ದಾವಣಗೆರೆ: ಪ್ರಧಾನಮಂತ್ರಿ ಬೆಳೆ ವಿಮೆ ಯೋಜನೆಯಡಿ ಪ್ರಸಕ್ತ ಸಾಲಿನ ಪ್ರೀಮಿಯಂ ಭರಿಸುವ ಅವಧಿ ಗುರುವಾರ (ಜುಲೈ 31) ಕೊನೆಗೊಂಡಿದೆ. ರೈತರಿಂದ ಪಹಣಿ, ಆಧಾರ್ ಸಂಖ್ಯೆ ಪಡೆದು ಕಂತಿನ ಹಣವನ್ನು ಪಾವತಿಸಿ, ನಂತರ ಪರಿಹಾರ ಮೊತ್ತದ ಅರ್ಧ ಪಾಲು ಪಡೆಯುವ ವಂಚಕರ ಜಾಲ ರಾಜ್ಯದಾದ್ಯಂತ ಸಕ್ರಿಯವಾಗಿದ್ದು, ಈ ಬಾರಿಯೂ ಅನೇಕ ಕಡೆ ರೈತರ ಕಂತನ್ನು ಪಾವತಿಸಿದೆ.
‘ಪ್ರೀಮಿಯಂ ಹಣ ತುಂಬಿ, ನಿಮ್ಮ ಹೋಬಳಿಯನ್ನು ಪರಿಹಾರಕ್ಕೆ ಆಯ್ಕೆ ಆಗುವಂತೆ ಮಾಡುವ ಜವಾಬ್ದಾರಿ ನಮ್ಮದು. ವಿಮೆ ಪರಿಹಾರ ಬಿಡುಗಡೆಯಾದಾಗ ಅರ್ಧದಷ್ಟು ಹಣ ನೀಡಿದರೆ ಸಾಕು’ ಎಂಬ ಆಮಿಷ ಒಡ್ಡುತ್ತ ರೈತರನ್ನೂ, ಸರ್ಕಾರವನ್ನೂ ವಂಚಿಸುವ ಜಾಲ ಕೆಲವು ವರ್ಷಗಳಿಂದ ರಾಜ್ಯದಲ್ಲಿ ಅಸ್ತಿತ್ವದಲ್ಲಿದೆ. ಇತ್ತೀಚಿನ ದಿನಗಳಲ್ಲಿ ಈ ಜಾಲ ಅನೇಕ ಹೋಬಳಿಗಳಿಗೂ ವ್ಯಾಪಿಸಿದೆ.
‘ವಿಮೆ ವ್ಯಾಪ್ತಿಗೊಳಪಡುವ ಬೆಳೆಗೆ ರೈತರೇ ಪ್ರೀಮಿಯಂ ಭರಿಸಿದರೆ, ಹೋಬಳಿಯು ಪರಿಹಾರದ ವ್ಯಾಪ್ತಿಗೆ ಸೇರುವುದಿಲ್ಲ’ ಎಂದು ನಂಬಿಸಲಾಗುತ್ತಿದೆ. ಈ ಜಾಲವು ಪ್ರೀಮಿಯಂ ಹಣ ತುಂಬಿದ ಹೋಬಳಿಗಳಲ್ಲಿ ಅತಿವೃಷ್ಟಿ, ಅನಾವೃಷ್ಟಿ ಇಲ್ಲದಿದ್ದರೂ ಬೆಳೆಗಳು ಪರಿಹಾರ ವ್ಯಾಪ್ತಿಗೆ ಒಳಪಡುತ್ತಿವೆ.
