆ ನಿಯಮಬದ್ಧವಾಗಿ ನಡೆಯುತ್ತಿದೆ. ಇದರಿಂದ ಗ್ರಾಮಸ್ಥರಿಗೆಯಾವುದೇ ತೊಂದರೆ ಆಗಿಲ್ಲ’ ಎನ್ನುತ್ತಾರೆ. ‘ಪೊಲೀಸ್‌ ಠಾಣೆಯಲ್ಲಿ ಅನುಮತಿ ಪಡೆದು, ಸುರಕ್ಷಿತ ಕ್ರಮ ಅನುಸರಿಸಿಯೇ ಸ್ಫೋಟ ನಡೆಸಲಾಗುತ್ತಿದೆ’ ಎನ್ನುವುದು ಪೊಲೀಸರ ಸಮರ್ಥನೆ.

ಮೈಸೂರು ಜಿಲ್ಲೆಯಲ್ಲಿ 20 ಕ್ರಷರ್‌ಗಳಿವೆ. ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ ಎಂಟು ಕಲ್ಲು ಗಣಿ, ಹುಣಸೂರು ಹಾಗೂ ಎಚ್‌.ಡಿ.ಕೋಟೆ ತಾಲ್ಲೂಕಿನಲ್ಲಿ ತಲಾ ಒಂದು ಗಣಿಗಳಿವೆ.

ಕಲ್ಲು ಗಣಿಯಲ್ಲಿ ನಿತ್ಯ ನಡೆಯುತ್ತಿರುವ ಸ್ಫೋಟದ ತೀವ್ರತೆಗೆ ಮಂಟಿ ಬಿಳಗೂಲಿ ಗ್ರಾಮದ ಹೆಚ್ಚಿನ ಮನೆಗಳು ಬಿರುಕು ಬಿಟ್ಟಿವೆ. ಗಣಿಗಳಿಂದಾಗಿ ಹರಡುವ ದೂಳಿನಿಂದಾಗಿ ಅಂದಾಜು 300 ಎಕರೆಯಲ್ಲಿ ಬೆಳೆ ಬೆಳೆಯಲು ಸಾಧ್ಯವಾಗುತ್ತಿಲ್ಲ. ಬಿರುಕು ಬಿಟ್ಟ ಶಾಲೆಯ ಗೋಡೆ, ಕಾಂಪೌಂಡ್‌ ಅನ್ನು ಕೆಲವು ದಿನದ ಹಿಂದೆ ದುರಸ್ತಿ ಮಾಡಲಾಗಿದೆ.

‘ಬಹಳ ಹಿಂದಿನಿಂದಲೂ ಗ್ರಾಮದ ಸುತ್ತಮುತ್ತ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು,ಈಗ ಮಿತಿಮೀರಿದೆ. ರಾತ್ರಿ ಹತ್ತು ಗಂಟೆಯವರೆಗೂ ಪಟಾಕಿಯಂತೆ ಗ್ರಾಮದಲ್ಲಿ ಸ್ಫೋಟದ ಸದ್ದು ಕೇಳುತ್ತಿರುತ್ತದೆ.ಮನೆಯೊಳಗೆ ಇದ್ದವರು ಬೆಚ್ಚಿ ಬೀಳುವಷ್ಟು ಶಬ್ದ ಬರುತ್ತದೆ. ಮನೆಯ ಗೋಡೆಗಳು ಆಗಲೋ, ಈಗಲೋ ಬಿದ್ದು ಹೋಗುವ ಸ್ಥಿತಿಯಲ್ಲಿವೆ. ಕ್ವಾರಿ ನಡೆಸುವವರು ಎಲ್ಲೋ ಕುಳಿತಿರುತ್ತಾರೆ. ನಮ್ಮ ಗೋಳು ಕೇಳೋರು ಯಾರೂ ಇಲ್ಲ. ಸ್ಫೋಟಕದ ವಾಸನೆ ಇಡೀ ಊರಿಗೆ ಹರಡುತ್ತದೆ. ಸಣ್ಣ ಮಕ್ಕಳು ಅನಾರೋಗ್ಯಕ್ಕೆ ಒಳಗಾಗುತ್ತಿವೆ’ ಎಂದು ಗ್ರಾಮಸ್ಥರಾದ ಸುಬ್ಬನಾಯಕ ಮತ್ತು ಕೆಂಗನಾಯಕ ಸಂಕಟ ಬಿಚ್ಚಿಟ್ಟರು.

‘ಜಿಲ್ಲೆಯಲ್ಲಿ ರಾತ್ರಿ ವೇಳೆ ಎಲ್ಲೂ ಸ್ಫೋಟ ನಡೆಸುತ್ತಿಲ್ಲ.ಸಣ್ಣಪುಟ್ಟ ತೊಂದರೆ ಸಹಜ. ಈ ಬಗ್ಗೆ ವಿಚಾರಿಸಿ ನೋಡುತ್ತೇವೆ’ ಎನ್ನುತ್ತಾರೆ ಗಣಿ ಇಲಾಖೆ ಹಿರಿಯ ಭೂವಿಜ್ಞಾನಿ ದ್ವಿತೀಯಾ.

ಅಬ್ಬರ ನಿಂತರೂ ತೊಂದರೆ ತಪ್ಪಿಲ್ಲ!

