ADVERTISEMENT

ಸಚಿವ ಮುನಿರತ್ನ ಕಚೇರಿ ಮುಂದೆ ಜನವೋ ಜನ

ಕೋವಿಡ್ ಮರೆತು ಕಿಕ್ಕಿರಿದ ಅಭಿಮಾನಿಗಳ ಪಡೆ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2021, 22:15 IST
Last Updated 19 ಆಗಸ್ಟ್ 2021, 22:15 IST
ಸಚಿವ ಮುನಿರತ್ನ ಕಚೇರಿ ಮುಂದೆ ಜನವೋ ಜನ
ಸಚಿವ ಮುನಿರತ್ನ ಕಚೇರಿ ಮುಂದೆ ಜನವೋ ಜನ   

ಬೆಂಗಳೂರು: ತೋಟಗಾರಿಕೆ ಸಚಿವ ಮುನಿರತ್ನ ಅವರ ವಿಧಾನಸೌಧದ ಕಚೇರಿ ಪೂಜೆ ಮತ್ತು ಸಚಿವರಾಗಿ ಅಧಿಕಾರ ಸ್ವೀಕಾರ ಸಂದರ್ಭದಲ್ಲಿ ಕೋವಿಡ್‌ ನಿಯಮ ಉಲ್ಲಂಘಿಸಿ ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದರು.

ಗುರುವಾರ ಬೆಳಿಗ್ಗೆ ಪೂಜೆ ಇತ್ತು. ಮಧ್ಯಾಹ್ನದವರೆಗೂ ಮುನಿರತ್ನ ಕಚೇರಿ ಮುಂದಿನ ಕಾರಿಡಾರ್‌ನಲ್ಲಿ ನೂರಾರು ಮಂದಿ ಜಮಾಯಿಸಿದ್ದರು. ಹಾರ– ತುರಾಯಿ ತಂದಿದ್ದ ಅಭಿಮಾನಿಗಳು ಮತ್ತು ಬೆಂಬಲಿಗರು ಕಿಂಚಿತ್ತೂ ಅಂತರವಿಲ್ಲದೇ ನಿಂತಿದ್ದರು.

ಮುನಿರತ್ನ ಕಚೇರಿ ಪೂಜೆ ಮುಗಿಸಿ ಸಂಪುಟ ಸಭೆಗೆ ಹೋದಾಗಲೂ ಹೆಚ್ಚಿನವರು ಅವರ ಹಿಂದೆಯೇ ಹೋದರು. ಆದರೆ, ಕಚೇರಿ ಮುಂದೆ 500ರಿಂದ ಸಾವಿರ ಜನ ಕಾರಿಡಾರ್‌ನಲ್ಲಿ ಬಹಳ ಹೊತ್ತು ಸೇರಿದ್ದರು. ಮುನಿರತ್ನ ಅವರ ಜತೆ ಸೆಲ್ಫಿಗಾಗಿ ಜನ ಮುಗಿಬಿದ್ದಿದ್ದು ಕಂಡು ಬಂದಿತು. ಬಹಳಷ್ಟು ಜನ ಮಾಸ್ಕ್‌ ಧರಿಸಿರಲಿಲ್ಲ. ಕೆಲವರ ಕತ್ತಿನಲ್ಲಿ ಮಾಸ್ಕ್‌ ತೂಗಾಡುತ್ತಿತ್ತು.

ADVERTISEMENT

ಕೋವಿಡ್‌ ಎರಡನೇ ಅಲೆ ಇನ್ನು ಮುಗಿದಿಲ್ಲ, ಮೂರನೇ ಅಲೆ ಇಣುಕುತ್ತಿರುವಾಗಲೇ ವಿಧಾನಸೌಧದಲ್ಲಿ ಸಚಿವರ ಪೂಜೆ ಮತ್ತು ಅಧಿಕಾರ ಸ್ವೀಕಾರ ಸಮಾರಂಭಗಳಲ್ಲಿ ಭಾರಿ ಪ್ರಮಾಣದಲ್ಲಿ ಜನ ಸೇರುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಕೆಲವು ದಿನಗಳ ಹಿಂದೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಕಚೇರಿಯಲ್ಲೂ ಇದೇ ರೀತಿ ಜನ ಸೇರಿದ್ದರು.

ವಿಧಾನಸೌಧದಲ್ಲಿ ಕೋವಿಡ್‌ ನಿಯಮ ಉಲ್ಲಂಘನೆಯಾಗುತ್ತಿರುವ ಬಗ್ಗೆ ಸಾರ್ವಜನಿಕವಾಗಿ ಟೀಕೆಗಳು
ಕೇಳಿ ಬಂದಿವೆ. ಇಲ್ಲಿಯೇ ಕೋವಿಡ್‌ ಪಾಲನೆ ಆಗದಿದ್ದರೆ, ಸಾರ್ವಜನಿಕ ಸ್ಥಳಗಳಲ್ಲಿ ಪಾಲನೆ ಸಾಧ್ಯವೇ ಎಂದು ಹೆಸರು ಹೇಳಲು ಬಯಸದ ವಿಧಾನಸೌಧದ ಅಧಿಕಾರಿಯೊಬ್ಬರು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.