ADVERTISEMENT

ಅತ್ಯಾಚಾರ: ಬಾಲಕಿಗೆ ಗರ್ಭಪಾತ

ಕಷ್ಟಕ್ಕೆ ಮರುಗಿದ ಮಕ್ಕಳ ಕಲ್ಯಾಣ ಸಮಿತಿ

ಸಂತೋಷ ಜಿಗಳಿಕೊಪ್ಪ
Published 19 ಫೆಬ್ರುವರಿ 2019, 20:24 IST
Last Updated 19 ಫೆಬ್ರುವರಿ 2019, 20:24 IST
   

ಬೆಂಗಳೂರು: ಅತ್ಯಾಚಾರಕ್ಕೆ ಬಲಿಯಾಗಿ ಗರ್ಭ ಧರಿಸಿ ಸಾವು–ಬದುಕಿನ ನಡುವೆ ಹೋರಾಡುತ್ತಿದ್ದ ಹದಿನೇಳು ವರ್ಷದ ಬಾಲಕಿಯ ಕಷ್ಟಕ್ಕೆ ಮರುಗಿದ ಮಕ್ಕಳ ಕಲ್ಯಾಣ ಸಮಿತಿ, ಚಾಲ್ತಿಯಲ್ಲಿರುವ ಕಾನೂನಿನನ್ವಯ ಆಕೆಗೆ ಗರ್ಭಪಾತ ಮಾಡಿಸಿದೆ.

ಸಣ್ಣ ವಯಸ್ಸಿನಲ್ಲೇ ಗರ್ಭ ಧರಿಸಿ, ಮುಂದೇನು? ಎಂದು ಆತಂಕಗೊಂಡಿದ್ದ ಬಾಲಕಿ ಹಾಗೂ ಆಕೆಯ ಪೋಷಕರು, ಸಮಿತಿಯ ನಿರ್ಧಾರದಿಂದ ನಿಟ್ಟುಸಿರು ಬಿಟ್ಟಿದ್ದಾರೆ. ಬಾಲಕಿಗೆ ಈ ಸ್ಥಿತಿ ಬರಲು ಕಾರಣನಾದ ಆನೇಕಲ್‌ ನಿವಾಸಿ ಕಿರಣ್‌ ಎಂಬಾತ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾನೆ.

ಪ್ರಕರಣದ ವಿವರ: ಬಾಲಕಿಯನ್ನು ಅಪಹರಿಸಿದ್ದ ಆರೋಪಿ ಕಿರಣ್‌, ಅಕ್ರಮ ಬಂಧನದಲ್ಲಿಟ್ಟು ಅತ್ಯಾಚಾರ ಎಸಗಿದ್ದ. ಆ ಸಂಬಂಧ ಬಾಲಕಿಯ ಪೋಷಕರು, ಪೊಲೀಸರಿಗೆ ದೂರು ನೀಡಿದ್ದರು. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ (ಪೋಕ್ಸೊ) ಕಾಯ್ದೆ ಅಡಿ ಎಫ್‌ಐಆರ್‌ ದಾಖಲಿಸಿಕೊಂಡು ಕಿರಣ್‌ನನ್ನು ಬಂಧಿಸಲಾಗಿತ್ತು.

ADVERTISEMENT

ಪ್ರಕರಣವು ತನಿಖಾ ಹಂತದಲ್ಲಿರುವಾಗಲೇ ಬಾಲಕಿ ಮೂರು ತಿಂಗಳ ಗರ್ಭಿಣಿ ಎಂದು ಗೊತ್ತಾಗಿತ್ತು. ಆಕೆಯ ಆರೋಗ್ಯ ತಪಾಸಣೆ ನಡೆಸಿದ್ದ ವೈದ್ಯರು, ಜೀವಕ್ಕೆ ಅಪಾಯವಿರುವುದಾಗಿ ಹೇಳಿದ್ದರು. ಆತಂಕಗೊಂಡ ಪೋಷಕರು, ಬಾಲಕಿಯನ್ನು ರಕ್ಷಿಸುವಂತೆ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಅಳಲು ತೋಡಿಕೊಂಡಿದ್ದರು.

