ADVERTISEMENT

ಪೊಲೀಸರ ನಡವಳಿಕೆ ಕುರಿತು ನ್ಯಾಯಾಂಗ ತನಿಖೆ ಆಗಲಿ: ಸಿ.ಟಿ. ರವಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2024, 9:09 IST
Last Updated 21 ಡಿಸೆಂಬರ್ 2024, 9:09 IST
<div class="paragraphs"><p>ಸಿ.ಟಿ. ರವಿ</p></div>

ಸಿ.ಟಿ. ರವಿ

   

ಬೆಂಗಳೂರು: ʼಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರನ್ನು ನಿಂದಿಸಿದ್ದೇನೆ ಎಂಬ ಆರೋಪದಡಿ ನನ್ನನ್ನು ಬಂಧನ ಮಾಡಿರುವುದು ಮತ್ತು ನಂತರದಲ್ಲಿ ನಿಗೂಢವಾಗಿ ನಡೆದುಕೊಂಡಿರುವ ಪೊಲೀಸರ ನಡವಳಿಕೆ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕು’ ಎಂದು ವಿಧಾನ ಪರಿಷತ್‌ನ ಬಿಜೆಪಿ ಸದಸ್ಯ ಸಿ.ಟಿ. ರವಿ ಆಗ್ರಹಿಸಿದರು.

ಹೈಕೋರ್ಟ್‌ ಆದೇಶದಂತೆ ಶುಕ್ರವಾರ ರಾತ್ರಿ ಪೊಲೀಸರ ಬಂಧನದಿಂದ ಬಿಡುಗಡೆಯಾದ ಬಳಿಕ ಬೆಂಗಳೂರಿಗೆ ಬಂದಿದ್ದ ಅವರು ಬಿಜೆಪಿ ರಾಜ್ಯ ಘಟಕದ ಕಚೇರಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ADVERTISEMENT

ʼಸದನದ ಒಳಗೆ ನಡೆದಿರುವ ಘಟನೆಗೆ ಸಂಬಂಧಿಸಿದಂತೆ ಸಭಾಪತಿಯವರ ಅನುಮತಿ ಇಲ್ಲದೇ ಪ್ರಕರಣ ದಾಖಲಿಸಿರುವುದು ಮತ್ತು ಬಂಧಿಸಿರುವುದು ಅಪರಾಧ. ಬಂಧನದ ಬಳಿಕ 15 ಗಂಟೆಗಳ ಕಾಲ ಪೊಲೀಸರು ನನ್ನನ್ನು ಸುತ್ತಾಡಿಸಿದರು. ಆ ಸಂದರ್ಭದಲ್ಲಿ ಅವರು ನಿಗೂಢವಾಗಿ ನಡೆದುಕೊಂಡರು. ಪ್ರಭಾವಿ ವ್ಯಕ್ತಿಗಳು ಪೊಲೀಸರಿಗೆ ಕರೆ ಮಾಡಿ ನಿರ್ದೇಶನ ನೀಡುತ್ತಿದ್ದರು. ನನ್ನ ಪ್ರಾಣಕ್ಕೆ ಅಪಾಯ ಉಂಟಾಗಬಹುದು ಎಂಬ ಅನುಮಾನ ಮೂಡಿತ್ತುʼ ಎಂದರು.

‘ಈ ಪ್ರಕರಣದಲ್ಲಿ ಪೊಲೀಸರ ಕಾರ್ಯವೈಖರಿ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕು. ಪೊಲೀಸರ ಮೇಲೆ ಪ್ರಭಾವ ಬೀರಿದ್ದ ವ್ಯಕ್ತಿಗಳನ್ನು ಪತ್ತೆಹಚ್ಚಿ, ಅವರ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿದರು.

ʼಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರದಿಂದ ಈ ರೀತಿಯ ವರ್ತನೆಯನ್ನು ನಾನು ನಿರೀಕ್ಷೆ ಮಾಡಿರಲಿಲ್ಲ. ಗೃಹ ಇಲಾಖೆ ಯಾರ ಹಿಡಿತದಲ್ಲಿದೆ ಎಂಬ ಅನುಮಾನ ಮೂಡುತ್ತಿದೆ. ಈ ಬಗ್ಗೆ ಗೃಹ ಸಚಿವ ಜಿ. ಪರಮೇಶ್ವರ ಅವರು ಉತ್ತರ ನೀಡಬೇಕುʼ ಎಂದು ಆಗ್ರಹಿಸಿದರು.

