ADVERTISEMENT

ಪಾಕಿಸ್ತಾನದ ಪ್ರವಾಹಕ್ಕೆ ಜಲಧಾರೆ ಕಾರಣವೇ?: ಸಿ.ಟಿ.ರವಿ ವ್ಯಂಗ್ಯ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2022, 16:05 IST
Last Updated 4 ಸೆಪ್ಟೆಂಬರ್ 2022, 16:05 IST
   

ಬೆಂಗಳೂರು: ‘ಜೆಡಿಎಸ್‌ ನಡೆಸಿದ ‘ಜಲಧಾರೆ’ ಯಾತ್ರೆಯಿಂದಾಗಿಯೇ ಮಳೆಯಾಯಿತು ಎಂದು ಆ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಹೇಳಿಕೊಂಡಿದ್ದಾರೆ. ಪಾಕಿಸ್ತಾನದಲ್ಲಿ ಭಾರಿ ಮಳೆಯಿಂದ ಸೃಷ್ಟಿಯಾಗಿರುವ ಪ್ರವಾಹದ ಸ್ಥಿತಿಗೂ ಜೆಡಿಎಸ್‌ ಜಲಧಾರೆ ಕಾರಣವೇ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವ್ಯಂಗ್ಯವಾಡಿದ್ದಾರೆ.

ಬೆಂಗಳೂರು, ರಾಮನಗರ ಮತ್ತಿತರ ಕಡೆಗಳಲ್ಲಿ ಅತಿವೃಷ್ಟಿಯಿಂದ ಆಗಿರುವ ಹಾನಿಗೆ ಪರಿಹಾರ ಒದಗಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂಬ ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ರವಿ, ‘ಜಲಧಾರೆಯಿಂದಲೇ ಮಳೆಯಾಗಿದೆ ಎಂದು ಅವರು ಹೇಳಿದ್ದರು. ಈಗ ಅತಿವೃಷ್ಟಿಯಾಗಿದೆ. ಅದಕ್ಕೂ ಅವರ ಯಾತ್ರೆ ಕಾರಣವೆ? ರಾಮನಗರ ಜಿಲ್ಲೆ ಮಳೆಯಿಂದ ಮುಳುಗಿರುವುದು, ಪಾಕಿಸ್ತಾನದ ಪ್ರವಾಹಕ್ಕೂ ಅವರೇ ಕಾರಣವಾ’ ಎಂದು ಕೇಳಿದರು.

‘ಕೆಂಪೇಗೌಡರು ಕಟ್ಟಿದ ಬೆಂಗಳೂರಿನ ಹೆಸರನ್ನು ಹಾಳು ಮಾಡಲು ಯಾರಿಗೂ ಸಾಧ್ಯವಿಲ್ಲ. ಮೂರು ದಿನಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿ ಸಾಧ್ಯವೆ? ಮೂರು ವರ್ಷದಲ್ಲಿ ಆಗುವುದೆ? ರಾಜಕಾಲುವೆಗಳನ್ನು ಒತ್ತುವರಿ ಮಾಡಿ ಕಟ್ಟಡ ನಿರ್ಮಿಸಿದ್ದು ಬಿಜೆಪಿ ಸರ್ಕಾರದ ಅವಧಿಯಲ್ಲೇ?’ ಎಂದು ಪ್ರಶ್ನಿಸಿದರು.

ADVERTISEMENT

‘ಹತ್ತಿಪ್ಪತ್ತು ವರ್ಷಗಳಿಂದಲೂ ಇದು ನಡೆದಿದೆ. ಕೆರೆಗಳನ್ನು ನುಂಗಿದ್ದು ಯಾರು? ಅಲ್ಲಿ ಬಡಾವಣೆ ನಿರ್ಮಿಸಿದ್ದು ಯಾರು? ಎಂಬ ಪ್ರಶ್ನೆಗಳಿಗೆ ಅವರೆಲ್ಲರೂ ಉತ್ತರಿಸಬೇಕು’ ಎಂದರು.

ಸಮಾಧಾನದಿಂದ ಇರಬೇಕು:ಶಾಸಕ ಅರವಿಂದ ಲಿಂಬಾವಳಿ ಅವರು ಮಹಿಳೆಯೊಬ್ಬರ ವಿರುದ್ಧ ಕೀಳುಮಟ್ಟದಲ್ಲಿ ಮಾತನಾಡಿರುವ ಕುರಿತು ಪ್ರತಿಕ್ರಿಯಿಸಿದ ರವಿ, ‘ಸಾರ್ವಜನಿಕ ಜೀವನದಲ್ಲಿರುವ ನಾವೆಲ್ಲರೂ ಸಮಾಧಾನದಿಂದ ಇರಬೇಕು. ಸಮಾಜ ಒಪ್ಪುವ ರೀತಿ ಇರಬೇಕು. ಇಲ್ಲವಾದರೆ ವೈಯಕ್ತಿಕವಾಗಿ ಮತ್ತು ಪಕ್ಷಕ್ಕೆ ನಷ್ಟವಾಗುತ್ತದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.