ಪೋಷಕರು ಹಾಗೂ ಬಾಲಕಿಯ ಕಷ್ಟ ಕೇಳಿದ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷೆ ಅಂಜಲಿ ರಾಮಣ್ಣ, ಪ್ರಕರಣದ ವಿಚಾರಣೆ ಆರಂಭಿಸಿದ್ದರು.

ಪೊಲೀಸರಿಂದ ವರದಿ ತರಿಸಿಕೊಂಡಿದ್ದ ಸಮಿತಿ, ಬಾಲಕಿಯ ಆರೋಗ್ಯ ಸ್ಥಿತಿ ಬಗ್ಗೆ ವೈದ್ಯರಿಂದಲೂ ಮಾಹಿತಿ ಪಡೆದುಕೊಂಡಿತ್ತು. ನಂತರ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ (ಪೋಕ್ಸೊ) ಕಾಯ್ದೆ ಹಾಗೂ ಬಾಲನ್ಯಾಯ ಕಾಯ್ದೆ ಅಡಿ ಸಮಿತಿಗೆ ಇರುವ ಅಧಿಕಾರಗಳನ್ನು ಬಳಸಿಕೊಂಡು ಬಾಲಕಿಯ ಗರ್ಭಪಾತಕ್ಕೆ ಅನುಮತಿ ನೀಡಿ ಆದೇಶ ಹೊರಡಿಸಿತ್ತು.

ಸಮಿತಿಯ ಆದೇಶದಂತೆ ಶಸ್ತ್ರಚಿಕಿತ್ಸೆ ನಡೆಸಿದ್ದ ವೈದ್ಯರು, ಬಾಲಕಿಗೆ ಗರ್ಭಪಾತ ಮಾಡಿ ಭ್ರೂಣವನ್ನು ಹೊರತೆಗೆದು ಸುರಕ್ಷಿತ ಪೆಟ್ಟಿಗೆಯಲ್ಲಿರಿಸಿದ್ದರು.

ನ್ಯಾಯಾಲಯದಲ್ಲಿ ಡಿಎನ್‌ಎ ಸಂಗ್ರಹ: ಸಮಿತಿಯ ಆದೇಶ ಪ್ರತಿಯ ಸಮೇತ ವೈದ್ಯರು, ಭ್ರೂಣವಿದ್ದ ಪೆಟ್ಟಿಗೆಯನ್ನು ಫೆ. 2ರಂದು ಸ್ಥಳೀಯ ನ್ಯಾಯಾಲಯದ ಎದುರು ಹಾಜರುಪಡಿಸಿದ್ದರು. ಆ ಮಾಹಿತಿ ತಿಳಿದ ಪೊಲೀಸರು, ಜೈಲಿನಲ್ಲಿದ್ದ ಆರೋಪಿಯನ್ನು ನ್ಯಾಯಾಲಯಕ್ಕೆ ಕರೆತಂದಿದ್ದರು. ಬಾಲಕಿ ಸಹ ನ್ಯಾಯಾಲಯಕ್ಕೆ ಬಂದಿದ್ದಳು.

ಪೊಲೀಸರು, ಭ್ರೂಣದ ಪೆಟ್ಟಿಗೆ ಸಮೇತ ರಕ್ತದ ಮಾದರಿಯನ್ನು ಡಿಎನ್‌ಎ ಪರೀಕ್ಷೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿದ್ದಾರೆ. ಅದರ ವರದಿಗಾಗಿ ಪೊಲೀಸರು ಅಲ್ಲಿಯೇ ಕಾಯುತ್ತಿದ್ದಾರೆ.