ʼನನ್ನ ದೂರವಾಣಿ ಕರೆಗಳನ್ನು ಕದ್ದಾಲಿಕೆ ಮಾಡುತ್ತಿರುವ ಅನುಮಾನ ಇದೆ. ಈ ಬಗ್ಗೆಯೂ ತನಿಖೆ ನಡೆಸಬೇಕುʼ ಎಂದು ರವಿ ಒತ್ತಾಯಿಸಿದರು.

ʼಬೆಳಗಾವಿ ಲಕ್ಷ್ಮೀ ಅವರ ಪ್ರದೇಶ. ಅಲ್ಲಿಂದ ರವಿ ಬದುಕಿ ಬಂದದ್ದೇ ಅದೃಷ್ಟ ಎಂಬಂತೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ. ಬೆಳಗಾವಿ ಮತ್ತು ಕನಕಪುರಗಳು ನಾನಾ ರಿಪಬ್ಲಿಕ್‌ಗಳಾʼ ಎಂದು ಪ್ರಶ್ನಿಸಿದರು.

ʼನನ್ನ ರಕ್ಷಣೆಯ ಹೊಣೆ ಸಂಪೂರ್ಣವಾಗಿ ಸರ್ಕಾರಕ್ಕೆ ಸೇರಿದೆ. ನಮ್ಮ ಸಂಸ್ಕೃತಿಯ ಬಗ್ಗೆ ಶಿವಕುಮಾರ್‌ ಮಾತನಾಡಿದ್ದಾರೆ. ನಮ್ಮ ಸಂಸ್ಕೃತಿ, ಶಿವಕುಮಾರ್‌ ಸಂಸ್ಕೃತಿ ಎರಡೂ ಜನರಿಗೆ ಗೊತ್ತು. ಜನರೇ ನಿರ್ಧಾರ ಮಾಡುತ್ತಾರೆ. ಆ ಬಗ್ಗೆ ಹೆಚ್ಚೇನೂ ಹೇಳುವುದಿಲ್ಲʼ ಎಂದರು.

ಸಿಬಿಐ ತನಿಖೆಗೆ ವಹಿಸಲಿ: ಆರ್. ಅಶೋಕ

ಬೆಂಗಳೂರು: ನಕ್ಸಲರಿಂದ ಬೆದರಿಕೆ ಎದುರಿಸುತ್ತಿರುವ ವಿಧಾನ ಪರಿಷತ್‌ ಸದಸ್ಯ ಸಿ.ಟಿ. ರವಿ ಅವರನ್ನು ಪೊಲೀಸರು ಯಾವ ಉದ್ದೇಶಕ್ಕಾಗಿ ರಾತ್ರಿ ವೇಳೆ ಕಬ್ಬಿನ ಗದ್ದೆಗಳಲ್ಲಿ ಓಡಾಡಿಸಿದ್ದರು? ಪೊಲೀಸರ ನಡವಳಿಕೆ ಕುರಿತು ಸಿಬಿಐ ತನಿಖೆಗೆ ಆದೇಶಿಸಬೇಕು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್‌. ಅಶೋಕ ಆಗ್ರಹಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸುರಕ್ಷತಾ ದೃಷ್ಟಿಯಿಂದ ರವಿ ಅವರನ್ನು ಕಬ್ಬಿನ ಗದ್ದೆಗೆ ಕರೆದೊಯ್ಯಲಾಗಿತ್ತು ಎಂದು ಪೊಲೀಸರು ಹೇಳುತ್ತಿದ್ದಾರೆ. ನಕ್ಸಲರು ಬಂದು ಗುಂಡು ಹೊಡೆಯಲಿ ಎಂದು ಕರೆದೊಯ್ದಿದ್ದರೆ? ಸುರಕ್ಷತೆಗಾಗಿ ಮುಖ್ಯಮಂತ್ರಿ ಮತ್ತು ಮಂತ್ರಿಗಳನ್ನೂ ಹೀಗೆ ಕಬ್ಬಿನ ಗದ್ದೆ, ಕಲ್ಲು ಕ್ವಾರಿಗಳಿಗೆ ಕರೆದುಕೊಂಡು ಹೋಗುತ್ತಾರಾ’ ಎಂದು ಪ್ರಶ್ನಿಸಿದರು.