ಹೋಬಳಿ ವ್ಯಾಪ್ತಿಯಲ್ಲಿನ ನಿಗದಿತ ಬೆಳೆ ಪ್ರಮಾಣ ಆಧರಿಸಿ ಆಯಾ ಬೆಳೆಗಳನ್ನು ವಿಮೆ ವ್ಯಾಪ್ತಿಗೆ ಒಳಪಡಿಸಿ, ಪ್ರತಿ ಹೆಕ್ಟೇರ್ ಬೆಳೆಗೆ ಇಂತಿಷ್ಟು ಎಂಬಂತೆ ಸರ್ಕಾರ ಪ್ರೀಮಿಯಂ ಶುಲ್ಕ ನಿಗದಿಪಡಿಸುತ್ತದೆ. ರೈತರನ್ನು ಸಂಪರ್ಕಿಸಿ ಪ್ರೀಮಿಯಂ ಭರಿಸುವ ಈ ಜಾಲ, ಕೊನೆಗೆ ಪರಿಹಾರದ ಹಣ ರೈತರ ಖಾತೆಗೆ ಜಮೆಯಾದಾಗ ಅರ್ಧ ಪಾಲು ಪಡೆಯುತ್ತಿದೆ. ಕೃಷಿ, ತೊಟಗಾರಿಕೆ ಇಲಾಖೆಯ ಅಧಿಕಾರಿಗಳು, ರಾಜಕಾರಣಿಗಳು ಮತ್ತು ರೈತ ಮುಖಂಡರು ವಿಮಾ ಕಂಪನಿಗಳೊಂದಿಗೆ ಶಾಮೀಲಾಗಿರುವ ಅನುಮಾನ ವ್ಯಕ್ತವಾಗಿದೆ.
ಈ ಅಕ್ರಮ ಜಾಲವು ರಾಜ್ಯದ ಹಾವೇರಿ, ಗದಗ, ಬಾಗಲಕೋಟೆ, ವಿಜಯಪುರ, ಕೊಪ್ಪಳ, ವಿಜಯನಗರ, ಬಳ್ಳಾರಿ, ಕಲಬುರಗಿ, ರಾಯಚೂರು, ಚಿತ್ರದುರ್ಗ, ಯಾದಗಿರಿ, ಬೀದರ್ ಮತ್ತು ಬೆಳಗಾವಿ ಜಿಲ್ಲೆಗಳ ವಿವಿಧ ಹೋಬಳಿಗಳಲ್ಲಿ ಸಕ್ರಿಯವಾಗಿದೆ. ನಿರ್ದಿಷ್ಟ ಬೆಳೆಗೆ ವಿಮೆ ಮಾಡಿಸುವ ಜವಾಬ್ದಾರಿ ಹೊತ್ತುಕೊಳ್ಳುತ್ತದೆ ಎಂದು ಹೆಸರು ಹೇಳಲಿಚ್ಛಿಸದ ರೈತರು ನೀಡುವ ಮಾಹಿತಿ.
ನೀರಾವರಿ ಸೌಲಭ್ಯವೇ ಇಲ್ಲದ ರೈತರ ಜಮೀನನ್ನೂ ಅಧಿಕಾರಿಗಳ ನೆರವಿನೊಂದಿಗೆ ‘ನೀರಾವರಿ’ ಎಂದು ತೋರಿಸುತ್ತ, ಆಯಾ ಹೋಬಳಿಗಳಲ್ಲಿ ಸಮೃದ್ಧ ಮಳೆಯಾಗಿ ಉತ್ತಮ ಇಳುವರಿ ದೊರೆತಿದ್ದರೂ ಪರಿಹಾರ ವ್ಯಾಪ್ತಿಗೆ ಒಳಪಡಿಸುವಲ್ಲಿ ಈ ಜಾಲ ಯಶಸ್ವಿಯಾಗುತ್ತಿದೆ ಎಂದು ಹೇಳಲಾಗಿದೆ.
2024–25ನೇ ಸಾಲಿನಲ್ಲಿ ಉತ್ತಮ ಮಳೆಯಾಗಿ, ಭರಪೂರ ಇಳುವರಿ ಕೈಗೆಟುಕಿದ್ದರೂ ಅನೇಕ ಹೋಬಳಿಗಳಲ್ಲಿ ನಿರ್ದಿಷ್ಟ ಬೆಳೆ ಬೆಳೆದಿದ್ದಾಗಿ ತೋರಿಸಿ ಸಾಕಷ್ಟು ರೈತರಿಗೆ ವಿಮಾ ಪರಿಹಾರ ನೀಡಲಾಗಿದೆ. ಇದೇ ಸಾಲಿನಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿಗೊಳಗಾದ ಹರಿಹರ, ರಾಣೇಬೆನ್ನೂರು, ಚನ್ನಗಿರಿ, ಹುಬ್ಬಳ್ಳಿ, ಧಾರವಾಡ ಮತ್ತಿತರ ಹಲವು ತಾಲ್ಲೂಕುಗಳ ಸಾಕಷ್ಟು ಹೋಬಳಿ ವ್ಯಾಪ್ತಿಯ ರೈತರಿಗೆ ಪರಿಹಾರ ದೊರೆತಿಲ್ಲ.
