ADVERTISEMENT

ಭಯದ ವಾತಾವರಣ ನಿರ್ಮಾಣ: ಯಡಿಯೂರಪ್ಪ ಆರೋಪ

​ಪ್ರಜಾವಾಣಿ ವಾರ್ತೆ
Published 23 ಜೂನ್ 2025, 19:51 IST
Last Updated 23 ಜೂನ್ 2025, 19:51 IST
ಬಿ.ಎಸ್. ಯಡಿಯೂರಪ್ಪ
ಬಿ.ಎಸ್. ಯಡಿಯೂರಪ್ಪ   

ಬೆಂಗಳೂರು: ‘ರಾಜಕೀಯದಿಂದ ದೂರ ಇರುವ ಯಾರೂ ಈ ಸರ್ಕಾರದ ವಿರುದ್ಧ ಮಾತನಾಡುವಂತಿಲ್ಲ. ಅಂಥ ಭಯದ ವಾತಾವರಣವನ್ನು ಸಿದ್ದರಾಮಯ್ಯ ನಿರ್ಮಾಣ ಮಾಡುತ್ತಿದ್ದಾರೆ’ ಎಂದು ಬಿಜೆಪಿ ಸಂಸದೀಯ ಮಂಡಳಿಯ ಸದಸ್ಯ ಬಿ.ಎಸ್ ಯಡಿಯೂರಪ್ಪ ಹೇಳಿದರು.

ಸುದ್ದಿಗಾರರ ಜತೆ ಸೋಮವಾರ ಮಾತನಾಡಿದ ಅವರು, ಉದ್ಯಮಿ ಮೋಹನ್‌ದಾಸ್ ಪೈ ಅವರ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ. ಸರ್ಕಾರ ಸುಳ್ಳು ಕಾರಣ ಹೇಳಿ ಎಫ್‌ಐಆರ್ ಹಾಕಿದೆ. ಇದು ಸರಿಯಲ್ಲ. ವಿರೋಧ ಪಕ್ಷಗಳನ್ನೂ ಬೆದರಿಸುವ ಕೆಲಸ ನಡೆಯುತ್ತಿದೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರೂ ಬೆಂಬಲ ನೀಡುತ್ತಿದ್ದಾರೆ. ಈ ಎಲ್ಲ ವಿಷಯಗಳನ್ನು ಜನರಿಗೆ, ಪಕ್ಷದ ಕಾರ್ಯಕರ್ತರಿಗೆ ತಿಳಿಸಲು ರಾಜ್ಯದಾದ್ಯಂತ ಹೋರಾಟ ರೂಪಿಸಲಾಗುವುದು ಎಂದರು.

ಬಿಜೆಪಿ ಶಾಸಕ ಸಿ.ಸಿ. ಪಾಟೀಲ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಿರಿಯರು, ಅನುಭವಿಗಳು. ಆದರೆ, ಅವರು ನಡೆಸುತ್ತಿರುವ ಆಡಳಿತ ಕಳವಳಕಾರಿಯಾಗಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಮುಂದುವರಿಯುವುದು, ಬಿಡುವುದು ಕಾಂಗ್ರೆಸ್‌ ಹೈಕಮಾಂಡ್‌ಗೆ ಬಿಟ್ಟ ವಿಚಾರ. ಇಂತಹ ಆಪಾದನೆಗಳನ್ನು ಬಿಜೆಪಿ ಶಾಸಕರು ಮಾಡಿದ್ದರೆ ಕಾಂಗ್ರೆಸ್‌ ನಾಯಕರ ವರ್ತನೆ ಹೇಗೆ ಇರುತ್ತಿತ್ತು ಎಂದು ಪ್ರಶ್ನಿಸಿದರು.

ADVERTISEMENT

‘ವಸತಿ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಅದರ ಬಗ್ಗೆ ನನಗೂ ಮಾಹಿತಿ ಬಂದಿದೆ. ವಸತಿ ಯೋಜನೆಗಳಲ್ಲಿ ಫಲಾನುಭವಿಗಳಿಗೆ ಮೋಸ ಆಗುತ್ತಿದೆ’ ಎಂದು ಜೆಡಿಎಸ್‌ ಶಾಸಕ ಎ.ಮಂಜು ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.