ಮಂಗಳೂರು: ಕರಾವಳಿ ಹಾಗೂ ಮಲೆನಾಡಿನ ಭಾಗದಲ್ಲಿ ಕಲ್ಲು ಗಣಿಗಾರಿಕೆ, ಕ್ರಷರ್‌ಗಳ ಅಬ್ಬರ ಸ್ವಲ್ಪ ಕಡಿಮೆಯಾಗಿದ್ದರೂ, ತೆರೆಯಮರೆಯಲ್ಲಿ ಚಟುವಟಿಕೆ ಮಾತ್ರ ನಿಂತಿಲ್ಲ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 120 ಕ್ವಾರಿಗಳಿವೆ. ಬಾಕ್ಸೈಟ್‌, ಕೆಂಪು ಕಲ್ಲು ಹಾಗೂ ಮರಳು ಗಣಿಗಾರಿಕೆಯೂ ನಡೆಯುತ್ತಿದೆ. ಉಡುಪಿ ಜಿಲ್ಲೆಯಲ್ಲಿ 116 ಕರಿಕಲ್ಲು ಕ್ವಾರಿಗಳಿವೆ. ಚಿಕ್ಕಮಗಳೂರಿನಲ್ಲಿ 88 ಕಲ್ಲು ಗಣಿಗಾರಿಕೆ ಮತ್ತು 40 ಕ್ರಷರ್‌ ಇವೆ. ನಗರ ಹೊರವಲಯದ ಮಳವೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ‌ಗುಂಡವಪದವು ಕೊರಗರ ಕಾಲೊನಿಯಲ್ಲಿ ನಿಯಮ ಉಲ್ಲಂಘಿಸಿ ಗಣಿಗಾರಿಕೆ ನಡೆಯುತ್ತಿದೆ ಎನ್ನುವುದು ಸ್ಥಳೀಯರ ದೂರು.

‘ಸಾರ್ವಜನಿಕರಿಗೆ ತೊಂದರೆಯಾಗದಂತೆ ಗಣಿಗಾರಿಕೆ ನಡೆಸಲು ಷರತ್ತು ವಿಧಿಸಿದ್ದರೂ, ಇಲ್ಲಿ ರಾತ್ರಿಯಿಡೀ ಕೆಲಸ ಮಾಡಲಾಗುತ್ತಿದೆ. ಬೆಳಿಗ್ಗೆ 5 ಗಂಟೆಯಿಂದಲೇ ಆರಂಭವಾಗುವ ಗಣಿಗಾರಿಕೆ ರಾತ್ರಿ 8 ಗಂಟೆಯವರೆಗೂ ನಡೆಯುತ್ತದೆ. ನಂತರ ಲಾರಿಗಳ ಮೂಲಕ ಸಾಗಣೆ ಮಾಡಲಾಗುತ್ತಿದೆ. ಇದರಿಂದ ರಾತ್ರಿ ನಿದ್ದೆ ಮಾಡಲಾಗುತ್ತಿಲ್ಲ’ ಎಂದು ಕಾಲೊನಿ ನಿವಾಸಿ ನಾರಾಯಣ ಹೇಳುತ್ತಾರೆ.

‘ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆಗೆ ಅವಕಾಶ ನೀಡುತ್ತಿಲ್ಲ. ಸರ್ಕಾರದಿಂದಲೂ ಕಟ್ಟುನಿಟ್ಟಿನ ಆದೇಶ ಬಂದಿದ್ದು, ಅದನ್ನು ಪಾಲಿಸಲಾಗುತ್ತಿದೆ. ನಿಯಮ ಉಲ್ಲಂಘಿಸಿದರೆ ಕ್ರಮಕೈಗೊಳ್ಳಲಾಗುವುದು’ ಎನ್ನುತ್ತಾರೆ ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪ ನಿರ್ದೇಶಕ ನಿರಂಜನ್‌.

ಸಂಗ್ರಹಕ್ಕೆ ಅವಕಾಶವಿಲ್ಲ

ಮೈಸೂರು ಜಿಲ್ಲೆಯಲ್ಲಿ ಎಲ್ಲೂ ಸ್ಫೋಟಕ ಸಂಗ್ರಹ ಮಾಡುವಂತಿಲ್ಲ. ಪೂರೈಕೆ ಹಾಗೂ ಸ್ಫೋಟ ಮಾಡಲು ಪ್ರತ್ಯೇಕ ಏಜೆನ್ಸಿಗಳಿವೆ. ಅವರೇ ಬಂದು ಸ್ಫೋಟ ಮಾಡಿ ಹೋಗಬೇಕು. ಈ ಬಗ್ಗೆ ಪೊಲೀಸ್‌ ಠಾಣೆಗೂ ಮಾಹಿತಿ ನೀಡಬೇಕು.

ಈ ವಿಚಾರವಾಗಿ ಕಲ್ಲು ಗಣಿಗಾರಿಕೆ ನಡೆಸುವವರಿಗೆ ನೋಟಿಸ್‌ ನೀಡಿದ್ದೇವೆ. ಸ್ಫೋಟಕಕ್ಕೆ ಅನುಮತಿ ಪಡೆದವರ ಮಾಹಿತಿ ಕಲೆಹಾಕಿದ್ದೇವೆ. ಸಂಜೆ 6 ಗಂಟೆ ಒಳಗಾಗಿ ಸ್ಫೋಟ ನಡೆಸಬೇಕು. ರಾತ್ರಿ ಸ್ಫೋಟ ಮಾಡಿದರೆ ಕ್ರಮ ಜರುಗಿಸಲಾಗುವುದು

–ಸಿ.ಬಿ.ರಿಷ್ಯಂತ್‌,ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.