‘ಕಳೆದ ವರ್ಷ ನಮ್ಮ 2 ಎಕರೆ ಜಮೀನಿನಲ್ಲಿ ಬಿತ್ತಿದ್ದ ಹೆಸರು ಬೆಳೆ ಭಾರಿ ಮಳೆಯಿಂದ ಹಾನಿಗೀಡಾಯಿತು. ಆದರೂ ವಿಮೆ ಪರಿಹಾರ ದೊರೆಯಲಿಲ್ಲ. ಬೆಳೆ ಸಮೀಕ್ಷೆ ಸರಿಯಾಗಿಲ್ಲ ಎಂಬ ಶಂಕೆ ಇದೆ’ ಎಂದು ಹುಬ್ಬಳ್ಳಿ ತಾಲ್ಲೂಕಿನ ಉಣಕಲ್ ಗ್ರಾಮದ ರೈತ ಪರಶುರಾಮ ಹೊಂಬಳ ದೂರುತ್ತಾರೆ.
2023–24ನೇ ಸಾಲಿನಲ್ಲಿ ಅನಾವೃಷ್ಟಿಯಿಂದ ನಷ್ಟ ಆಗಿದ್ದರೂ ಇಂಥ ಜಾಲದ ಸಂಪರ್ಕಕ್ಕೆ ಬಾರದ ರೈತರಿಗೆ ಕವಡೆ ಕಾಸನ್ನೂ ವಿಮೆ ಪರಿಹಾರ ರೂಪದಲ್ಲಿ ನೀಡಿಲ್ಲ ಎಂಬುದೂ ಅವರ ಆರೋಪ.
‘ಬರಗಾಲ ಅಥವಾ ಅತಿವೃಷ್ಟಿಯಿಂದ ಬೆಳೆ ನಷ್ಟವಾದರೂ ವಿಮಾ ಪರಿಹಾರ ದೊರೆಯದಿದ್ದರೆ ನಾವು ಯಾರನ್ನು ಕೇಳಬೇಕು ಎಂಬುದೇ ತಿಳಿದಿಲ್ಲ. ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ಕೇಳಿದರೆ, ವಿಮಾ ಕಂಪನಿಗಳ ಮೇಲೆ ಹಾಕುತ್ತಾರೆ. ವಿಮಾ ಕಂಪನಿಯವರು ಸಂಪರ್ಕಕ್ಕೆ ಸಿಗುವುದಿಲ್ಲ. ಜನಪ್ರತಿನಿಧಿಗಳೂ ಸ್ಪಂದಿಸುವುದಿಲ್ಲ. ಬೆಳೆ ಕೈಗೆಟುಕದೇ ನಷ್ಟವಲ್ಲದೆ, ಪ್ರೀಮಿಯಂ ಹಣವೂ ಕೈಬಿಡುವುದರಿಂದ ನಾವೂ ಇಂಥ ಜಾಲದವರನ್ನು ನಂಬುತ್ತಿದ್ದೇವೆ’ ಎಂದು ಹಾವೇರಿ ಜಿಲ್ಲೆಯ ಶಿಗ್ಗಾವಿಯ ರೈತ ಶಾಮಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.