ಗರ್ಭಪಾತಕ್ಕೆ ಅವಕಾಶ ನೀಡಿದ್ದ ಪ್ರಕರಣಗಳು
* ಹರಿಯಾಣ ರಾಜ್ಯದ ರೋಹ್ಟಕ್‌ನಲ್ಲಿ ಮಲತಂದೆಯಿಂದ ಅತ್ಯಾಚಾರಕ್ಕೀಡಾಗಿ ಗರ್ಭಿಣಿಯಾಗಿದ್ದ 10 ವರ್ಷದ ಬಾಲಕಿಗೆ ಗರ್ಭಪಾತ ಮಾಡಿಸಲು ಅವಕಾಶ ನೀಡಿ ಸ್ಥಳೀಯ ನ್ಯಾಯಾಲಯ 2017ರಲ್ಲಿ ಆದೇಶ ಹೊರಡಿಸಿತ್ತು.

* ಚೆನ್ನೈನಲ್ಲಿ ಪರಿಚಯಸ್ಥನಿಂದ ಅತ್ಯಾಚಾರಗೀಡಾಗಿ ಗರ್ಭ ಧರಿಸಿದ್ದ 14 ವರ್ಷದ ಬಾಲಕಿಯ ಗರ್ಭಪಾತಕ್ಕೆ ಮದ್ರಾಸ್‌ ಹೈಕೋರ್ಟ್‌ ಅನುಮತಿ ನೀಡಿತ್ತು. ಮಕ್ಕಳ ಕಲ್ಯಾಣ ಸಮಿತಿಯೇ ಬಾಲಕಿ ಪರವಾಗಿ ಅರ್ಜಿ ಸಲ್ಲಿಸಿತ್ತು.

‘ಸುಪ್ರೀಂ’ ಆದೇಶದಲ್ಲೂ ಉಲ್ಲೇಖ
‘ಅತ್ಯಾಚಾರ ಪ್ರಕರಣದಲ್ಲಿ ಬಾಲಕಿಯು ಗರ್ಭ ಧರಿಸಿದರೆ, ಆಕೆಯ ಸ್ಥಿತಿ ಚಿಂತಾಜನಕವಾಗುತ್ತದೆ. ಜೊತೆಗೆ ಪ್ರಾಣಕ್ಕೂ ಅ‍ಪಾಯ ಎದುರಾಗುವ ಸಾಧ್ಯತೆ ಇರುತ್ತದೆ. ಅದೇ ಕಾರಣಕ್ಕೆ ವೈದ್ಯಕೀಯ ವರದಿ ಆಧರಿಸಿ ಗರ್ಭಪಾತಕ್ಕೆ ಅವಕಾಶ ನೀಡುವ ಬಗ್ಗೆ ಸುಪ್ರೀಂಕೋರ್ಟ್‌ನ ಹಲವು ಆದೇಶಗಳಲ್ಲಿ ಉಲ್ಲೇಖಿಸಲಾಗಿದೆ’ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಚಿನ್ನವೆಂಕಟರವಣಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೆಂಪೇಗೌಡ ನಗರ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಮಕ್ಕಳ ಕಲ್ಯಾಣ ಸಮಿತಿಯು ಚಾಲ್ತಿಯಲ್ಲಿರುವ ಕಾನೂನಿನನ್ವಯ ಬಾಲಕಿ ಹಾಗೂ ಪೋಷಕರ ಕಣ್ಣೀರು ಒರೆಸಿದೆ’ ಎಂದರು.

**

ಬಾಲಕಿಯ ಆರೋಗ್ಯ ಹಾಗೂ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಸಮಿತಿಯ ವಿಶೇಷ ಅಧಿಕಾರ ಚಲಾಯಿಸಿ ಈ ಆದೇಶ ಹೊರಡಿಸಲಾಗಿದೆ.

-ಅಂಜಲಿ ರಾಮಣ್ಣ, ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.