ADVERTISEMENT

ಕಂಬಳಿ- ಕುರುಬ ಚರ್ಚೆ: ಕಿಡಿ ಹೊತ್ತಿಸಿದ ಸಿ.ಟಿ.ರವಿ ಹೇಳಿಕೆ, ವ್ಯಾಪಕ ಆಕ್ರೋಶ

ಯಾರಿಗೆ ಹುಟ್ಟಿದ್ದು ಹೇಳಿ ಎಂದು ಸಿದ್ದರಾಮಯ್ಯಗೆ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2021, 13:57 IST
Last Updated 27 ಅಕ್ಟೋಬರ್ 2021, 13:57 IST
ಸಿ.ಟಿ.ರವಿ - ಸಿದ್ದರಾಮಯ್ಯ
ಸಿ.ಟಿ.ರವಿ - ಸಿದ್ದರಾಮಯ್ಯ   

ಬೆಂಗಳೂರು: ಕಳೆದ ಎರಡು ದಿನಗಳಿಂದ ತಾರಕ್ಕೇರಿರುವ ‘ಕಂಬಳಿ’ ಮತ್ತು ‘ಕುರುಬ’ ಚರ್ಚೆ ಬುಧವಾರವೂ ಮುಂದುವರಿದಿದ್ದು, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಫೇಸ್‌ಬುಕ್‌ನಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕುರಿತು ನೀಡಿರುವ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ರವಿ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಸಿದ್ದರಾಮಯ್ಯ ಅವರು ಮೌಲ್ವಿಯೊಬ್ಬರ ಪಕ್ಕದಲ್ಲಿ ಮುಸ್ಲಿಂ ಟೋಪಿ ಧರಿಸಿ ಕುಳಿತಿರುವ ಚಿತ್ರವನ್ನು ಟ್ಯಾಗ್‌ ಮಾಡಿ, ‘ಕಂಬಳಿ ಹಾಕಲು ಕುರುಬ ಜಾತಿಯವರೇ ಆಗಬೇಕು ಎನ್ನುವ ನಿಮ್ಮ ವಾದದ ಪ್ರಕಾರ ಈ ಟೋಪಿ ಹಾಕಲು ಯಾರಿಗೆ ಹುಟ್ಟಿರಬೇಕು ಮಾಜಿ ಮುಖ್ಯಮಂತ್ರಿಗಳೇ’ ಎಂದು ಪ್ರಶ್ನಿಸಿದ್ದಾರೆ.

‘ಕುಲ ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇದಾರೂ ಬಲ್ಲಿರಾ ಬಲ್ಲಿರಾ...’ ಎಂಬ ಕನಕದಾಸರ ಈ ಮಾತುಗಳನ್ನು ಎಂದೋ ಮರೆತುಬಿಟ್ಟು ಕುಲಗಳನ್ನು ಒಡೆದು, ಸಮಾಜವನ್ನು ಅಸ್ಥಿರಗೊಳಿಸಿ, ತಮ್ಮ ಬೇಳೆ ಬೇಯಿಸಿಕೊಳ್ಳುವುದೇ ರಾಜಕೀಯ ಎಂದು ಭಾವಿಸಿರುವುದು ದುರಂತ ಎಂದು ರವಿ ಹೇಳಿದ್ದಾರೆ.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿರುವ ಕೆಲವು ನೆಟ್ಟಿಗರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಯಡಿಯೂರಪ್ಪ, ಜಗದೀಶ್‌ ಶೆಟ್ಟರ್‌, ಬಸನಗೌಡ ಪಾಟೀಲ ಯತ್ನಾಳ, ಕೇಂದ್ರ ಸಚಿವ ರಾಜನಾಥ ಸಿಂಗ್‌ ಅವರು ಮುಸ್ಲಿಂ ಟೋಪಿ ಧರಿಸಿರುವ ಚಿತ್ರಗಳನ್ನು ಟ್ಯಾಗ್‌ ಮಾಡಿ, ‘ಇವರು ಯಾರಿಗೆ ಹುಟ್ಟಿದ್ದು ಹೇಳಿ’ ಎಂದು ರವಿಯನ್ನು ಪ್ರಶ್ನಿಸಿದ್ದಾರೆ.

