ADVERTISEMENT

ಮೋದಿ ನಿಂದನೆಗೆ ಕಾಂಗ್ರೆಸ್‌ನಿಂದ ದಲಿತ ಅಸ್ತ್ರ್ರ: ಸಿ.ಟಿ.ರವಿ ಆರೋಪ

ಕೇಂದ್ರ ಅನುದಾನ ಶ್ವೇತಪತ್ರ ಬಿಡುಗಡೆಗೆ ಬಿಜೆಪಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2024, 15:24 IST
Last Updated 26 ಮಾರ್ಚ್ 2024, 15:24 IST
ಸಿ.ಟಿ. ರವಿ
ಸಿ.ಟಿ. ರವಿ   

ಬೆಂಗಳೂರು: ಪ್ರಧಾನಿ ನರೇಂದ್ರಮೋದಿ ಅವರನ್ನು ನಿಂದಿಸಲು ಕಾಂಗ್ರೆಸ್‌ ಪಕ್ಷ ದಲಿತ ನಾಯಕರನ್ನು ಅಸ್ತ್ರವಾಗಿ ಬಳಸುತ್ತಿದ್ದು, ಇದು ಆ ಪಕ್ಷದ ಟೂಲ್‌ಕಿಟ್‌ನ ಭಾಗ ಎಂದು ಬಿಜೆಪಿಯ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಆರೋಪಿಸಿದರು.

‘ನೇತಾ ಮತ್ತು ನೀತಿ ಎರಡೂ ಇಲ್ಲದ ಕಾಂಗ್ರೆಸ್‌ ಸೋಲುವ ಭೀತಿಯಿಂದ ಮೋದಿಯವರನ್ನು ಗುರಿಯಾಗಿಸಿ ದ್ವೇಷದಿಂದ ಕೂಡಿದ ಕೀಳು ಮಟ್ಟದ ಹೇಳಿಕೆಗಳನ್ನು ಕೊಡಿಸುತ್ತಿದೆ. ಇದಕ್ಕೆ ಸಚಿವ ಶಿವರಾಜ್‌ ತಂಗಡಗಿ ಅವರ ಹೇಳಿಕೆಯೇ ನಿದರ್ಶನ’ ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ರಾಹುಲ್‌ ಗಾಂಧಿ ಮೊಹಬ್ಬತ್‌ ಕಿ ದುಖಾನ್ ಎನ್ನುತ್ತಾರೆ. ವಾಸ್ತವದಲ್ಲಿ ಅಸಹಿಷ್ಣುತೆ ಮತ್ತು ದ್ವೇಷವೇ ಕಾಂಗ್ರೆಸ್‌ನ ನೀತಿಯಾಗಿದೆ. ಮಲ್ಲಿಕಾರ್ಜುನ ಖರ್ಗೆ ಮೋದಿ ಅವರನ್ನು ವಿಷ ಸರ್ಪ ಎಂದು ಹೇಳಿದರೆ, ಅವರ ಪುತ್ರ ಪ್ರಿಯಾಂಕ್‌ ಖರ್ಗೆ ಚೋರ್‌ ಗುರು ಚಾಂಡಾಲ್‌ ಶಿಷ್ಯ ಎಂದಿದ್ದಾರೆ. ಸಿದ್ದರಾಮಯ್ಯ ಬಿಜೆಪಿಯವರ ಮನೆ ಹಾಳಾಗಿ ಹೋಗಲಿ ಎಂದಿದ್ದಾರೆ’ ಎಂದು ರವಿ ತಿಳಿಸಿದರು.

ADVERTISEMENT

‘ಕಾಂಗ್ರೆಸ್‌ ಪಕ್ಷಕ್ಕೆ ‘ನೋ ವಿಷನ್, ನೋ ಮಿಷನ್‌’. ಕರ್ನಾಟಕ ಕಾಂಗ್ರೆಸ್‌ ಬರೀ ‘ಪರ್ಸೆಂಟೇಜ್‌’ಗೆ ಸೀಮಿತವಾಗಿದೆ. ಪ್ರಧಾನಿ ಮೋದಿಯವರು ವಿಷನ್‌ ಮತ್ತು ಮಿಷನ್‌ ಮೂಲಕ ದೇಶದಲ್ಲಿ ಆಮೂಲಾಗ್ರ ಪರಿವರ್ತನೆ ತರುತ್ತಿದ್ದಾರೆ’ ಎಂದರು.

ಶ್ವೇತಪತ್ರ ಹೊರಡಿಸಿ: ಕೇಂದ್ರದಿಂದ ರಾಜ್ಯಕ್ಕೆ 2004ರಿಂದ 2014ರವರೆಗೆ ಮತ್ತು 2014ರಿಂದ 2023ರವರೆಗೆ ಬಂದಿರುವ ತೆರಿಗೆ ಪಾಲಿನ ಮೊತ್ತ ಮತ್ತು ವಿಶೇಷ ಅನುದಾನಗಳ ಬಗ್ಗೆ ರಾಜ್ಯ ಸರ್ಕಾರ ಶ್ವೇತಪತ್ರ ಹೊರಡಿಸಬೇಕು ಎಂದು ಅವರು ಒತ್ತಾಯಿಸಿದರು.

ಸಿದ್ದರಾಮಯ್ಯ ಮತ್ತು ಕೃಷ್ಣಬೈರೇಗೌಡ ನಿರಂತರ ಸುಳ್ಳುಗಳನ್ನು ಹೇಳುವ ಮೂಲಕ ಕೇಂದ್ರ ಸರ್ಕಾರ ಕರ್ನಾಟಕ ವಿರೋಧಿ ಎಂಬುದನ್ನು ದುರುದ್ದೇಶದಿಂದ ಬಿಂಬಿಸುತ್ತಿದ್ದಾರೆ ಎಂದರು.

ಕೃಷ್ಣ ಬೈರೇಗೌಡ ಅವರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರನ್ನು ಬಹಿರಂಗ ಚರ್ಚೆಗೆ ಕರೆದಿದ್ದಾರೆ. ನಿರ್ಮಲಾ ಸೀತಾರಾಮನ್‌ ಅವರು ಸಂಸತ್ತು ಮತ್ತು ರಾಜ್ಯಸಭೆಯಲ್ಲೇ ಈ ಬಗ್ಗೆ ಸುದೀರ್ಘ ಉತ್ತರ ನೀಡಿದ್ದಾರೆ. ರಾಜ್ಯಸಭೆಯಲ್ಲಿ ಹಾಜರಿದ್ದ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಜೈರಾಂ ರಮೇಶ್‌ ಅವರು ಕೇಂದ್ರದ ಮಾಹಿತಿಯ ಬಗ್ಗೆ ಏಕೆ ತಕರಾರು ಎತ್ತಲಿಲ್ಲ. ಸುಮ್ಮನೇ ಏಕೆ ಕುಳಿತಿದ್ದರು. ಒಂದು ವೇಳೆ ನಿರ್ಮಲಾ ಸೀತಾರಾಮನ್ ಅವರು ತಪ್ಪು ಮಾಹಿತಿ ನೀಡಿದ್ದರೆ ಹಕ್ಕುಚ್ಯುತಿ ಮಂಡಿಸುವುದಕ್ಕೂ ಅವಕಾಶವಿತ್ತಲ್ಲವೇ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.