‘ಪ್ರಕರಣ ಮುಂದುವರಿಕೆ ನಿರರ್ಥಕ’

ಬೆಳಗಾವಿ: ‘ಸಿ.ಟಿ.ರವಿ ಅವಾಚ್ಯ ಪದ ಬಳಕೆ ಮಾಡಿದ ಘಟನೆ ಆಗಿ ಹೋಗಿದೆ. ಮತ್ತೆ ಮುಂದುವರಿಸುವುದರಲ್ಲಿ ಅರ್ಥವಿಲ್ಲ’ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು.

‘ದೇಶದಲ್ಲಿ ಇಂಥ ಘಟನೆಗಳು ಹೊಸದಲ್ಲ. ಸಂಸತ್ತು, ವಿಧಾನಸಭೆಯಲ್ಲಿ ನಡೆದಿವೆ. ಕ್ಷಮೆ ಕೇಳಿದ ಬಳಿಕ ಮುಗಿದು ಹೋಗಿವೆ. ಈಗಲೂ ಮುಗಿಸುವುದು ಒಳ್ಳೆಯದು. ಸಾರ್ವಜನಿಕವಾಗಿ ಈ ಪ್ರಕರಣ ಮುಂದುವರಿಸುವುದು ಅನವಶ್ಯಕ’ ಎಂದು ಅವರು ಶನಿವಾರ ಸುದ್ದಿಗಾರರಿಗೆ ತಿಳಿಸಿದರು.

‘ಯಾರ ನಿರ್ದೇಶನದ ಮೇರೆಗೆ ಠಾಣೆಯಿಂದ ಠಾಣೆಗೆ ಸುತ್ತಾಡಿಸಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ರವಿಗೆ ತೊಂದರೆ ಆಗದಿರಲಿ ಎಂಬ ಕಾರಣಕ್ಕೆ ಇರಬಹುದು. ರಾತ್ರಿಯೇ ಕೋರ್ಟ್‌ಗೆ ಹಾಜರು ಪಡಿಸಲು ನಾನು ಪೊಲೀಸರಿಗೆ ಹೇಳಿದ್ದೆ. ಬೆಳಗಾವಿ ‌ಪೊಲೀಸರು ಅಷ್ಟು ಮಾಡಿದ್ದರೆ ಇಷ್ಟೆಲ್ಲ ಆಗುತ್ತಿರಲಿಲ್ಲ’ ಎಂದು ಹೇಳಿದರು.

ಬಂಧನ ಕಾನೂನು ಬಾಹಿರ: ಜಗದೀಶ ಶೆಟ್ಟರ್‌

ಹುಬ್ಬಳ್ಳಿ: ‘ಅಧಿವೇಶನದ ಸಂದರ್ಭದಲ್ಲಿ ಸಭಾಪತಿ ಅನುಮತಿಯಿಲ್ಲದೆ ಶಾಸಕರನ್ನು ಬಂಧಿಸುವುದು ಕಾನೂನು ಬಾಹಿರ. ಪೊಲೀಸರ ಮೇಲೆ ಒತ್ತಡ ಹಾಕಿ ಕಾಂಗ್ರೆಸ್‌ ಹೈಡ್ರಾಮಾ ಸೃಷ್ಟಿಸಿದೆ’ ಎಂದು ಸಂಸದ ಜಗದೀಶ ಶೆಟ್ಟರ್‌ ಆರೋಪಿಸಿದರು.

‘ಎಫ್‌ಐಆರ್‌ ದಾಖಲಾಗಿದೆ ಎಂದ ಮಾತ್ರಕ್ಕೆ ಬಂಧಿಸಲು ಆಗದು. ತನಿಖಾಧಿಕಾರಿ ಪ್ರಾಥಮಿಕ ತನಿಖೆ ಕೈಗೊಂಡು ಬಂಧನ ಪ್ರಕ್ರಿಯೆ ನಡೆಸಬೇಕು. ಸದನದಲ್ಲಿ ಯಾವುದೇ ಸಾಕ್ಷ್ಯಗಳು ಇಲ್ಲದಿದ್ದರೂ ಸಿ.ಟಿ. ರವಿ ಅವರನ್ನು ಬಂಧಿಸಿದ್ದು ಖಂಡನೀಯ. ತಕ್ಷಣ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್‌ ಕ್ಷಮೆಯಾಚಿಸಬೇಕು’ ಎಂದು ಅವರು ಶನಿವಾರ ಸುದ್ದಿಗಾರರಿಗೆ ತಿಳಿಸಿದರು.