ಕೀಳು ಮಟ್ಟದ ಪದವೇಕೆ:?

‘ರೀ ಸಿ.ಟಿ.ರವಿಯವರೇ, ನಿಮ್ಮ ರಾಜಕೀಯ ಏನೇ ಇರಲಿ, ನಿಮ್ಮ ಪದ ಬಳಕೆ ಇಷ್ಟೊಂದು ಕೀಳುಮಟ್ಟವೇ? ನಿಮ್ಮಂತಹವರು ರಾಜಕಾರಣಕ್ಕೆ ಕಪ್ಪು ಚುಕ್ಕೆ. ನಿಮ್ಮ ನಡವಳಿಕೆಗೆ ನಾಚಿಕೆಯಾಬೇಕು’ ಎಂದು ಕುಮಾರಸ್ವಾಮಿ ಎಂಬುವವರು ಕಿಡಿಕಾರಿದ್ದಾರೆ.

‘ರಾಜಕೀಯ ಮತ್ತು ಸೈದ್ಧಾಂತಿಕ ಭಿನ್ನಾಭಿಪ್ರಾಯ ಏನೇ ಇರಲಿ ಸಂಸ್ಕಾರಯುತ ಬಾಂಧವ್ಯ ಈ ರೀತಿ ಇರಲಿ’ ಎಂದು ಸಚಿವ ಕೋಟ ಶ್ರೀನಿವಾಸಪೂಜಾರಿ ಮತ್ತು ಕಾಂಗ್ರೆಸ್‌ ನಾಯಕ ಜನಾರ್ದನ ಪೂಜಾರಿ ಅವರು ಜತೆಗಿರುವ ಚಿತ್ರವೊಂದನ್ನು ಶ್ರೀಶೈಲ ಕುಡಗಿ ಎಂಬುವರು ಟ್ಯಾಗ್‌ ಮಾಡಿದ್ದಾರೆ.

‘ನಾನೂ ಒಬ್ಬ ಒಬ್ಬ ಕಟ್ಟರ್‌ ಹಿಂದೂ ಮತ್ತು ಬಿಜೆಪಿ ಕಾರ್ಯಕರ್ತ. ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ವಿರೋಧಿಸಿ, ಆದರೆ ಓರ್ವ ಹಿರಿಯ ಮತ್ತು ಮಾಜಿ ಮುಖ್ಯಮಂತ್ರಿಗೆ ಯಾರಿಗೆ ಹುಟ್ಟಿರಬೇಕು ಎಂದು ನೀವು ಕೇಳುವುದು ಸಭ್ಯತೆಯ ಎಲ್ಲೆಯನ್ನು ಮೀರಿದಂತೆ ಕಾಣುತ್ತಿದೆ’ ಎಂದಿದ್ದಾರೆ.

‘ರಾಜಕೀಯವಾಗಿ ಎಷ್ಟು ಬೇಕಾದರೂ ವಿರೋಧಿಸಿ ಆದರೆ ಯಾರಿಗೆ ಹುಟ್ಟಿರಬೇಕು ಎಂಬ ಪದ ಬಳಕೆ ಸರಿಯಲ್ಲ’ ಎಂದು ಮಣಿ ಹೆಮ್ಮಿಗೆ ಎಂಬುವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ನಿಮ್ಮಂತಹವರೆಲ್ಲ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಂತ್ರಿಯಾಗಿದ್ದರು ಎಂಬುದೇ ರಾಜ್ಯದ ದುರಂತ’ ಎಂದು ಪ್ರಶಾಂತ್‌ ಮರೂರು ಎಂಬುವರ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.