ADVERTISEMENT

ಜಾಮೀನಿನ ಮೇಲೆ ಬಿಡುಗಡೆಯಾದ ಸಿಆರ್‌ಪಿಎಫ್‌ ಯೋಧ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2020, 20:09 IST
Last Updated 28 ಏಪ್ರಿಲ್ 2020, 20:09 IST
ಬೆಳಗಾವಿಯ ಹಿಂಡಲಗಾ ಕಾರಾಗೃಹದಿಂದ ಮಂಗಳವಾರ ಸಿಆರ್‌ಪಿಎಫ್‌ ಯೋಧ ಸಚಿನ್‌ ಸಾವಂತ್‌ (ಎಡದಿಂದ 2ನೇಯವರು) ಜಾಮೀನಿನ ಮೇಲೆ ಬಿಡುಗಡೆಯಾದರು.
ಬೆಳಗಾವಿಯ ಹಿಂಡಲಗಾ ಕಾರಾಗೃಹದಿಂದ ಮಂಗಳವಾರ ಸಿಆರ್‌ಪಿಎಫ್‌ ಯೋಧ ಸಚಿನ್‌ ಸಾವಂತ್‌ (ಎಡದಿಂದ 2ನೇಯವರು) ಜಾಮೀನಿನ ಮೇಲೆ ಬಿಡುಗಡೆಯಾದರು.   

ಬೆಳಗಾವಿ: ಲಾಕ್‌ಡೌನ್‌ ಉಲ್ಲಂಘನೆ ಹಾಗೂ ಪೊಲೀಸ್‌ ಕಾನ್‌ಸ್ಟೆಬಲ್‌ಗಳ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಹಿಂಡಲಗಾ ಕಾರಾಗೃಹದಲ್ಲಿ ಬಂಧಿತನಾಗಿದ್ದ ಸಿಆರ್‌ಪಿಎಫ್‌ ಕೋಬ್ರಾ ಕಮಾಂಡೊ ಸಚಿನ್‌ ಸಾವಂತ ಮಂಗಳವಾರ ಜಾಮೀನಿನ ಮೇಲೆ ಬಿಡುಗಡೆಯಾದರು.

ಚಿಕ್ಕೋಡಿಯ 1ನೇ ಜೆಎಂಎಫ್‌ ನ್ಯಾಯಾಲಯವು ಷರತ್ತುಬದ್ಧ ಜಾಮೀನು ನೀಡಿದ್ದು, ಮುಂದಿನ ವಿಚಾರಣೆಯನ್ನು ಮೇ 4ಕ್ಕೆ ನಿಗದಿಗೊಳಿಸಿದೆ ಎಂದು ಅವರ ಪರ ವಾದ ಮಂಡಿಸಿದ್ದ ವಕೀಲ ಬಿ.ಡಿ. ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.

ಜಾಂಬೋಟಿ ಕೇಂದ್ರಕ್ಕೆ:ಸಚಿನ್‌ ಅವರನ್ನು ಕರೆದೊಯ್ಯಲು ಸಿಆರ್‌ಪಿಎಫ್‌ ಯೋಧರು ಹಿಂಡಲಗಾ ಕಾರಾಗೃಹಕ್ಕೆ ಬಂದಿದ್ದರು. ನ್ಯಾಯಾಲಯದ ಆದೇಶದ ಪ್ರತಿಗಳನ್ನು ನೀಡಿ, ಸಚಿನ್‌ ಅವರನ್ನು ತಮ್ಮೊಂದಿಗೆ ಜಾಂಬೋಟಿಯ ತರಬೇತಿ ಕೇಂದ್ರಕ್ಕೆ ಕರೆದೊಯ್ದರು.

ADVERTISEMENT

‘ಸಿಆರ್‌ಪಿಎಫ್‌ ನಿಯಮಾವಳಿಗಳ ಪ್ರಕಾರ, ಮುಂದಿನ ಕ್ರಮಕೈಗೊಳ್ಳಲಾಗುವುದು’ ಎಂದು ಡೆಪ್ಯುಟಿ ಕಮಾಂಡಂಟ್‌ (ತರಬೇತಿ) ರಘುವಂಶ ಉಪಾಧ್ಯಾಯ ಹೇಳಿದರು.

ಪ್ರಕರಣದ ಹಿನ್ನೆಲೆ:ಸಿಆರ್‌ಪಿಎಫ್‌ನ ಕೋಬ್ರಾ ಪಡೆಯಲ್ಲಿ ಕಮಾಂಡರ್‌ ಆಗಿರುವ ಸಚಿನ್‌, ರಜೆಯ ಮೇಲೆ ತಮ್ಮೂರು ಯಕ್ಸಂಬಾಗೆ ಬಂದಿದ್ದರು. ಕಳೆದ ವಾರ ಏ.23ರಂದು ಲಾಕ್‌ಡೌನ್‌ ವೇಳೆ ತಮ್ಮ ಮನೆಯ ಮುಂದೆ ಬೈಕ್‌ ತೊಳೆಯುತ್ತಿದ್ದರು. ಆಗ ಅವರು ಮುಖಕ್ಕೆ ಮಾಸ್ಕ್‌ ಧರಿಸಿರಲಿಲ್ಲ. ಇದೇ ವೇಳೆ, ಅಲ್ಲಿಗೆ ಬಂದ ಇಬ್ಬರು ಪೊಲೀಸ್‌ ಕಾನ್‌ಸ್ಟೆಬಲ್‌ಗಳ ಜೊತೆ ವಾಗ್ವಾದ ನಡೆಯಿತು.

ತಳ್ಳಾಟ, ನೂಕಾಟ ನಡೆಯಿತು. ಒಬ್ಬರಿಗೊಬ್ಬರ ಮೇಲೆ ಹಲ್ಲೆ ನಡೆಸಿದ್ದರು. ನಂತರ ಸಚಿನ್‌ ಅವರಿಗೆ ಕೈಗೆ ಕೋಳ ತೊಡಿಸಿದ ಪೊಲೀಸರು ಠಾಣೆಗೆ ಕರೆದೊಯ್ಯದಿದ್ದರು. ಈ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿ, ತೀವ್ರ ಚರ್ಚೆಗೆ ಗ್ರಾಸವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.