‘ಸದನದಲ್ಲಿ ದಾಖಲೆಗಳಿಲ್ಲ. ಕ್ಯಾಮೆರಾಗಳನ್ನು ಬಂದ್‌ ಮಾಡಲಾಗಿದೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ. ರವಿ ಅವರು ಅಸಂಸದೀಯ ಪದ ಬಳಕೆ ಮಾಡಿದ್ದರೆ, ಸಭಾಪತಿಯವರನ್ನು ಒತ್ತಾಯ ಮಾಡಬೇಕಿತ್ತು. ಕಡತದಿಂದ ತೆಗೆಯಲು ಸೂಚಿಸಬಹುದಿತ್ತು. ಅಲ್ಲಿಯೇ ಕ್ಷಮಾಪಣೆ ಕೇಳಿಸಬಹುದಿತ್ತು. ರಾಜಕೀಯ ಲಾಭಕ್ಕಾಗಿ, ಜನರ ಮೇಲೆ ಪ್ರಭಾವ ಬೀರಲು, ದಬ್ಬಾಳಿಕೆ ಮಾಡಲು ಕಾಂಗ್ರೆಸ್‌ ಪೊಲೀಸರ ಮೇಲೆ ಒತ್ತಡ ಹಾಕಿ ಕಾನೂನು ಬಾಹಿರ ಕೆಲಸ ಮಾಡಿದೆ’ ಎಂದರು.

‘ಪೊಲೀಸರ ನಡವಳಿಕೆ ಅಮಾನವೀಯ’

ಬೆಂಗಳೂರು: ‘ವಿಧಾನ ಪರಿಷತ್‌ನಲ್ಲಿ ನಡೆದಿದೆ ಎನ್ನಲಾದ ಘಟನೆ ಕುರಿತು ಕಾನೂನು ಪ್ರಕಾರ ತನಿಖೆ ನಡೆಸಬೇಕಾದ ಪೊಲೀಸರೇ ಪರಿಷತ್‌ ಸದಸ್ಯ ಸಿ.ಟಿ. ರವಿ ಅವರನ್ನು ಅಮಾನವೀಯವಾಗಿ ನಡೆಸಿಕೊಂಡಿದ್ದಾರೆ’ ಎಂದು ಬಿಜೆಪಿ ಸಂಸದ ಬಸವರಾಜ ಬೊಮ್ಮಾಯಿ ದೂರಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ತಾವು ಅವಾಚ್ಯ ಶಬ್ದ ಬಳಸಿಲ್ಲ ಎಂದು ರವಿ ಸ್ಪಷ್ಟನೆ ನೀಡಿದ್ದಾರೆ. ಪ್ರಕರಣದ ಕುರಿತು ತನಿಖೆ ನಡೆಸುವುದು ಬೇಡ ಎನ್ನುವುದಿಲ್ಲ. ಸತ್ಯಶೋಧನೆ, ತನಿಖೆ ಆಗದೇ ಅಂತಿಮ ನಿರ್ಧಾರಕ್ಕೆ ಬರುವುದು ತಪ್ಪು’ ಎಂದರು.

‘ಹಿಂದೆ ವಿಧಾನಮಂಡಲದಲ್ಲಿ ಇಂತಹ ಪ್ರಕರಣಗಳು ನಡೆದಾಗ ಏಕಾಏಕಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸುತ್ತಿರಲಿಲ್ಲ. ವಿಧಾನ ಮಂಡಲ ಸಮಿತಿ ರಚಿಸಿ, ವರದಿ ಪಡೆಯಲಾಗು ತ್ತಿತ್ತು. ಸಮಿತಿಯ ವರದಿ ಆಧಾರದಲ್ಲಿ ಕ್ರಮ ಜರುಗಿಸಲಾಗುತ್ತಿತ್ತು’ ಎಂದರು.