ಜಗಳೂರು ತಾಲ್ಲೂಕಿನಲ್ಲಿ ಇಂತಹ ಜಾಲವಿರುವುದು ಕೇಳಿಬಂದಿತ್ತು. ಹಾಗಾಗಿ ಬೆಳೆ ಸಮೀಕ್ಷೆ ಮತ್ತು ಬೆಳೆ ಕಟಾವು ಪ್ರಯೋಗವನ್ನು ಕರಾರುವಾಕ್ಕಾಗಿ ಮಾಡಿ ನಿಯಂತ್ರಣಕ್ಕೆ ತರಲಾಗಿದೆಜಿಯಾವುಲ್ಲಾ ಕೆ ಜಂಟಿ ನಿರ್ದೇಶಕ ಕೃಷಿ ಇಲಾಖೆ ದಾವಣಗೆರೆ
ಹಾವೇರಿ ಸೇರಿದಂತೆ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ರೈತರ ಪ್ರೀಮಿಯಂ ಕಟ್ಟಿ ಅರ್ಧದಷ್ಟು ವಿಮಾ ಪರಿಹಾರ ಕಬಳಿಸುವ ಜಾಲ ಸಕ್ರಿಯವಾಗಿದೆ. ಈ ಜಾಲದ ಸಂಪರ್ಕಕ್ಕೆ ಬಾರದ ಹೋಬಳಿ ವ್ಯಾಪ್ತಿಯ ರೈತರಿಗೆ ಸಾಕಷ್ಟು ಅನ್ಯಾಯವಾಗುತ್ತಿದೆಸರ್ಕಾರ ಇದಕ್ಕೆ ಕಡಿವಾಣ ಹಾಕಬೇಕು.ಮರಿಗೌಡ ಪಾಟೀಲ್ ಅಧ್ಯಕ್ಷರು ರೈತ ಸಂಘದ ಹಾನಗಲ್ ತಾಲ್ಲೂಕು ಘಟಕ
ಕೃಷಿ ಇಲಾಖೆಯೇ ನೇಮಿಸಿರುವ ಗ್ರಾಮೀಣ ಪ್ರತಿನಿಧಿಗಳು ವಿಮೆ ವ್ಯಾಪ್ತಿಗೆ ಒಳಪಡುವ ಫಸಲು ಪರಿಶೀಲಿಸಿ ಜಿಪಿಎಸ್ ಮೂಲಕ ನೋಂದಣಿ ಮಾಡುತ್ತಾರೆ. ಈ ವರದಿಗೆ ಆಯಾ ಗ್ರಾಮಗಳ ಗ್ರಾಮ ಲೆಕ್ಕಾಧಿಕಾರಿ ಸಮ್ಮತಿ ನೀಡುವುದು ಕಡ್ಡಾಯ. ಆದರೆ ಜಮೀನಿನಲ್ಲಿ ಇಲ್ಲದ ಬೆಳೆ ನೋಂದಣಿ ಮಾಡಲಾಗುತ್ತಿದೆ. ‘ನಮ್ಮ ತಾಲ್ಲೂಕಿನಲ್ಲಿ ಕಳೆದ ವರ್ಷ ಹತ್ತಿ ಬೆಳೆಗೆ ವಿಮೆ ಮಾಡಿಸಿದ್ದ ಈ ಜಾಲ ಈ ವರ್ಷ ಮೆಕ್ಕೆಜೋಳ ಆಯ್ಕೆ ಮಾಡಿಕೊಂಡಿದೆ. ನಮ್ಮ ಹೋಬಳಿಯ ಅನೇಕ ರೈತರುಈ ವರ್ಷ ಹತ್ತಿ ಬೆಳೆದಿದ್ದಾರೆ. ಆದರೆ ಅವರ ಹೆಸರಲ್ಲಿ ಮೆಕ್ಕೆಜೋಳಕ್ಕೆ ವಿಮೆ ಮಾಡಿಸಿದ್ದಾಗಿ ತಿಳಿದುಬಂದಿದೆ’ ಹಾವೇರಿ ಜಿಲ್ಲೆಯ ಹತ್ತಿಮತ್ತೂರು ಮತ್ತು ಸವಣೂರು ಹೋಬಳಿಯ ರೈತರು ಹೇಳುತ್ತಾರೆ.
ಬೆಳೆ ವಿಮೆ ಪ್ರೀಮಿಯಂ ಭರಿಸುವ ಕಡೆಯ ದಿನ ಆಯಾ ಹೋಬಳಿಗಳ ನೂರಾರು ರೈತರ ಪ್ರೀಮಿಯಂ ಅನ್ನು ಇಂತಿಂಥ ಬೆಳೆ ಬೆಳೆಯಲಾಗಿದೆ ಎಂದು ತೋರಿಸಿ ತುಂಬಲಾಗುತ್ತದೆ. ಕಡೆಯ ದಿನ ಆ ಜಾಲ ಯಾವ ಬೆಳೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಆಯ್ಕೆ ಮಾಡುವುದೋ ಅದೇ ಬೆಳೆಗೆ ಆ ವರ್ಷ ಆ ಹೋಬಳಿ ವ್ಯಾಪ್ತಿಯಲ್ಲಿ ಪರಿಹಾರಕ್ಕೆ ಆಯ್ಕೆಯಾಗುತ್ತದೆ ಎಂಬುದು ಅವರ ವಿವರಣೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.