ಹೈಕೋರ್ಟ್
ಬೆಂಗಳೂರು: ‘ಈತ ಯಾರೋ ಮೋಸ್ಟ್ ಡೆಕೋರೇಟಿವ್ ಮ್ಯಾನ್ ಇದ್ದಂಗಿದೆಯಲ್ಲಾ? ಈತನ ಎಲ್ಲ ಅಪರಾಧಗಳ ಪಟ್ಟಿ ಕೊಡಿ’ ಎಂದು ಹೈಕೋರ್ಟ್ ಕ್ರಿಮಿನಲ್ ಪ್ರಕರಣವೊಂದರ ವಜಾ ಕೋರಿದ್ದ ಅರ್ಜಿ ವಿಚಾರಣೆಯಲ್ಲಿ ರಾಜ್ಯ ಪ್ರಾಸಿಕ್ಯೂಷನ್‌ಗೆ ಈ ಕುರಿತಂತೆ ನಿರ್ದೇಶಿಸಿದೆ.
‘ನನ್ನ ವಿರುದ್ಧ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸಿಜೆಎಂ ಕೋರ್ಟ್‌ನಲ್ಲಿರುವ ಕ್ರಿಮಿನಲ್ ಪ್ರಕರಣ ರದ್ದುಗೊಳಿಸಬೇಕು’ ಎಂದು ಕೋರಿ ನೆಲಮಂಗಲ ಕಸಬಾ ಹೋಬಳಿಯ ಕಲ್ಲುಪಾಳ್ಯದ ಸುರೇಶ್ ಅಲಿಯಾಸ್ ಸಾಯಿ ಕುಮಾರ್ (37) ಸಲ್ಲಿಸಿರುವ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಅರ್ಜಿದಾರ ಸುರೇಶ್ ಪರ ಹೈಕೋರ್ಟ್ ವಕೀಲ ಬಿ.ಲತೀಫ್ ಪ್ರಕರಣ ರದ್ದುಪಡಿಸುವಂತೆ ಕೋರಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ರಾಜ್ಯ ಪ್ರಾಸಿಕ್ಯೂಷನ್ ಪರ ಹಾಜರಿದ್ದ ರಾಜ್ಯ ಹೆಚ್ಚುವರಿ ಪ್ರಾಸಿಕ್ಯೂಟರ್ ಬಿ.ಎನ್.ಜಗದೀಶ್ ಆರೋಪಿಯ ವಿರುದ್ಧ ಒಟ್ಟು 75 ಕ್ರಿಮಿನಲ್ ಪ್ರಕರಣಗಳಿವೆ’ ಎಂಬ ಅಂಶವನ್ನು ನ್ಯಾಯಪೀಠದ ಗಮನಕ್ಕೆ ತಂದರು.
ಇದಕ್ಕೆ ಸಖೇದಾಶ್ಚರ್ಯ ವ್ಯಕ್ತಪಡಿಸಿದ ನ್ಯಾಯಪೀಠ ‘ಈತ ಯಾರೋ ಭಾರಿ ಆಸಾಮಿಯೇ ಇರಬೇಕು. ಈತನ ವಿರುದ್ಧದ ಎಲ್ಲ ಕ್ರಿಮಿನಲ್ ಪ್ರಕರಣಗಳ ಪಟ್ಟಿಯನ್ನು ಕೋರ್ಟ್‌ಗೆ ಒದಗಿಸಿ’ ಎಂದು ಜಗದೀಶ್ ಅವರಿಗೆ ಸೂಚಿಸಿ ವಿಚಾರಣೆ ಮುಂದೂಡಿತು. 7ನೇ ತರಗತಿವರೆಗೆ ಓದಿರುವ ಸುರೇಶ್ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ಕೊಲೆ ಕೊಲೆ ಯತ್ನ ಗೂಂಡಾಗಿರಿ ಅನೈತಿಕ ವ್ಯವಹಾರ ಕೊಳಚೆ ಪ್ರದೇಶಗಳನ್ನು ಅಕ್ರಮವಾಗಿ ಆಕ್ರಮಿಸಿಕೊಳ್ಳುವುದು ಕಳ್ಳಭಟ್ಟಿ ಚಟುವಟಿಕೆ ಮತ್ತು ಔಷಧ ಅಪರಾಧಗಳೂ ಸೇರಿದಂತೆ ವಿವಿಧ ಗುರುತರ ಆಪಾದನೆಗಳ ಆರೋಪಗಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.