ಕಾಂಗ್ರೆಸ್‌ ಕಾರ್ಯಕರ್ತರಿಂದ ಪ್ರತಿಭಟನೆ

ಬೆಳಗಾವಿ: ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರಿಗೆ ಅವಾಚ್ಯ ಪದದಿಂದ ನಿಂದಿಸಿದ ವಿಧಾನ ಪರಿಷತ್‌ ಸದಸ್ಯ ಸಿ.ಟಿ.ರವಿ ಅವರನ್ನು ಅಮಾನತು ಮಾಡುವಂತೆ ಆಗ್ರಹಿಸಿ, ಲಕ್ಷ್ಮೀ ಹೆಬ್ಬಾಳಕರ ಅವರ ಅಪಾರ ಸಂಖ್ಯೆಯ ಅಭಿಮಾನಿಗಳು ಶನಿವಾರ ಪ್ರತಿಭಟನೆ ನಡೆಸಿದರು. ರವಿ ಅವರ ಅಣಕು ಶವಯಾತ್ರೆ ಮಾಡಿ, ಪ್ರತಿಕೃತಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ಇಲ್ಲಿನ ಸಿಪಿ.ಇಡಿ ಮೈದಾನದಲ್ಲಿ ಜಮಾವಣೆಗೊಂಡ ಅಭಿಮಾನಿಗಳು ಜಿಲ್ಲಾಧಿಕಾರಿ ಕಚೇರಿವರೆಗೂ (2 ಕಿ.ಮೀ) ಅಣಕು ಶವಯಾತ್ರೆ ಮಾಡಿದರು. ಮಾರ್ಗದುದ್ದಕ್ಕೂ ಶೋಕಗೀತೆ ಹಾಡಿ, ಹಲಗೆ ನಾದಕ್ಕೆ ಹೆಜ್ಜೆ ಹಾಕಿದರು. ಮಹಿಳೆಯರು ಬಾಯಿ ಬಡಿದುಕೊಂಡರು. ರಾಣಿ ಚನ್ನಮ್ಮ ವೃತ್ತದಲ್ಲಿ ಒಂದು ಗಂಟೆ ಮಾನವ ಸರಪಳಿ ನಿರ್ಮಿಸಿ ಸಂಚಾರ ಬಂದ್‌ ಮಾಡಿದರು. ಅಲ್ಲಿಯೇ ಪ್ರತಿಕೃತಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

‘ಲಕ್ಷ್ಮೀ ಹೆಬ್ಬಾಳಕರ ಅವರಿಗೆ ‘ಆ’ ಕೆಟ್ಟ ಪದ ಬಳಿಸಿರುವ ಸಿ.ಟಿ.ರವಿ ಭಾರತ ಮಾತೆಗೆ ಅವಮಾನಿಸಿದ್ದಾರೆ. ಇದು ಬಿಜೆಪಿಯ ಸಂಸ್ಕೃತಿಯೇ ಎಂದು ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟ ಪಡಿಸಬೇಕು. ಇಲ್ಲದಿದ್ದರೆ, ತಕ್ಷಣ ಆರೋಪಿಯನ್ನು ಪಕ್ಷದಿಂದ ಹೊರಹಾಕಬೇಕು. ಪರಿಷತ್‌ನಿಂದಲೂ ಅಮಾನತು ಮಾಡಬೇಕು. ಎರಡನ್ನೂ ಮಾಡದಿದ್ದರೆ ‘ಭಾರತ ಮಾತೆಗೆ ಜೈ’ ಎನ್ನುವ ಹಕ್ಕು ನಿಮಗೆ ಇಲ್ಲ’ ಎಂದು ಪ್ರತಿಭಟನಕಾರರು ಹೇಳಿದರು.

‘ಆರೋಪಿಗೆ ಜಾಮೀನು ಸಿಕ್ಕ ನಂತರ ಬಿಜೆಪಿಯ ನಾಯಕರು ವಿಜಯೋತ್ಸವ ಆಚರಿಸಿದ್ದಾರೆ. ಮಹಿಳೆ ಯರೂ ಅದರಲ್ಲಿ ಪಾಲ್ಗೊಂಡಿದ್ದು ದುರಂತ. ‘ಆ’ ಪದ ಬಳಕೆ ಸರಿ ಎಂದು ಬಜೆಪಿಯ ಎಲ್ಲ ಮಹಿಳಾ ಸದಸ್ಯರು ಒಪ್ಪಿಕೊಳ್ಳುತ್ತೀರಾ? ಒಪ್ಪದಿದ್ದರೆ, ರವಿ ಅವರನ್ನು ಪಕ್ಷದಿಂದ ಹೊರಹಾಕಿ. ಪಕ್ಷಾತೀತವಾಗಿ ಘಟನೆ ಖಂಡಿಸಿ. ಇಲ್ಲದಿದ್ದರೆ ರಾಷ್ಟ್ರಮಟ್ಟದಲ್ಲಿ ಹೆಣ್ಣುಮಕ್ಕಳ ಗೌರವ ಮಣ್ಣುಪಾಲಾಗುತ್ತದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.